ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls: 'ಗ್ಯಾರಂಟಿ' ಮುಂದುವರಿಸಲು ಕಾಂಗ್ರೆಸ್ ಬದ್ಧ: ಸಿ.ಎಸ್‌.ದ್ವಾರಕನಾಥ್‌

ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌ ಹೇಳಿಕೆ
Published 21 ಏಪ್ರಿಲ್ 2024, 9:02 IST
Last Updated 21 ಏಪ್ರಿಲ್ 2024, 9:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಡವರ ಏಳಿಗೆಗಾಗಿ ರಾಜ್ಯ ಸರ್ಕಾರ ರೂಪಿಸಿದ ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಲೋಕಸಭಾ ಚುನಾವಣೆಯ ಬಳಿಕವೂ ‘ಗ್ಯಾರಂಟಿ’ಗಳನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್ ತಿಳಿಸಿದರು.

‘ಸಮಾಜದ ತಳಸ್ತರದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಸರ್ಕಾರದ ಜವಾಬ್ದಾರಿ. ಇದೇ ಉದ್ದೇಶದಿಂದ ‘ಗ್ಯಾರಂಟಿ’ ಯೋಜನೆಗಳನ್ನು ಕಾಂಗ್ರೆಸ್‌ ರೂಪಿಸಿದೆ. ಬಡವರಿಗೆ ಅನುಕೂಲವಾಗಿರುವುದನ್ನು ಸಹಿಸದ ಬಿಜೆಪಿ, ಚುನಾವಣಾ ಅಖಾಡದಲ್ಲಿ ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ಯಾರೂ ಕಿವಿಗೊಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಡುಗಾಡು ಸಿದ್ದರು, ಕೊರಮ, ಕೊರಚ, ದಕ್ಕಲಿಗ ಸೇರಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳನ್ನು ಭೇಟಿ ಮಾಡಿದ್ದೇನೆ. ‘ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ’ ಎಂಬ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ‘ಗ್ಯಾರಂಟಿ’ಗಳಿಂದ ಕೊಂಚ ನಿರಾಳರಾಗಿರುವ ಈ ಸಮುದಾಯಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು’ ಎಂದು ಹೇಳಿದರು.

‘ದೇಶದ ಬಡವನ ಆದಾಯ ದಿನಕ್ಕೆ ₹ 75. ಅಂಬಾನಿ ಆದಾಯ ದಿನಕ್ಕೆ ₹ 2,600 ಕೋಟಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇವರಲ್ಲಿ ಯಾರ ಪರ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ₹ 75 ರೂಪಾಯಿ ಆದಾಯದಲ್ಲಿ ಬಡವನೊಬ್ಬ ಮೂರು ಹೊತ್ತು ಊಟ ಮಾಡಲು ಸಾಧ್ಯವಿಲ್ಲ. ಆಹಾರ, ಶಿಕ್ಷಣ, ಆರೋಗ್ಯದ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇಂತಹ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಗ್ಗೂಡಬೇಕು’ ಎಂದು ಮನವಿ ಮಾಡಿದರು.

‘ಆತ್ಮವಂಚನೆಯ ಪರಮಾವಧಿ’

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿ ಹತ್ತು ವರ್ಷ ಕಳೆದಿದೆ. ಇಷ್ಟು ದಿನ ಈ ಬಗ್ಗೆ ಚಿಕ್ಕ ಆಲೋಚನೆ ಮಾಡದ ಅಮಿತ್‌ ಶಾ, ಸುಳ್ಳು ಹೇಳಲು ಏ.24ರಂದು ತುಮಕೂರಿಗೆ ಬರುತ್ತಿರುವುದು ಆತ್ಮವಂಚನೆಯ ಪರಮಾವಧಿ ಎಂದು ದ್ವಾರಕನಾಥ್‌ ಟೀಕಿಸಿದರು.

‘ಕಾಡುಗೊಲ್ಲ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರ್ಪಡೆಗೊಳಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಅರೆ ಅಲೆಮಾರಿ ಸ್ವಭಾವ ಹೊಂದಿದ ಬುಡಕಟ್ಟು ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸೌಲಭ್ಯ ಕಲ್ಪಿಸುವ ಕಾಳಜಿ ತೋರಿದ್ದು ಕಾಂಗ್ರೆಸ್‌. ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT