ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಮಂಜುನಾಥ್‌ ಸ್ಪರ್ಧೆಯೇ ಜೆಡಿಎಸ್‌ನ ಮೊದಲ ಆತ್ಮಹತ್ಯೆ ಪ್ರಯತ್ನ: ಡಿಕೆಶಿ

Published 19 ಮಾರ್ಚ್ 2024, 15:28 IST
Last Updated 19 ಮಾರ್ಚ್ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವೇಗೌಡರ ಅಳಿಯ (ಡಾ.ಸಿ.ಎನ್‌. ಮಂಜುನಾಥ್‌) ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಲು ಅವಕಾಶ ನೀಡಿರುವುದು ಜೆಡಿಎಸ್‌ನ ಮೊದಲ ಆತ್ಮಹತ್ಯೆ ಪ್ರಯತ್ನ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.

‘ಎರಡು ಸ್ಥಾನಕ್ಕಾಗಿ ಮೈತ್ರಿ ಮಾಡಿಕೊಳ್ಳಬೇಕಿತ್ತೇ ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಪಕ್ಷಕ್ಕೆ ಬಹಳ ಮುಜುಗರವಾಗಿದೆ. ಜೆಡಿಎಸ್‌ಗೆ ಶಾಸಕರಿದ್ದಾರೆ, ಸಂಸದರಿದ್ದಾರೆ. ಅವರ ಶಕ್ತಿ ಆ ಪಕ್ಷಕ್ಕೆ ಬೇಕಾಗಿದೆ. ಆದರೆ, ಕರ್ನಾಟಕ ಮಾತ್ರವಲ್ಲ; ಬೇರೆ ರಾಜ್ಯಗಳಲ್ಲೂ ಸೀಟು ಹಂಚಿಕೆಎ ವಿಷಯದಲ್ಲಿ ಬಿಜೆಪಿ ಇದೇ ರೀತಿ ಮಾಡಿಕೊಂಡು ಬಂದಿದೆ. ಇದು ಅವರ ಪಕ್ಷಗಳ ಆಂತರಿಕ ವಿಚಾರ. ಆ ಬಗ್ಗೆ ಅವರೇ ತೀರ್ಮಾನ ಮಾಡಿಕೊಳ್ಳಲಿ. ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದರು.

‘ಬಿಜೆಪಿ ಸಂಸದ ಸದಾನಂದಗೌಡರನ್ನು ಕಾಂಗ್ರೆಸ್‌ಗೆ  ಸೇರಿಸಿಕೊಳ್ಳಲು ಆಪರೇಶನ್ ಮಾಡಲಾಗುತ್ತಿದೆ’ ಎಂಬ ಚರ್ಚೆಯ ಬಗ್ಗೆ ಕೇಳಿದಾಗ, ‘ಒಂದು ಪಕ್ಷದಿಂದ ಟಿಕೆಟ್ ವಂಚಿತರಾದವರು ಇನ್ನೊಂದು ಪಕ್ಷದಿಂದ ಸ್ಪರ್ಧೆ ಮಾಡುವುದು ರಾಜಕೀಯದಲ್ಲಿ ಸಹಜ. ಆಯನೂರು ಮಂಜುನಾಥ್‌ಗೆ ಬಿಜೆಪಿ ಟಿಕೆಟ್ ಸಿಗದಿದ್ದಾಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಮೂಡಿಗೆರೆಯಲ್ಲಿ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ಸಿಗದಿದ್ದಾಗ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ನಮ್ಮಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡದಿದ್ದಾಗ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು. ಶೆಟ್ಟರ್, ಸವದಿಗೆ ಬಿಜೆಪಿಯಲ್ಲಿ ಅವಕಾಶ ಸಿಗದಿದ್ದಾಗ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಿಸಿದ್ದೇವೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.

‘ಸದಾನಂದ ಗೌಡರ ಸೇರ್ಪಡೆ ಸಾಧ್ಯತೆ ಇದೆಯೇ’ ಎಂದು ಕೇಳಿದಾಗ, ‘ನಮ್ಮ ತಂತ್ರಗಾರಿಕೆಯ ಗುಟ್ಟನ್ನು  ನಾವು ಬಿಟ್ಟು ಕೊಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT