ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲಾನಂದನಾಥ ಶ್ರೀಗಳ ಫೋನ್‌ ಕದ್ದಾಲಿಕೆ ಹಿಂದೆ ಕಾಂಗ್ರೆಸ್‌ ಕೈವಾಡ: ಆರ್‌.ಅಶೋಕ

Published 12 ಏಪ್ರಿಲ್ 2024, 23:35 IST
Last Updated 12 ಏಪ್ರಿಲ್ 2024, 23:35 IST
ಅಕ್ಷರ ಗಾತ್ರ

ಮಂಡ್ಯ: ‘ನಿರ್ಮಲಾನಂದನಾಥ ಶ್ರೀಗಳ ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಕಾಂಗ್ರೆಸ್‌ ಕೈವಾಡವಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನ ಜಿ.ಪರಮೇಶ್ವರ ಅವರೇ ಗೃಹಸಚಿವರಾಗಿದ್ದರು, ಇದಕ್ಕೆ ಕಾಂಗ್ರೆಸ್‌ ಮುಖಂಡರೇ ಉತ್ತರ ಕೊಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಶುಕ್ರವಾರ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ನವರು ಆದಿಚುಂಚನಗಿರಿ ಮಠಕ್ಕೆ ಹೋದರೆ ಏನೂ ತೊಂದರೆ ಇಲ್ಲ, ನಾವು ಹೋದರೆ ಮಾತ್ರ ದೊಡ್ಡದಾಗಿ ಟೀಕಿಸುತ್ತಾರೆ. ಬಿಜೆಪಿಯೇ ಕುಮಾರಸ್ವಾಮಿ ಸರ್ಕಾರ ಬೀಳಿಸಿತೆಂದು ಆರೋಪಿಸುತ್ತಾರೆ.  ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದೇ ಸಿದ್ದರಾಮಯ್ಯ, ಸಿದ್ದವನದಲ್ಲಿ ಆದ ಯೋಜನೆಗಳ ಬಗ್ಗೆಯೂ ಮಾತನಾಡಲಿ’ ಎಂದರು.

‘ರಾಜ್ಯದಲ್ಲಿ ಲಿಂಗಾಯತರನ್ನು ಬಿಟ್ಟರೆ ಒಕ್ಕಲಿಗ ಸಮುದಾಯದವರೇ ಹೆಚ್ಚಿದ್ದರೂ ಸಮುದಾಯಕ್ಕೆ 6ನೇ ಸ್ಥಾನ ನೀಡಲಾಗಿದೆ. ಸಿದ್ದರಾಮಯ್ಯನವರೇ ಜಾತಿ ಗಣತಿಯಲ್ಲಿ ಇದನ್ನು ಬರೆಸಿದ್ದಾರೆ’ ಎಂದು ದೂರಿದರು.

‘ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ಭಯೋತ್ಪಾದಕರಿಗೆ ತಂಗುದಾಣವಾಗಿದೆ. ಸ್ಫೋಟವನ್ನು ಗೃಹಸಚಿವ ಪರಮೇಶ್ವರ್‌ ಅವರು ಸಾಮಾನ್ಯ ಪ್ರಕರಣವೆಂದಿದ್ದರು. ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿಗಳನ್ನು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಸಹೋದರರೆಂದಿದ್ದರು. ಡಿಕೆಶಿ, ಪರಮೇಶ್ವರ್‌ ಈಗ ಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

‘ಏ.14ರಂದು ಮೈಸೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅವರೂ ಪಾಲ್ಗೊಳ್ಳಲಿದ್ದಾರೆ. ಸ್ಟಾರ್‌ ಪ್ರಚಾರಕಿಯಾಗಿರುವ ಅವರು ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮಣ್ಣಿನ ಮಗ ಕುಮಾರಣ್ಣ ಪ್ರಧಾನಿ ನರೇಂದ್ರ ಮೋದಿ ಪಕ್ಕ ಕೂರಬೇಕು, ಕೇಂದ್ರದಲ್ಲಿ ಉನ್ನತ ಸ್ಥಾನ ಪಡೆಯಬೇಕು’ ಎಂದರು.

ಮೈಸೂರು ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ‘ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ, ಇಟಲಿಯಲ್ಲಿ ಜನಿಸಿದ ಸೋನಿಯಾಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಬಹುದು. ದೆಹಲಿಯಲ್ಲಿ ಹುಟ್ಟಿದ ರಾಹುಲ್‌ ಗಾಂಧಿ ವಯನಾಡ್‌ನಲ್ಲಿ ನಿಲ್ಲಬಹದು, ಮೈಸೂರಿನಲ್ಲಿ ಹುಟ್ಟಿದ ಸಿದ್ದರಾಮಯ್ಯ ಬಾದಾಮಿಗೆ ಓಡಿ ಹೋಗಬಹುದು. ಕಾವೇರಿ ಉಳಿಸಿದ ದೇವೇಗೌಡರ ಮಗ ಮಂಡ್ಯದಲ್ಲಿ ಏಕೆ ಸ್ಪರ್ಧಿಸಬಾರದು’ ಎಂದು ಪ್ರಶ್ನಿಸಿದರು.

‘ದೇಶ ಕಾಯಲು ಮೋದಿ ಇದ್ದರೆ, ಕಾವೇರಿ ನದಿ ಕಾಯಲು ಕುಮಾರಣ್ಣ ಇರುತ್ತಾರೆ. ಮೋದಿ ಸಂಪುಟದಲ್ಲಿ ಕುಮಾರಣ್ಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಸ್ಟಾರ್‌ ಚಂದ್ರು ದುಡ್ಡು ಖಾಲಿಯಾಗುತ್ತದೆಯೇ ಹೊರತು ಮತ ಬೀಳುವುದಿಲ್ಲ. ಕುಮಾರಣ್ಣ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಅಂಬರೀಷ್‌ ನಂತರ ಮಂಡ್ಯಕ್ಕೆ ಕೇಂದ್ರ ಸಚಿವ ಸ್ಥಾನ ಒಲಿದು ಬರಲಿದೆ’ ಎಂದರು.-ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಸ್ಫೋಟವನ್ನು ಗೃಹಸಚಿವ ಪರಮೇಶ್ವರ್‌ ಅವರು ಸಾಮಾನ್ಯ ಪ್ರಕರಣವೆಂದಿದ್ದರು. ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿಗಳನ್ನು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಸಹೋದರರೆಂದಿದ್ದರು. ಡಿಕೆಶಿ, ಪರಮೇಶ್ವರ್‌ ಈಗ ಏನು ಹೇಳುತ್ತಾರೆ?
-ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT