ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ | ಯದುವೀರ್‌ ಎದುರು ಸವಾಲಿನ ‘ಬೆಟ್ಟ’

ಎರಡೂ ಜಿಲ್ಲೆಯವರೊಂದಿಗೆ ಸಂಪರ್ಕ, ಎರಡೂ ಪಕ್ಷಗಳೊಂದಿಗೆ ಸಮನ್ವಯ ಅಗತ್ಯ
Published 6 ಜೂನ್ 2024, 5:59 IST
Last Updated 6 ಜೂನ್ 2024, 5:59 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿರುವ ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಎದುರಿಗೆ ಸವಾಲುಗಳ ‘ಬೆಟ್ಟ’ವೇ ಇದೆ. ಅದನ್ನು ಕರಗಿಸಲು ಅವರು ಸಾಕಷ್ಟು ಶ್ರಮವನ್ನು ಹಾಕಬೇಕು ಎನ್ನುವುದು ಜನರ ನಿರೀಕ್ಷೆಯಾಗಿದೆ.

ರಾಜವಂಶದ ಹಿನ್ನೆಲೆ, ಹೊಸ ಮುಖ ಹಾಗೂ ಯುವಕನಾಗಿರುವ ಕಾರಣ ಜನರಲ್ಲಿ ನಿರೀಕ್ಷೆಗಳೂ ಸಾಕಷ್ಟಿವೆ. ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಅದರಲ್ಲೂ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುವುದು ಅವರ ಆಶಯವಾಗಿದೆ. ಎರಡೂ ಜಿಲ್ಲೆಗಳ ಜನರೊಂದಿಗೆ ನಿರಂತರ ಸಂಪರ್ಕ, ಅವರ ಸಮಸ್ಯೆಗಳಿಗೆ–ಬೇಡಿಕೆಗಳಿಗೆ ಸ್ಪಂದಿಸುವುದು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡುವುದು ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿರುವುದರಿಂದ ಬಿಜೆಪಿ– ಜೆಡಿಎಸ್‌ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ನೆರವಾಗುವ ಕಾಳಜಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಅವರಿಗಿದೆ. ‘ಕಾರ್ಯಕರ್ತರಿಗೆ ಸುಲಭವಾಗಿ ಲಭ್ಯವಾಗುತ್ತಾರೆ’ ಎಂಬ ಭಾವನೆ ಬರುವಂತೆ ನಡೆದುಕೊಳ್ಳಬೇಕಾಗಿದೆ.

ಸಂಪರ್ಕಕ್ಕೆ ಲಭ್ಯವಾಗಲಿ: ‘ರಾಜವಂಶಸ್ಥರಾದ ಅವರು ಅರಮನೆಯಿಂದ ಹೊರಬರುತ್ತಾರೆಯೇ, ಜನಸಾಮಾನ್ಯರ ಕೈಗೆ ಸಿಗುತ್ತಾರೆಯೇ?’ ಎಂಬ ಮಾತುಗಳ ನಡುವೆಯೇ ಜನರು ಅವರನ್ನು ಬೆಂಬಲಿಸಿದ್ದಾರೆ. ಜನಸಾಮಾನ್ಯರೊಂದಿಗೆ ಬೆರೆಯುವುದು, ಕಾರ್ಯಕರ್ತರು–ಮುಖಂಡರೊಂದಿಗೆ ರಸ್ತೆ ಬದಿ ಚಹಾ ಕುಡಿಯವುದು, ಚಿಕ್ಕ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುವುದು ಮೊದಲಾದವುಗಳನ್ನು ಮಾಡಿ ‘ನಾನು ಜನರೊಂದಿಗೆ ಇರಲು ಸಿದ್ಧ’ ಎಂಬ ಸಂದೇಶವನ್ನು ಚುನಾವಣೆ ಸಂದರ್ಭದಲ್ಲಿ ರವಾನಿಸಿದ್ದರು. ಆದರೆ, ಚುನಾವಣೆ ಗೆದ್ದ ಮೇಲಿನ ನಡವಳಿಕೆ ಹೇಗಿರುತ್ತದೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜನರೂ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಂಪರ್ಕಕ್ಕೆ–ಸಂದರ್ಶನಕ್ಕೆ ಲಭ್ಯವಾಗುವ ಕೆಲಸವನ್ನು ಯದುವೀರ್ ಮಾಡಬೇಕಾಗುತ್ತದೆ.

ಪ್ರಾಕೃತಿಕ ಸಂಪತ್ತನ್ನು ಮತ್ತು ಪಾರಂಪರಿಕತೆ ಸೊಬಗನ್ನು ಒಡಲಲ್ಲಿ ಇಟ್ಟುಕೊಂಡಿರುವ ಮೈಸೂರು ಮತ್ತು ಕೊಡಗು ಜಿಲ್ಲೆಗಳು ಪ್ರವಾಸೋದ್ಯಮವನ್ನು ಸಾಕಷ್ಟು ಅವಲಂಬಿಸಿವೆ. ಈ ಕ್ಷೇತ್ರ ಅಭಿವೃದ್ಧಿಯಾದರೆ ಆತಿಥ್ಯ ಕ್ಷೇತ್ರಕ್ಕೆ, ಟ್ರಾವೆಲ್ಸ್‌ನವರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಸೇರಿದಂತೆ ಹಲವು ರಂಗಗಳಲ್ಲಿ ಇರುವವರಿಗೆ ಅನುಕೂಲ ಆಗುತ್ತದೆ. ಆದ್ದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ‘ಬೂಸ್ಟರ್‌ ಡೋಸ್’ ನೀಡುವ ಯೋಜನೆಗಳನ್ನು ತರಬೇಕಾಗುತ್ತದೆ. ಅಭಿವೃದ್ಧಿಯ ಜತೆಗೆ ಮೈಸೂರನ್ನು ಮೈಸೂರನ್ನಾಗಿ, ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯವೂ ಇದೆ. ಪ್ರಗತಿಯೊಂದಿಗೆ ‘ಮೈಸೂರುತನ’ ಮತ್ತು ‘ಕೊಡಗುತನ’ದ ಸಮತೋಲನ ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿಯೂ ಅವರ ಮೇಲಿದೆ.

‘ನಮ್ಮ ಸಮಸ್ಯೆಗಳಿಗೆ– ಬೇಡಿಕೆಗಳ ಈಡೇರಿಕೆಗೂ ಸ್ಪಂದಿಸಬೇಕು’ ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರ ನಿರೀಕ್ಷೆಯಾಗಿದೆ. ಮೈತ್ರಿ ಸಾಮರಸ್ಯ ಹಾಗೂ ಪಕ್ಷ ಸಂಘಟನೆಗೂ ಯೋಗದಾನ ಮಾಡಬೇಕಾಗಿದೆ.

ಆರಂಭವಾಗದ ಕಾಮಗಾರಿ!: ಮೈಸೂರು–ಕುಶಾಲನಗರ ನಡುವಿನ (ಎನ್‌.ಎಚ್‌. 275) ನಾಲ್ಕು ಪಥಗಳ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಚಾಲನೆ ನೀಡಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು–ಮೈಸೂರು ಹೆದ್ದಾರಿ ಉದ್ಘಾಟನೆ ಜೊತೆಗೆ ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗಿನ ಹೆದ್ದಾರಿ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾಗಿ ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಒಟ್ಟು 93 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ₹4,130 ಕೋಟಿ ವೆಚ್ಚವಾಗಲಿದೆ ಅಂದಾಜಿಸಲಾಗಿದೆ. ನಿರೀಕ್ಷೆಯಂತೆಯೇ ನಡೆದಿದ್ದಲ್ಲಿ 2024ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಯೋಜನೆ ಚುರುಕುಗೊಳಿಸಬೇಕಾಗಿದೆ.

ಬಹುಕೋಟಿ ಮೊತ್ತದ ‘ಮೈಸೂರು ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್‌’ ಯೋಜನೆ ನನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಿಪಿಸಿಡಿಎಸ್ (ಸಮಗ್ರ ಪವರ್‌ಲೂಮ್‌ ಕ್ಲಸ್ಟರ್‌ ಅಭಿವೃದ್ಧಿ ಯೋಜನೆ) ಕಾರ್ಯಕ್ರಮದಲ್ಲಿ ಕೈಗೊಂಡಿರುವ ಯೋಜನೆ ಇದು. 2017–18ರಲ್ಲೇ ಅನುಮೋದನೆ ನೀಡಲಾಗಿತ್ತು. ಇಲವಾಲ ಹೋಬಳಿಯ ಬೆಳವಾಡಿ ಗ್ರಾಮದ ಹೊರವಲಯದ ಸರ್ವೇ ನಂ. 247ರಲ್ಲಿ 1 ಎಕರೆ 12 ಗುಂಟೆ ಹಾಗೂ ಸರ್ವೇ ನಂ.252ರಲ್ಲಿ 9 ಎಕರೆ ಸೇರಿದಂತೆ ಒಟ್ಟು 10 ಎಕರೆ 12 ಗುಂಟೆ ಜಮೀನನ್ನು ಕಾಯ್ದಿರಿಸಲಾಗಿದೆ. ಜಾಗ ಸಿಕ್ಕಿದ್ದರೂ ಅನುಷ್ಠಾನದ ಕೆಲಸ ನಡೆದಿಲ್ಲ. ಇದರ ಅನುಷ್ಠಾನಕ್ಕೆ ಕ್ರಮ ವಹಿಸಬೇಕಾಗಿದೆ.

ಪ್ರಕೃತಿಯ ಬಗೆಗೆ ಕಾಳಜಿಯನ್ನಿಟ್ಟುಕೊಂಡು ‘ಸಾವಯವ ಅಭಿವೃದ್ಧಿ’ (ಆರ್ಗ್ಯಾನಿಕ್ ಡೆವಲಪ್‌ಮೆಂಟ್) ಮಾಡುವುದು ನನ್ನ ಆಶಯ. ಅದಕ್ಕೆ ಪೂರಕವಾದ ಯೋಜನೆಗಳನ್ನು ತರುವೆ

-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಂಸದ

ಹಲವು ನಿರೀಕ್ಷೆಗಳು

* ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು– ಕುಶಾಲನಗರ ರೈಲು ಮಾರ್ಗ ನಿರ್ಮಾಣ ಯೋಜನೆಯ ಅನುಷ್ಠಾನಕ್ಕೆ ‘ವೇಗ’ ನೀಡಬೇಕು.

* ಮೈಸೂರಿನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಯೂನಿಟಿ ಮಾಲ್ ನಿರ್ಮಾಣ.

* ಮೈಸೂರಿನ ಸುತ್ತಲೂ ಫೆರಿಫರಲ್‌ ರಿಂಗ್ ರಸ್ತೆ ನಿರ್ಮಾಣ

* ಮೈಸೂರು ವಿಮಾನನಿಲ್ದಾಣ ರನ್ ವೇ ವಿಸ್ತರಣೆ ಹಾಗೂ ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಿಸುವುದು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವುದು. ಇದಕ್ಕೆ ಎದುರಾಗಿರುವ ತೊಡಕುಗಳ ನಿವಾರಣೆ.

* ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದ್ದಂತೆ ಮೈಸೂರು ತಾಲ್ಲೂಕಿನ ಜಯಪುರ ಮೊದಲಾದ ಭಾಗದಲ್ಲಿ ಕಾವಲ್ ಜಮೀನುಗಳ ಸಮಸ್ಯೆಗಳನ್ನು ನಿವಾರಿಸುವುದು ಕೃಷಿ ಮಾಡುತ್ತಿರುವವರಿಗೇ ಆ ಜಮೀನು ಸಿಗುವಂತೆ ಮಾಡಬೇಕು.

* ರೈಲು ಸೇವೆಯ ಸುಧಾರಣೆ ಮೈಸೂರು ಕೇಂದ್ರ ರೈಲ್ವೆ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಚುರುಕು ನೀಡುವುದು.

* ಚಾಮರಾಜನಗರ ರೈಲು ಮಾರ್ಗ ವಿದ್ಯುದೀಕರಣಕ್ಕೆ ವಿಮಾನನಿಲ್ದಾಣದ ಬಳಿ ಎದುರಾಗಿರುವ ಸಮಸ್ಯೆ ನಿವಾರಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.

* ಅರಮನೆಯಿಂದ ಹೊರಗೆ ಬಂದು ಜನಸಾಮಾನ್ಯರಿಗೆ ಸುಲಭವಾಗಿ ಸಿಗಬೇಕು ಹಾಗೂ ಕುಂದುಕೊರತೆಗಳನ್ನು ನಿಯಮಿತವಾಗಿ ಆಲಿಸಬೇಕು.

* ಪಿರಿಯಾಪಟ್ಟಣ ಹುಣಸೂರು ತಾಲ್ಲೂಕುಗಳಲ್ಲಿನ ತಂಬಾಕು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.

* ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಮಾನವ–ವನ್ಯಜೀವಿ ಸಂಘರ್ಷ ನಿವಾರಣೆಗೆ ಪರಿಣಾಮಕಾರಿ ಕ್ರಮದ ಅಗತ್ಯವಿದೆ. ವನ್ಯಜೀವಿಗಳನ್ನೂ ಉಳಿಸಿಕೊಂಡು ಜನರಿಗೂ ತೊಂದರೆ ಆಗದಂತೆ ನೋಡಿಕೊಳ್ಳುವ ಯೋಜನೆಗಳು ಬೇಕಾಗಿವೆ.

* ಕಾಡು ಪ್ರಾಣಿಗಳ ಹಾವಳಿ ಅದರಿಂದ ಆಗುವ ಬೆಳೆ ಹಾನಿ–ಪ್ರಾಣ ಹಾನಿ ಮೊದಲಾದ ಸಮಸ್ಯೆ ಎದುರಿಸುತ್ತಿರುವ  ಕಾಡಂಚಿನ ಜನರ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.

ಕೈಗಾರಿಕೆ ಅಭಿವೃದ್ಧಿಗೆ...

‘ಕೇಂದ್ರ ಸರ್ಕಾರದ ನೆರವಿನಲ್ಲಿ ಮೈಸೂರು ರಫ್ತು ಕೇಂದ್ರದ ನಿರ್ಮಾಣ ನನೆಗುದಿಗೆ ಬಿದ್ದಿದ್ದು ಆ ಕಾಮಗಾರಿ ಪೂರ್ಣಗೊಳಿಸಬೇಕು. ಕೈಗಾರಿಕಾ ಕ್ಲಸ್ಟರ್‌ಗಳಿಗೆ ಅದರಲ್ಲೂ ಮೈಸೂರು ಪ್ರಿಂಟರ್ಸ್‌ ಕ್ಲಸ್ಟರ್‌ಗೆ ಕೇಂದ್ರದಿಂದ ಅನುಮೋದನೆ ದೊರಕಿಸಿ ಅಗತ್ಯ ಭೂಮಿ ಕೊಡಿಸಬೇಕು. ಕೊರೊನಾ ಸಂದರ್ಭದಲ್ಲಿ ಮಾಡಿದ ಎಂಎಸ್‌ಎಂಇಗೆ ಇರುವ ಹೂಡಿಕೆ–ವಹಿವಾಟು ಮಿತಿಯನ್ನು ಇಳಿಸಬೇಕು. ವಿಮಾನನಿಲ್ದಾಣ ಅಭಿವೃದ್ಧಿಪಡಿಸಿ ‘ಕಾರ್ಯಾಚರಿಸುವ ನಿಲ್ದಾಣ’ವನ್ನಾಗಿ ಮಾಡಬೇಕು. ಹಳೆಯ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ಕೊಡಿಸಬೇಕು. ಕೇಂದ್ರದ ಯೋಜನೆಗಳ ಲಾಭ ಪಡೆಯುವ ನಿಟ್ಟಿನಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ಆಗಾಗ ಮೈಸೂರಿನಲ್ಲೇ ಸಮಾಲೋಚನೆ ನಡೆಸುವಂತೆ ಮಾಡಬೇಕು’ ಎಂದು ಮೈಸೂರು ಕೈಗಾರಿಕಾ ಒಕ್ಕೂಟದ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT