ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ‘ಗ್ಯಾರಂಟಿ’ಗಳಿಗೆ ರಾಜ್ಯದ ಹಣ ಹರಿವು: ಕೃಷ್ಣ ಬೈರೇಗೌಡ

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮಂಡ್ಯ: ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಒಂದು ರೂಪಾಯಿ ಹಣ ಪಡೆದಿಲ್ಲ, ಸ್ವಂತ ಶಕ್ತಿಯ ಮೇಲೆ ನಮ್ಮ ಸರ್ಕಾರ ನಡೆಯುತ್ತಿದೆ. ಆದರೆ ಪ್ರಧಾನ ಮಂತ್ರಿ ಹೆಸರಿನ ಮೋದಿ ಗ್ಯಾರಂಟಿಗಳಿಗೆ ರಾಜ್ಯದ ಅಪಾರ ಹಣ ಹರಿದು ಹೋಗುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಶನಿವಾರ ಹೇಳಿದರು.

ರೈತಸಂಘ, ದಸಂಸ, ಜನಶಕ್ತಿ ಸಂಘಟನೆಗಳ ವತಿಯಿಂದ ನಗರದಲ್ಲಿ ನಡೆದ ‘ಕರ್ನಾಟಕಕ್ಕೆ ತೆರಿಗೆ ವಂಚನೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪಿಎಂ ಆವಾಸ್‌ ಯೋಜನೆ, ಪಿಎಂ ಫಸಲ್‌ ಬಿಮಾ ಯೋಜನೆ, ಜಲಜೀವನ ಮಿಷನ್‌ ಸೇರಿದಂತೆ ಕೇಂದ್ರದ ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರ ಶೇ 60ರಷ್ಟು ಅನುದಾನ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ತಮ್ಮ ಯೋಜನೆ ಎಂದು ಹೆಸರು ಪಡೆಯುತ್ತಿದೆ. ರಾಜ್ಯದಲ್ಲಿ ಶೇ 77ರಷ್ಟು ಸಂಪನ್ಮೂಲ ಕ್ರೋಡೀಕರಣವಾಗುತ್ತಿದ್ದು, ಇಡೀ ದೇಶದಲ್ಲಿ ಸ್ವಂತ ಶಕ್ತಿಯಿಂದ ನಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ’ ಎಂದರು.

‘ಜಲಜೀವನ ಮಿಷನ್‌ ಯೋಜನೆಯಡಿ ನೀರು ಪೂರೈಸುವವರು ಯಾರೆಂದರೆ ರಾಜ್ಯದ ಕಡೆ ಕೈತೋರಿಸುತ್ತಾರೆ. ತೆರಿಗೆಯ ಪಾಲು ಕೇಳಿದರೆ ಅವಮಾನ ಮಾಡುತ್ತಾರೆ. ದೇಶ ಒಡೆಯುವ ಪ್ರಯತ್ನ ಎಂದು ಆರೋಪಿಸುತ್ತಾರೆ. ಅತೀ ಹೆಚ್ಚು ತೆರಿಗೆ ನೀಡುತ್ತಿರುವ ನಾವು ದೇಶ ಕಟ್ಟುತ್ತಿದ್ದೇವೆ’ ಎಂದರು.

‘15ನೇ ಹಣಕಾಸು ಆಯೋಗದ ನಿರ್ಧಾರದಿಂದಾಗಿ ರಾಜ್ಯಕ್ಕೆ ಶೇ 23ರಷ್ಟು ಅನುದಾನ ನಷ್ಟವಾಗಿದೆ. ಅದನ್ನು ಸರಿದೂಗಿಸಲು ವಿಶೇಷ ಅನುದಾನವಾಗಿ ₹ 11,495 ಕೋಟಿ ನೀಡುವಂತೆ ಆಯೋಗವೇ ಶಿಫಾರಸು ಮಾಡಿದೆ. ಆದರೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ. ಪುಡಿಗಾಸು ಕೊಡುವುದಕ್ಕೂ ನಿರಾಕರಿಸಿ, ಕರ್ನಾಟಕವನ್ನು ಫುಟ್‌ಬಾಲ್‌ನಂತೆ ಒದೆಯುತ್ತಿದೆ’ ಎಂದರು.

‘ಎನ್‌ಡಿಆರ್‌ಎಫ್‌ ನಿಯಮಾನುಸಾರ ಬರ ಘೋಷಣೆಗೆ ಕರ್ನಾಟಕದ ಮಾದರಿ ಅನುಸರಿಸಬೇಕು ಎಂದು ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಗೃಹ ಸಚಿವರು ತಡವಾಗಿ ದಾಖಲೆ ಕೊಟ್ಟಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಪ್ರತಿ ಹಂತದಲ್ಲೂ ವಂಚನೆ ಮಾಡುತ್ತಿರುವ ಸರ್ಕಾರಕ್ಕೆ ಕರ್ನಾಟಕದ ಮೇಲೆ ಏಕೆ ದ್ವೇಷ’ ಎಂದು ಪ್ರಶ್ನಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಂ ₹ 1,300 ಕೋಟಿ ಹಣ ಘೋಷಿಸಿದ್ದರು. ಇಲ್ಲಿಯವರೆಗೂ ಒಂದು ರೂಪಾಯಿ ಬಂದಿಲ್ಲ. ಬಿಜೆಪಿ ಜೊತೆ ಸೇರಿರುವ ಎಚ್‌.ಡಿ.ಕುಮಾರಸ್ವಾಮಿ ಅವರೂ ತಪ್ಪು ಲೆಕ್ಕ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಈಗಲಾದರೂ ನಮ್ಮ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT