ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕೊಟ್ಟಿದ್ದು ಚೊಂಬು: ಯತೀಂದ್ರ ಸಿದ್ದರಾಮಯ್ಯ

ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ ಟೀಕೆ
Published 2 ಮೇ 2024, 14:19 IST
Last Updated 2 ಮೇ 2024, 14:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿಯವರು ಕಳೆದ ಹತ್ತು ವರ್ಷ ಜನರಿಗೆ ಕೊಟ್ಟಿದ್ದು ಚೊಂಬು. ಆದರೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ತಮ್ಮ ಮನೆಯ ಆರ್ಥಿಕ ಹೊರೆ ನಿಭಾಯಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

‌ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 78ರ ನೇಕಾರ ನಗರ, ಹೂಗಾರ ಪ್ಲಾಟ್, ಈಶ್ವರನಗರದಲ್ಲಿ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

‘ಪಡಿತರ ಅಕ್ಕಿ ನೀಡುವ ಅನ್ನಭಾಗ್ಯ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಉಚಿತ ವಿದ್ಯುತ್ ಪೂರೈಕೆ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ವರ್ಷಕ್ಕೆ ₹1.20 ಲಕ್ಷ ಪ್ರತಿ ಮಹಿಳೆಗೆ ಸಿಗಲಿದೆ’ ಎಂದರು.

‘ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳನ್ನು ಆರಂಭಿಸಿದ್ದು ಕಾಂಗ್ರೆಸ್. ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಟ್ಟವರು ನಾವು. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಗ್ಯಾರಂಟಿ ಯೋಜನೆಗಳು ಬಡವರು ಜೀವನ ನಡೆಸಲು ಆಸರೆಯಾಗಿವೆ. ಹಾಗಾಗಿ, ವಿನೋದ ಅಸೂಟಿ ಅವರನ್ನು ಬೆಂಬಲಿಸುವ ಮೂಲಕ  ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

‘ಮೋದಿ ಅವರು ಅಚ್ಚೇ ದಿನ್​ ಬರುತ್ತದೆ ಎಂದು ಹೇಳಿದ್ದರು. ಅದನ್ನು ತಂದು ಕೊಟ್ಟಿದ್ದೇವೆ ಎಂದು ಹೇಳುವ  ಧೈರ್ಯ ಅವರಿಗಿಲ್ಲ. ಮೋದಿ, ಅಮಿತ್‌ ಶಾ ಅವರು ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವುದಕ್ಕೂ ಹಿಂದೆ ಮುಂದೆ ನೋಡಿತು. ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಹೊಸ ಸರ್ಕಾರ ಬರಬೇಕು. ಅದಕ್ಕಾಗಿ ಕಾಂಗ್ರೆಸ್ ಅ​ನ್ನು ಬೆಂಬಲಿಸಬೇಕು’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವ ನೈತಿಕತೆ ಅಮಿತ್‌ ಶಾ ಅವರಿಗೆ ಇಲ್ಲ. ಮಣಿಪುರ ಹೊತ್ತಿ ಉರಿಯುತ್ತಿದೆ. ಅಲ್ಲಿ ಅವರದ್ದೇ ಸರ್ಕಾರ ಇದೆ. ಆ ಬಗ್ಗೆ ಅವರು ಮಾತನಾಡಲಿ’ ಎಂದು ಹರಿಹಾಯ್ದರು.

‘ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನಾವು ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಇದನ್ನು ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರು, ಕಾಂಗ್ರೆಸ್ ಮುಖಂಡರಾದ ಶಫಿ ಮುದ್ದೇಬಿಹಾಳ, ಮಜರ್ ಖಾನ್, ಪಾಲಿಕೆ ಸದಸ್ಯರಾದ ಶಿವಗಂಗಮ್ಮ ಮಾನಶೆಟ್ಟರ್, ಸೂರಿ-ಗಿರಿ ಮಾನಶೆಟ್ಟರ್, ರವಿಕುಮಾರ ಮಾನಶೆಟ್ಟರ್, ಸತೀಶ ಮಾನಶೆಟ್ಟರ್, ನರಸಿಂಹ ಜಾಲಿಹೊಳಿ, ಬಾಗಣ್ಣ ಬಿರಾದಾರ, ರಾಜಕುಮಾರ್ ಕಾಮರೆಡ್ಡಿ, ರಾಕೇಶ ಪಲ್ಲಾಟೆ, ಪ್ರದೀಪ ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT