ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು: ಸಿದ್ದರಾಮಯ್ಯ ವಿಶ್ವಾಸ

Published 26 ಏಪ್ರಿಲ್ 2024, 20:24 IST
Last Updated 26 ಏಪ್ರಿಲ್ 2024, 20:24 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದ್ದು, 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ’ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಗ್ರಾಮವಾದ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನಹುಂಡಿ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ಮೊದಲ ಹಂತದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಜನ ಗ್ಯಾರಂಟಿ ಯೋಜನೆಗಳ ಕೈ ಹಿಡಿಯಲಿದ್ದಾರೆ’ ಎಂದ‌ರು.

‘ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ, ಕಾಂಗ್ರೆಸ್ ಅಲೆ ಇದೆ. ಮೂರು ದಿನಗಳ ಮೋದಿ ಭಾಷಣವು ಹತಾಶೆ ಹಾಗೂ ಪ್ರಚೋದನಾಕಾರಿಯಾಗಿತ್ತೇ ಹೊರತು ಪರಿಣಾಮಕಾರಿಯಾಗಿಲ್ಲ. ಅದು ದೇಶದ ಪ್ರಧಾನಮಂತ್ರಿಯ ಭಾಷಣವಲ್ಲ. ಸಂವಿಧಾನ ವಿರೋಧಿ ಭಾಷಣ’ ಎಂದು ದೂರಿದರು. ‘ಮೋದಿ ದ್ವೇಷ ಭಾಷಣದ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಅವರು ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ’ ಎಂದರು.

‘ಹಿಂದೂಗಳ ಮಾಂಗಲ್ಯ ಕೀಳುತ್ತಾರೆ, ಹಿಂದುಳಿದವರ ಮೀಸಲಾತಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಾರೆ ಎನ್ನುವ ಎರಡೂ ಭಾಷಣಗಳು ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಕೂಡಿದ ಭಾಷಣ. ಆರ್‌ಎಸ್‌ಎಸ್‌ ಅಜೆಂಡಾವನ್ನು ಮೋದಿ ಹೇಳಿದ್ದಾರಷ್ಟೇ’ ಎಂದರು.

‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಳಿದವರ ಮೀಸಲಾತಿ ಕಿತ್ತು ಮುಸಲ್ಮಾನರಿಗೆ ಕೊಟ್ಟಿದೆ ಎನ್ನುವುದು ಸುಳ್ಳು. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಚಿನ್ನಪ್ಪ ರೆಡ್ಡಿ ವರದಿ ಆಧಾರದಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡಲು ತೀರ್ಮಾನಿಸಿದ್ದರು. 1994ರಲ್ಲಿ ಈ ಕುರಿತು ಆದೇಶ ಹೊರಡಿಸಲಾಯಿತು. ಅಂದಿನಿಂದ ಈವರೆಗೆ ರಾಜ್ಯದಲ್ಲಿ ಮುಸಲ್ಮಾನರಿಗೆ ಮೀಸಲಾತಿ ಇದೆ’ ಎಂದು ವಿವರಿಸಿದರು.

‘ ಕೇಂದ್ರವು ರಾಜ್ಯಕ್ಕೆ ಬರ ಪರಿಹಾರ ಕೊಟ್ಟಿದ್ದರೆ ನಾವೇಕೆ ಪರಿಹಾರ ಕೇಳುತ್ತಿದ್ದೆವು. ಸುಪ್ರೀಂ ಕೋರ್ಟ್‌ ಯಾಕೆ ಸೂಚನೆ ನೀಡುತ್ತಿತ್ತು’ ಎಂದು ಪ್ರಶ್ನಿಸಿದರು.

ಕೃತಕ ಕಣ್ಣೀರು: ‘ದೇವೇಗೌಡರು ಯಾವಾಗಲೂ ಅನುಕೂಲ ರಾಜಕಾರಣ ಮಾಡುತ್ತಾರೆ. ಅವರದ್ದು ಕೃತಕ ಕಣ್ಣೀರು. ರಾಜಕಾರಣದಲ್ಲಿ ಕಣ್ಣೀರು ಹಾಕುವ ಪರಿಸ್ಥಿತಿ ಏನಿದೆ? ಜನ ಆಶೀರ್ವದಿಸಿದರೆ ಉಳಿಯುತ್ತೇವೆ, ಇಲ್ಲದಿದ್ದರೆ ಉಳಿಯುವುದಿಲ್ಲ. ಕುಟುಂಬದ ರಾಜಕಾರಣದಲ್ಲಿ ನಂಬಿಕೆ ಇಟ್ಟವರು ಮಾತ್ರ ಹೀಗೆ ಕೃತಕವಾಗಿ ಕಣ್ಣೀರು ಹಾಕುವ ತಂತ್ರ ಅನುಸರಿಸುತ್ತಾರೆ’ ಎಂದು ದೂರಿದರು.

ಎನ್‌ಡಿಎ ಗೆಲ್ಲಲಿದೆ ಎಂದ ಸಿದ್ದರಾಮಯ್ಯ!

‘ಮೊದಲ ಹಂತದಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ’ ಎನ್ನುವ ಬದಲಿಗೆ ‘ಎನ್‌ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಬಾಯಿ ತಪ್ಪಿ ಹೇಳುವ ಮೂಲಕ ಸಿದ್ದರಾಮಯ್ಯ ಗೊಂದಲ ಮೂಡಿಸಿದರು.

'ಮೋದಿ ಅವರಿಗೆ ತಾವು ಗೆಲ್ಲುವುದಿಲ್ಲ ಎಂದು ಗೊತ್ತಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆದಿರುವ 102 ಕ್ಷೇತ್ರಗಳ ಪೈಕಿ ಎನ್‌ಡಿಎ ಮತ್ತು ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ' ಎಂದು ಸಿದ್ದರಾಮಯ್ಯ ಹೇಳಿದರು.

ಹುಟ್ಟೂರಿಗೆ ಸಿದ್ದು: ಗ್ರಾಮಸ್ಥರ ಸಂಭ್ರಮ

ಬೆಳಿಗ್ಗೆ 10.20ರ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಡಾ. ಯತೀಂದ್ರ ಜೊತೆಗೂಡಿ ಸಿದ್ದರಾಮನಹುಂಡಿಗೆ ಆಗಮಿಸಿದರು. ಅಲ್ಲಿಂದ ಸುಮಾರು 200–300 ಮೀಟರ್‌ನಷ್ಟು ದೂರ ವಾಹನದಲ್ಲೇ ಮತದಾರರ ಕೈ ಬೀಸುತ್ತ ಸಾಗಿದರು. ನಿಷೇಧಾಜ್ಞೆ ನಡುವೆಯೂ ಗ್ರಾಮಸ್ಥರು ಪಟಾಕಿ ಸಿಡಿಸಿ ಮುಖ್ಯಮಂತ್ರಿಯನ್ನು ಸ್ವಾಗತಿಸಿದರು. ಮತಗಟ್ಟೆ ಸಂಖ್ಯೆ 86ರಲ್ಲಿ ಯತೀಂದ್ರ ಜೊತೆಗೂಡಿ ಮತದಾನ ಮಾಡಿದ ಸಿದ್ದರಾಮಯ್ಯ ಹೊರಗೆ ಮಾಧ್ಯಮದವರಿಗೆ ಶಾಯಿ ಹಚ್ಚಿದ ಬೆರಳು ತೋರಿಸಿದರು. ಬಳಿಕ ಸ್ನೇಹಿತ ಕೆಂಪಿರೇಗೌಡರ ಮನೆಗೆ ಭೇಟಿ ಕೊಟ್ಟರು. ಸಿದ್ದರಾಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT