ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಸುರಕ್ಷಿತ, ವಿಕಸಿತ ಭಾರತವೇ ನಮ್ಮ ಕಾರ್ಯಸೂಚಿ: ಸುನಿಲ್‌ಕುಮಾರ್‌

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‘ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಲವು ವಿಷಯಗಳ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದೆ. ಕೇವಲ ಗ್ಯಾರಂಟಿಗಳನ್ನು ಪ್ರಸ್ತಾಪಿಸುತ್ತಿದೆ’ ಎಂದು ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಉಸ್ತುವಾರಿ ಸಮಿತಿ ಸಂಚಾಲಕ, ಶಾಸಕ ವಿ.ಸುನಿಲ್‌ಕುಮಾರ್‌ ಟೀಕಿಸಿದರು. ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ

ಇಲ್ಲಿ 28 ಸ್ಥಾನಗಳನ್ನು ಗೆಲ್ಲುವುದಕ್ಕೆ ಅಮಿತ್‌ ಶಾ ಗುರಿ ನೀಡಿದ್ದಾರೆ. ನಿಮ್ಮಲ್ಲಿರುವ ಬಣ ರಾಜಕೀಯ ಮತ್ತು ಕಿತ್ತಾಟದಿಂದ ಈ ಗುರಿ ಮುಟ್ಟಲು ಸಾಧ್ಯವೇ?

ರಾಜ್ಯದಲ್ಲಿ ಪಕ್ಷ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಿದೆ. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಇದರಿಂದಾಗಿ ಸ್ಪರ್ಧೆಗೆ ಪೈಪೋಟಿ ಹೆಚ್ಚಾಗಿದೆ. ಟಿಕೆಟ್‌ ಸಿಗದಿದ್ದಾಗ ಅತೃಪ್ತಿ ಸಹಜ. ಈ ಬಾರಿ ಅಸಮಾಧಾನದ ಪ್ರಮಾಣ ಜಾಸ್ತಿ ಆಗಿದೆ. ಅಸಮಾಧಾನಿತರನ್ನು ಸಮಾಧಾನ ಮಾಡುವ ಮತ್ತು ಎಲ್ಲರನ್ನೂ ಸಂಘಟನೆಯೊಳಗೆ ಜೋಡಿಸುವ ಒಳ ಸಾಮರ್ಥ್ಯ ಪಕ್ಷದಲ್ಲಿ ಸದಾ ಇದ್ದೇ ಇದೆ. ಮೊದಲ ಶ್ರೇಣಿಯ ನಾಯಕರಲ್ಲಿ ಇಂತಹ ಅಸಮಾಧಾನಗಳಿದ್ದರೂ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ. 28 ಸ್ಥಾನಗಳ ಗುರಿ ತಲುಪಲು ಎಲ್ಲ ತಂತ್ರಗಾರಿಕೆ ಮಾಡುತ್ತೇವೆ.

ಪ್ರ

ಯಾವ ಅಂಶ ಮುಂದಿಟ್ಟುಕೊಂಡು ಮತ ಕೇಳುತ್ತೀರಿ?

ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತ್ತು ವಿಕಸಿತ ಭಾರತ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಭಾರತದ ಸುರಕ್ಷತೆ ಯಾವ ರೀತಿ ಉತ್ತಮವಾಯಿತು, ಸಾಂಸ್ಕೃತಿಕ ಭಾರತ ಯಾವ ರೀತಿ ವಿಕಸಿತ ಆಯಿತು ಎನ್ನುವುದನ್ನು ಹೇಳುತ್ತಿದ್ದೇವೆ. ಅಯೋಧ್ಯೆಯ ರಾಮಮಂದಿರದಿಂದ ಹಿಡಿದು ಅಂಜನಾದ್ರಿ ಬೆಟ್ಟದವರೆಗೆ ಸಾಂಸ್ಕೃತಿಕ ಭಾರತ ವಿಕಸಿತವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ವಿಶ್ವದ ಜನ ಭಾರತಕ್ಕೆ ಮನ್ನಣೆ ನೀಡುತ್ತಿದ್ದಾರೆ. ಅದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.

ಪ್ರ

ಜೆಡಿಎಸ್‌ ಜತೆ ಹೊಂದಾಣಿಕೆ ಬೇಡ ಎಂಬ ಅಭಿಪ್ರಾಯ ಸ್ಥಳೀಯ ಮಟ್ಟದಲ್ಲಿ ಇದ್ದರೂ ವರಿಷ್ಠರು ಯಾವ ಕಾರಣಕ್ಕೆ ಮೈತ್ರಿಗೆ ಹಸಿರು ನಿಶಾನೆ ನೀಡಿದರು?

ಕೇಂದ್ರ ನಾಯಕರು ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಾದರೆ, ದೇಶ ಮತ್ತು ಪಕ್ಷದ ಒಳಿತನ್ನು ಗಮನದಲ್ಲಿ ಇಟ್ಟುಕೊಂಡೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾಗಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡರೆ ದೇಶಕ್ಕೂ, ರಾಜ್ಯದ ಜನತೆಗೂ ಒಳಿತಾಗುತ್ತದೆ ಎಂಬ ಕಾರಣಕ್ಕೆ ವರಿಷ್ಠರು ಈ ನಿರ್ಣಯ ತೆಗೆದುಕೊಂಡಿರಬಹುದು. ನಾವು ನಿರಂತರವಾಗಿ, ಸ್ವತಂತ್ರವಾಗಿ ಪಕ್ಷವನ್ನು ಬೆಳೆಸುತ್ತಾ, ಕಾಂಗ್ರೆಸ್‌– ಜೆಡಿಎಸ್‌ ಅನ್ನು ಸಮಾನವಾಗಿ ವಿರೋಧಿಸಿಕೊಂಡು ಬಂದಿದ್ದೇವೆ. ಹೀಗಾಗಿ, ತಕ್ಷಣದಲ್ಲಿ ಸಮಾಧಾನ ಆಗದಿದ್ದರೂ, ಎನ್‌ಡಿಎ ಬಲಗೊಳಿಸಬೇಕು ಎಂಬ ವರಿಷ್ಠರ ನಿಲುವಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ.

ಪ್ರ

ತಳಮಟ್ಟದಲ್ಲಿ ಜೆಡಿಎಸ್‌ ಕಾರ್ಯಕರ್ತರ ಜತೆ ನಿಮ್ಮ ಕಾರ್ಯಕರ್ತರು ಸಮನ್ವಯ ಸಾಧಿಸಲು ಏನು ಮಾಡುತ್ತೀರಿ?

ಬೂತ್‌ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಸಮನ್ವಯ ಸಾಧಿಸುವ ಕೆಲಸ ನಡೆದಿದೆ. ಗ್ರಾಮ ಮಟ್ಟದಲ್ಲೂ ಸಮನ್ವಯ ಕಾರ್ಯ ನಡೆದಿದೆ. ಎಲ್ಲ ಕ್ಷೇತ್ರಗಳಲ್ಲೂ ಎರಡೂ ಪಕ್ಷಗಳ ಪ್ರಮುಖರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ. ಮೋದಿಯವರ ಸಮಾವೇಶದಲ್ಲಿ ಜೆಡಿಎಸ್‌ ಹಿರಿಯ ನಾಯಕರು ಭಾಗವಹಿಸುತ್ತಾರೆ.

ಪ್ರ

ಕಾಂಗ್ರೆಸ್‌ ಗ್ಯಾರಂಟಿ ಎದುರು ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದೀರಿ. ಯಾರ ಗ್ಯಾರಂಟಿ ಮತವಾಗಿ ಪರಿವರ್ತನೆಯಾಗಲಿದೆ?

ಮೋದಿ ಸರ್ಕಾರ ಎಲ್ಲ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳನ್ನೇ ಜಾರಿ ಮಾಡಿದೆ. ಮನೆ ಇಲ್ಲದವರಿಗೆ ಮನೆ, ಶೌಚಾಲಯ, ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು, ಕಟ್ಟಿಗೆ ಬಳಸುತ್ತಿದ್ದ ಬಡವರಿಗೆ ಅಡುಗೆ ಅನಿಲ, ಆಯುಷ್ಮಾನ್‌ ಭಾರತ್‌ ಮೂಲಕ ₹5 ಲಕ್ಷದವರೆಗೆ ಆರೋಗ್ಯ ವಿಮೆ. ಇವು ಅರ್ಹ ಫಲಾನುಭವಿಗಳನ್ನು ತಲುಪುತ್ತಿವೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುವುದಕ್ಕಾಗಿ ಹಲವು ಉತ್ತಮ ಯೋಜನೆಗಳನ್ನು ರದ್ದು ಮಾಡಿದೆ. ಅಲ್ಲದೇ, 10 ತಿಂಗಳಲ್ಲಿ ಉಳಿದ ಯಾವುದೇ ಅಭಿವೃದ್ಧಿಗೂ ಹಣ ಕೊಟ್ಟಿಲ್ಲ. ಮಹಿಳೆಯರಿಗೆ ₹2,000 ಕೊಟ್ಟು, ಪುರುಷರಿಂದ ₹4500 ಕಿತ್ತುಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳ ಪ್ರಚಾರಕ್ಕಾಗಿ ₹100 ಕೋಟಿ ಖರ್ಚು ಮಾಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT