ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ಮತಕ್ಷೇತ್ರದಲ್ಲಿ ನಾಟಕೀಯ ಬೆಳವಣಿಗೆ: ‘ನಾಯಕರ’ ರಾಜಕೀಯ ತಾಲೀಮು ಶುರು

Published 22 ಮಾರ್ಚ್ 2024, 6:16 IST
Last Updated 22 ಮಾರ್ಚ್ 2024, 6:16 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭೆಗೆ ಮೇ 7 ರಂದು ಉಪಚುನಾವಣೆ ನಿಗದಿಯಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ರಾಜಕೀಯ ತಾಲೀಮು ಶುರುವಾಗಿದೆ.

ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆಯ ಉಪಚುನಾವಣೆ ನಡೆಯಲಿದೆ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಕಾಂಗ್ರೆಸ್‌, ಬಿಜೆಪಿಯ ನಾಯಕರ ಓಡಾಟ ಜೋರಾಗಿದೆ. 

ವರ್ಷದೊಳಗೆ ಚುನಾವಣೆ: 2023ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ 25 ಸಾವಿರ ಮತಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದರು. 2024ರಲ್ಲಿ ಲೋಕಸಭೆಗೆ ಅವರೇ ಕಾಂಗ್ರೆಸ್‌ ಹುರಿಯಾಳು ಎಂದು ಬಿಂಬಿಸಲಾಗಿತ್ತು. ಆದರೆ, ವಿಧಿಯಾಟ ಅವರು ನಿಧನರಾಗಿದ್ದು, ಉಪಚುನಾವಣೆ ಕ್ಷೇತ್ರದ ಜನತೆ ಎದುರಿಸುವಂತಾಗಿದೆ.

ಆಯ್ಕೆಯಾದ ಒಂದು ವರ್ಷದೊಳಗೆ ಚುನಾವಣೆ ನಡೆಯುವುದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕುಗೊಂಡಿದ್ದು, ರಾಜಕೀಯ ಪಲ್ಲಟಗಳು ನಡೆಯುತ್ತಿವೆ.

ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿ: ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಆಕ್ಷಾಂಕ್ಷಿಗಳಿಂದ ಸುರಪುರ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯಿಂದ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಜನ, ಜಾನುವಾರು, ಹಳ್ಳ, ಕೊಳ್ಳಗಳಿಗೆ ಇದರಿಂದ ಅನಕೂಲವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸಣ್ಣಪುಟ್ಟ ಅಪಘಾತ, ಸಮಸ್ಯೆ ಇರುವುದು ತಿಳಿದುಬಂದರೆ ಸ್ಥಳಕ್ಕೆ ಭೇಟಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ ನಾಯಕ ಸೇರಿದಂತೆ ಕಾಂಗ್ರೆಸ್‌ ಮುಂಚೂಣಿ ಮುಖಂಡರು ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಬೇಸಿಗೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ದಿ.ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ನಂತರ ನುಡಿ ನಮನ ಕಾರ್ಯಕ್ರಮಗಳನ್ನು ಜೀವಂತವಾಗಿ ಇಟ್ಟಿದ್ದಾರೆ. ಹಲವಾರು ವೃತ್ತ, ಗ್ರಾಮಗಳಲ್ಲಿ ವೆಂಕಟಪ್ಪ ನಾಯಕ ವೃತ್ತ ಎಂದು ನಾಮಕರಣಗಳು ಆಗಿವೆ. ಈ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹವಾ ಇರಲು ಪ್ರಯತ್ನಗಳು ಸಾಗಿವೆ.

ರಾಜೂಗೌಡ
ರಾಜೂಗೌಡ

ಗುತ್ತಿಗೆದಾರರು ಕಾಂಗ್ರೆಸ್‌ಗೆ ಜೈ

ಸದ್ಯ ಬಿಜೆಪಿಯಲ್ಲಿರುವ ಹಲವಾರು ಗುತ್ತಿಗೆದಾರರು ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಗುತ್ತಿಗೆದಾರರು ಕಾಂಗ್ರೆಸ್‌ ಸರ್ಕಾರದಲ್ಲಿ ಕಾಮಗಾರಿ ಪಡೆಯಲು ಉಪಚುನಾವಣೆ ನೆಪವಾಗಿ ಇಟ್ಟುಕೊಂಡು ಕಾಂಗ್ರೆಸ್‌ ಸೇರ್ಪಡೆಗೆ ವೇದಿಕೆ ಕಾಯುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನ

ಸದ್ಯ ಕಾಂಗ್ರೆಸ್‌ನಲ್ಲಿ ಉಪಚುನಾವಣೆ ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಹಲವಾರು ನಾಯಕರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಸಭೆ ಸಮಾರಂಭ ಮನವಿ ಸಲ್ಲಿಕೆಗೆ ನಿಯೋಗದೊಂದಿಗೆ ತೆರಳುತ್ತಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವುದು ತಿಳಿದು ಬರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT