ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆ‌ಸ್ಸಿಗರು ದೇವೇಗೌಡರ ‘ಕತ್ತು ಕೊಯ್ದರು’: ನಿಖಿಲ್‌ ಕುಮಾರಸ್ವಾಮಿ

ಶ್ರೀರಂಗಪಟ್ಟಣ ಸಮನ್ವಯ ಸಭೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಆಕ್ರೋಶ
Published 31 ಮಾರ್ಚ್ 2024, 15:50 IST
Last Updated 31 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ತುಮಕೂರು ಕ್ಷೇತ್ರದಲ್ಲಿ ನಿಲ್ಲಿಸಿ, ಸೋಲಿಸಿ ಅವರ ‘ಕತ್ತು ಕೊಯ್ದರು’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಕ್ರೋಶದಿಂದ ಹೇಳಿದರು.

ಪಟ್ಟಣದಲ್ಲಿ, ಭಾನುವಾರ ನಡೆದ ಜೆಡಿಎಸ್‌– ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದರೂ ತುಮಕೂರು ಮತ್ತು ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಸೋಲಿಸಿ ದ್ರೋಹ ಬಗೆದರು. ಕಾಂಗ್ರೆಸ್ಸಿಗರು ನಂಬಿಕೆ ಅರ್ಹರಲ್ಲ ಎಂಬ ಕಾರಣಕ್ಕೆ ಬಿಜೆಪಿ ಜತೆ ಮೈತ್ರಿ ಆಗಿದೆ. ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಸಹಕಾರದಿಂದ ಬೆಳೆದ ಶಾಸಕ ರಮೇಶ ಬಂಡಿಸಿದ್ದೇಗೌಡ ಕುಮಾರಸ್ವಾಮಿ ಅವರ ಬಗ್ಗೆ ಸಲ್ಲದ ಮಾತುಗಳಾಡಿದ್ದಾರೆ. 3ನೇ ಬಾರಿ ಶಾಸಕರಾಗಿರುವ ರಮೇಶ ಬಂಡಿಸಿದ್ದೇಗೌಡ ಅವರಿಂದ ಅಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಕುಮಾರಸ್ವಾಮಿ ಅವರಿಗೆ ‘ಟಾವಿ’ ಎಂಬ ತಂತ್ರಜ್ಞಾನ ಬಳಸಿ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬೇಕಿದ್ದರೆ ರಮೇಶ ಬಂಡಿಸಿದ್ದೇಗೌಡ ಆ ಬಗ್ಗೆ ಮಾಹಿತಿ ಪಡೆಯಲಿ ಎಂದು ತಿರುಗೇಟು ನೀಡಿದರು.

ಹಣವಂತ, ಹೃದಯವಂತರ ಸ್ಪರ್ಧೆ: ಮುಖಂಡ ಸಿ.ಎಸ್‌. ಪುಟ್ಟರಾಜು ಮಾತನಾಡಿ, ‘ಇದು ಹಣವಂತ ಮತ್ತು ಹೃದಯವಂತರ ನಡುವೆ ನಡೆಯುತ್ತಿರುವ ಚುನಾವಣೆ. ಮಂಡ್ಯ ಕ್ಷೇತ್ರದ ಜನರು ಹಣಕ್ಕೆ ಮಾರು ಹೋಗುವುದಿಲ್ಲ. ತಾಯಿ ಹೃದಯದ ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಚಲುವರಾಯಸ್ವಾಮಿ ಮತ್ತು ಜಿಲ್ಲೆಯ ಶಾಸಕರು ಲಘುವಾಗಿ ಮಾತನಾಡಬಾರದು. ಶಾಸಕ ನರೇಂದ್ರಸ್ವಾಮಿ ಅವರಿಗೆ ರಾಜಕೀಯ ಮರುಜನ್ಮ ಕೊಟ್ಟಿದ್ದು ಯಡಿಯೂರಪ್ಪ, ದೆಹಲಿಯಲ್ಲಿ ಅವರನ್ನು ಬಿಡಿಸಿದ್ದು ಎಚ್‌.ಡಿ. ದೇವೇಗೌಡರು. ಆದರೂ ಅವರಿಗೆ ಕೃತಜ್ಞತೆ ಇಲ್ಲ. ರಾಮನೇ ಹುಟ್ಟಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್‌ ಪಕ್ಷದ ಅಧಃಪತನ ಶುರುವಾಗಿದೆ ಎಂದರು.

ಅಂಬೇಡ್ಕರ್‌ಗೆ ಅಪಮಾನ: ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಎರಡು ಬಾರಿ ಸೋಲಿಸಿದೆ. ಅವರ ಸಮಾಧಿಗೆ ಜಾಗ ಕೊಡಲು ಅಂದಿನ ಕಾಂಗ್ರೆಸ್‌ ಕಾಂಗ್ರೆಸ್‌ ನಿರಾಕರಿಸಿತ್ತು. ಪರಿಷ್ಟ ಜಾತಿ, ಪಂಗಡದ ಜನರ ಕಲ್ಯಾಣಕ್ಕೆ ಮೀಸಲಾಗಿದ್ದ ₹ 11 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಅನ್ಯಾಯ ಮಾಡಿದೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿದರು.

ಶಾಸಕ ಎಚ್‌.ಟಿ. ಮಂಜು, ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕ ಸುರೇಶಗೌಡ, ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ, ಮುಖಂಡ ಪಾಲಹಳ್ಳಿ ಮುಕುಂದ ಮಾತನಾಡಿದರು. ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌, ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ದಶರಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಇಂದ್ರೇಶ್‌, ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್‌, ಮಂಡಲದ ಅಧ್ಯಕ್ಷ ಪೀಹಳ್ಳಿ ರಮೇಶ್‌, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ. ಶ್ರೀಧರ್‌, ವಿವೇಕಾನಂದ ಭಾಗವಹಿಸಿದ್ದರು.

‘ಕಾಂಗ್ರೆಸ್‌ಗೆ ರೈತರ ಶಾಪ’  ಕೆಆರ್‌ಎಸ್‌ ಜಲಾಶಯದಲ್ಲಿ 86 ಅಡಿಗಳಷ್ಟು ನೀರು ಇದ್ದರೂ ನಾಲೆಗಳಿಗೆ ನೀರು ಹರಿಸದೆ ರಾಜ್ಯ ಸರ್ಕಾರ ಕೃತಕ ಬರ ಸೃಷ್ಟಿಸಿ ರೈತರಿಗೆ ದ್ರೋಹ ಬಗೆದಿದೆ ಎಂದು ಮುಖಂಡ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು. ಕಬ್ಬು ತೆಂಗು ಅಡಿಕೆ ಇತರ ಬೆಳೆಗಳು ಹಿಸಿಲಿನ ತಾಪಕ್ಕೆ ಸುಟ್ಟು ಹೋಗಿವೆ. ತಾಲ್ಲೂಕಿನ ಪೀಹಳ್ಳಿ ಕೆಆರ್‌ಎಸ್‌ ಹೊಸ ಉಂಡವಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ. ಬೆಳೆ ಕಳೆದುಕೊಂಡ ರೈತರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ ಎಂದ ಅವರು ಬೆಳೆ ಒಣಗಿರುವ ಚಿತ್ರಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT