ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಮೂಲಕವೇ ಗೆಲುವು ಪಡೆಯುತ್ತೇವೆ: ಜಗದೀಶ ಶೆಟ್ಟರ್‌

Published 4 ಏಪ್ರಿಲ್ 2024, 10:48 IST
Last Updated 4 ಏಪ್ರಿಲ್ 2024, 10:48 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಸೇರಿಕೊಂಡೇ ಪ್ರಚಾರ ನಡೆಸುತ್ತಿದ್ದೇವೆ. ನಾವು ಪ್ರವಾಸಕ್ಕೆ ಹೋದಲ್ಲಿ ಜೆಡಿಎಸ್‌ ಮುಖಂಡರು ಬೆಂಬಲ ಕೊಡುತ್ತಿದ್ದಾರೆ. ಇಬ್ಬರೂ ಸೇರಿಕೊಂಡೇ ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುತ್ತೇವೆ’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರೊಂದಿಗೆ ಬುಧವಾರ ಸಮನ್ವಯ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಈ ಹಿಂದೆ ಜನತಾ ಪಕ್ಷದಲ್ಲಿದ್ದವರು ಜಾತ್ಯತೀತ ಜನತಾ ದಳ(ಜೆಡಿಎಸ್‌) ಕಟ್ಟಿದ್ದರು. ಜೆಡಿಎಸ್‌ಗೆ ಕಾಂಗ್ರೆಸ್‌ ವಿರೋಧಿ ನಿಲುವು ಹಿಂದಿನಿಂದಲೂ ಇದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಇದೇ ಮೊದಲೇನಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಈಗ ಬಿಜೆಪಿಯ ರಾಷ್ಟ್ರೀಯ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದೊಂದು ಸಹಜ ಮೈತ್ರಿ’ ಎಂದರು.

‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಹೊಂದಿದ್ದಾರೆ. ರಾಜ್ಯಮಟ್ಟದಲ್ಲಿ ಈಗಾಗಲೇ ಬಿಜೆಪಿ–ಜೆಡಿಎಸ್‌ ಸಮನ್ವಯ ಸಭೆ ನಡೆದಿದೆ. ಈಗ ಜಿಲ್ಲಾಮಟ್ಟದಲ್ಲೂ ನಡೆಸಿದ್ದೇವೆ. ಮೋದಿ ಅವರನ್ನು ಮೂರನೇ ಸಲ ಪ್ರಧಾನಿ ಮಾಡಲು ಜೆಡಿಎಸ್‌ನವರೂ ಸಹಕಾರ ಕೊಡುತ್ತಿದ್ದಾರೆ’ ಎಂದರು.

‘ರಾಮದುರ್ಗದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಕಾಂಗ್ರೆಸ್‌ಗೆ ಹೋಗುತ್ತಾರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್‌, ‘ಏಪ್ರಿಲ್‌ 5ರಂದು ರಾಮದುರ್ಗಕ್ಕೆ ಹೋಗುತ್ತಿದ್ದೇನೆ. ಈ ಸಂಬಂಧ ಕರೆ ಮಾಡಿ ಅವರಿಗೆ ಮಾಹಿತಿ ನೀಡಿದ್ದೇನೆ. ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಿಕ್ಕರೇವಣ್ಣ ಅವರೊಂದಿಗೂ ಮಾತನಾಡಿದ್ದೇನೆ. ಮಹಾದೇವಪ್ಪ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದರು.

‘ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಭದ್ರ ನೆಲೆ ಇಲ್ಲ. ಹೀಗಿರುವಾಗ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಬಿಜೆಪಿಗೇನು ಲಾಭ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಪಕ್ಷಕ್ಕೆ ಶಕ್ತಿ ಇಲ್ಲ ಎಂಬ ಮಾತನ್ನು ನಾನು ನಂಬುವುದಿಲ್ಲ. ಪ್ರತಿ ಕ್ಷೇತ್ರದಲ್ಲೂ ಆಯಾ ಪಕ್ಷಕ್ಕೆ ಶಕ್ತಿ ಇರುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಅವರು ಗೆಲ್ಲದಿರಬಹುದು. ಆದರೆ, ಹೆಚ್ಚಿನ ಮತ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು ಜತೆಗೆ ಚುನಾವಣೆ ಎದುರಿಸಿ ಗೆಲುವಿನ ಬಾವುಟ ಹಾರಿಸುತ್ತೇವೆ’ ಎಂದರು.

‘ರಾಷ್ಟ್ರೀಯ ವಿಚಾರಧಾರೆ ಆಧರಿಸಿ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಇದು ಜಾತಿ ಮೀರಿ ನಡೆಯುವ ಚುನಾವಣೆ. ಇಲ್ಲಿ ಜಾತಿಯ ವಿಚಾರ ಸದ್ದು ಮಾಡಲ್ಲ. ‘ಕಾಸ್ಟ್‌ ಪ್ಲೇ ಕಾರ್ಡ್‌’ ಪರಿಣಾಮ ಬೀರುವುದಿಲ್ಲ. ಇಂದು ಹೊಲದಲ್ಲಿ ಕೆಲಸ ಮಾಡುವ ರೈತ ಮಹಿಳೆಯರು ದೇಶಕ್ಕೆ ಮೋದಿ ಅವರಂಥ ಪ್ರಧಾನಿಯೇ ಬೇಕು ಎನ್ನುತ್ತಿದ್ದಾರೆ’ ಎಂದರು.

‘ಬೆಳಗಾವಿಗೆ ಪ್ರಚಾರಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ ಠಾಕ್ರೆ ಅವರನ್ನು ಕೋರಿದ್ದೇನೆ. ತಮ್ಮ ವೇಳಾಪಟ್ಟಿ ಆಧರಿಸಿ, ಅವರು ಪ್ರಚಾರಕ್ಕೆ ಬರಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನೀವು ಎಂಇಎಸ್ ಜತೆಗೆ ಮಾತುಕತೆ ಮಾಡಿದ್ದೀರಾ’ ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ ಅವರೊಟ್ಟಿಗೆ ಸಹ ಮಾತನಾಡುತ್ತೇನೆ. ಅವರು ನಮಗೆ ಸಹಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಜೆಡಿಎಸ್‌ ಜಿಲ್ಲಾ ಘಟಕದ ಶಂಕರ ಮಾಡಲಗಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಪಕ್ಷದ ವಕ್ತಾರ ಎಂ.ಬಿ.ಝಿರಲಿ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗಾಯತ್ರಿ ಸುತಾರ, ಡಾ.ವಿಶ್ವನಾಥ ಪಾಟೀಲ, ನಾಸೀರ್‌ ಬಾಗವಾನ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT