ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಈಶ್ವರಪ್ಪ ಅವರದ್ದು ಹುಸಿ ಬಂಡಾಯ– ಆಯನೂರು ಮಂಜುನಾಥ್

Published 24 ಮಾರ್ಚ್ 2024, 10:40 IST
Last Updated 24 ಮಾರ್ಚ್ 2024, 10:40 IST
ಅಕ್ಷರ ಗಾತ್ರ

ಶಿವಮೊಗ್ಗ: ಹಿಂದುಳಿದವರ ಮತ ವಿಭಜನೆ ಆದರೆ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಸುಲಭವಾಗಲಿದೆ ಎಂಬ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಆಗಿ ಯಡಿಯೂರಪ್ಪ ಅವರೇ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಗೀತಾ ಶಿವರಾಜಕುಮಾರ್ ಡಮ್ಮಿ ಅಭ್ಯರ್ಥಿ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಆಯನೂರು ಮಂಜುನಾಥ್, ಈಶ್ವರಪ್ಪ ಅವರದ್ದು ಹುಸಿ ಬಂಡಾಯ. ಬಿಜೆಪಿಯಲ್ಲಿರುವ ನನ್ನ ಹಳೆಯ ಸ್ನೇಹಿತರು ಹೇಳುವಂತೆ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆಲ್ಲಿಸಲು ಯಡಿಯೂರಪ್ಪ-ಈಶ್ವರಪ್ಪ ನಡುವೆ ಒಳ ಒಪ್ಪಂದ ಆಗಿದೆ. ಅದರಂತೆ ಚುನಾವಣೆ ಮುಗಿದ ನಂತರ ಕೆ.ಎಸ್.ಈಶ್ವರಪ್ಪ ರಾಜ್ಯಪಾಲ ಆಗಿ ನೇಮಕಗೊಳ್ಳಲಿದ್ದಾರೆ. ಅವರ ಪುತ್ರ ಕೆ.ಈ.ಕಾಂತೇಶ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಗುತ್ತಿದೆ ಎಂದರು.

ಈಶ್ವರಪ್ಪ ದೊಡ್ಡ ಕಲಾವಿದ. ನಾಲಿಗೆಗೆ ಬಣ್ಣ ಹಚ್ಚಿಕೊಂಡಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸುವಷ್ಟು ಧೈರ್ಯ ಅವರಿಗಿಲ್ಲ. ಆದರೆ ಯಡಿಯೂರಪ್ಪ, ಬಿಜೆಪಿ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಪರವಾಗಿರುವ ಹಿಂದುಳಿದವರು, ದಲಿತರ ಮತಗಳನ್ನು ವಿಭಜಿಸುವ ತಂತ್ರ ಇದರಲ್ಲಿ ಅಡಗಿದೆ ಎಂದರು.

ಶಿವಮೊಗ್ಗ ಕ್ಷೇತ್ರದಲ್ಲಿ ಬಂಗಾರಪ್ಪ ಅವರ ಸೋಲಿನ ಸೇಡಿಗೆ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಅವರನ್ನು ಮತದಾರರು ಬೆಂಬಲಿಸಲಿದ್ದಾರೆ. ಈಶ್ವರಪ್ಪ – ಬಿಜೆಪಿಯ ತಂತ್ರ ಫಲಿಸುವುದಿಲ್ಲ. ಈಶ್ವರಪ್ಪ ಹೇಳುವಂತೆ ದಿಟ್ಟ ಹೋರಾಟಗಾರ ಬಂಗಾರಪ್ಪ ನವರ ಮಕ್ಕಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಷ್ಟು ದುರ್ಬಲರಲ್ಲ ಎಂದ ಆಯನೂರು ಮಂಜುನಾಥ್, ಈಶ್ವರಪ್ಪ ಅವರೇ ನೀವೇ ಡಮ್ಮಿ ಕ್ಯಾಂಡಿಡೇಟ್ ಎಂದು ಕಿಚಾಯಿಸಿದರು.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಬಿ.ವೈ.ರಾಘವೇಂದ್ರ ಅವರನ್ನು ಲಿಂಗಾಯಿತರು ಬೆಂಬಲಿಸಬೇಕು ಎಂದು ಹೇಳಿದ್ದು ಕಾಂಗ್ರೆಸ್ ನ ಚುನಾವಣಾ ತಂತ್ರದ ಭಾಗವಾಗಿದೆ. ಇದರಿಂದಾಗಿ ಅಹಿಂದ ಮತಗಳು ಕಾಂಗ್ರೆಸ್ ಗೆ ಹರಿದು ಬರಲಿವೆ. ಗೀತಾ ಶಿವರಾಜಕುಮಾರ್ ಗೆಲುವು ನಿಶ್ಚಿತ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT