ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ಭದ್ರಕೋಟೆಗೆ ಶಾ ಲಗ್ಗೆ, ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ

ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ
Last Updated 11 ಮೇ 2019, 10:44 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ‌ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಕಳೆದ ಬಾರಿ ಗುಜರಾತ್‌ನ ವಡೋದರಾ ಮತ್ತು ವಾರಾಣಸಿ ಎರಡೂ ಕ್ಷೇತ್ರಗಳಲ್ಲಿ ಅವರು ಗೆದ್ದಿದ್ದರು. ಬಳಿಕ ವಾರಾಣಸಿಯನ್ನು ಉಳಿಸಿಕೊಂಡಿದ್ದರು.

ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ಆರು ಬಾರಿ ಪ್ರತಿನಿಧಿಸಿದ್ದ ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಹೆಸರು ಪ್ರಕಟಿಸಲಾಗಿದೆ.

ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ದೊಡ್ಡ ಶಕ್ತಿಯಾಗಿ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದ ಅಡ್ವಾಣಿ (91) ಅವರ ಚುನಾವಣಾ ಪಯಣ ಇದರೊಂದಿಗೆ ಕೊನೆಗೊಳ್ಳಬಹುದು ಎನ್ನಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಅಡ್ವಾಣಿ ಮತ್ತು ಇತರ ಹಿರಿಯ ಮುಖಂಡರನ್ನು ಮಾರ್ಗದರ್ಶಕ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಬಳಿಕ ಅಡ್ವಾಣಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ವಿರಳವಾಗಿತ್ತು.

ಮೋದಿ–ಅಮಿತ್ ಶಾ ಜೋಡಿಯು ಅಡ್ವಾಣಿ ಅವರನ್ನು ‘ಮೂಲೆಗುಂಪು’ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಅಡ್ವಾಣಿ ಅವರು ಸ್ಪರ್ಧಿಸುವುದಿಲ್ಲ ಎಂದಾದರೆ ಮಗಳು ಪ್ರತಿಭಾ ಅಡ್ವಾಣಿ ಅಥವಾ ಮಗ ಜಯಂತ್‌ ಅಡ್ವಾಣಿ ಕಣಕ್ಕಿಳಿಯಬಹುದು ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಅಡ್ವಾಣಿ ಕುಟುಂಬದ ಸದಸ್ಯರಿಗೆ ಟಿಕೆಟ್‌ ಕೊಡುವ ಬಗ್ಗೆ ಬಿಜೆಪಿ ಈವರೆಗೆ ಏನನ್ನೂ ಹೇಳಿಲ್ಲ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ಅಡ್ವಾಣಿ ಅವರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಅವರನ್ನು ಬಿಜೆಪಿಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸುವ ಕಾರ್ಯಕ್ರಮಕ್ಕೆ ಅಡ್ವಾಣಿ ಗೈರುಹಾಜರಾಗಿದ್ದರು.

1984ರಲ್ಲಿ ಬಿಜೆಪಿ ಇಬ್ಬರು ಸಂಸದರನ್ನು ಮಾತ್ರ ಹೊಂದಿತ್ತು. ರಾಮಜನ್ಮಭೂಮಿ ಅಭಿಯಾನದ ಮೂಲಕ ಅಡ್ವಾಣಿ ಅವರು ಪಕ್ಷಕ್ಕೆ ಶಕ್ತಿ ತುಂಬಿದ್ದರು. ಬಿಜೆಪಿ ಅಧಿಕಾರಕ್ಕೆ ಏರುವಲ್ಲಿ ಭಾರಿ ಶ್ರಮ ವಹಿಸಿದ್ದರು. ಎನ್‌ಡಿಎ ಸರ್ಕಾರ ಮೂರು ಬಾರಿ ಅಧಿಕಾರಕ್ಕೆ ಬಂದಾಗಲೂ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾದರು.

ಪುರಿ ಬಗ್ಗೆ ಮಾತಿಲ್ಲ:ಒಡಿಶಾದಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಕಾರ್ಯತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ. ಹಾಗಾಗಿ, ಮೋದಿ ಅವರು ಈ ಬಾರಿ ಒಡಿಶಾದ ದೇಗುಲ ನಗರಿ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಪಕ್ಷ ಈವರೆಗೆ ಏನನ್ನೂ ಹೇಳಿಲ್ಲ. ಪುರಿ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯ ಹೆಸರನ್ನೂ ಪ್ರಕಟಿಸಿಲ್ಲ.

ಕೇರಳದ 13 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಹಿರಿಯ ಮುಖಂಡ ಕುಮ್ಮನಂ ರಾಜಶೇಖರನ್‌ ಅವರು ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಶಶಿ ತರೂರ್‌ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿಯ ಒ.ರಾಜಗೋಪಾಲ್‌ ಅವರು 15 ಸಾವಿರ ಮತಗಳಿಂದ ತರೂರ್‌ ವಿರುದ್ಧ ಸೋತಿದ್ದರು. ಗಡಿ ಜಿಲ್ಲೆ ಕಾಸರಗೋಡು ಕ್ಷೇತ್ರದಿಂದ ಕುಂಟಾರ್‌ ರವೀಶ್‌ ತಂತ್ರಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಅವರು ಅರುಣಾಚಲ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇಲ್ಲಿ ಅವರಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ನಬಮ್‌ ತುಕಿ ಅವರು ಎದುರಾಳಿ. ಬಿಜೆಡಿ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ವೈಜಯಂತ್‌ ಪಾಂಡಾ ಅವರಿಗೆ ಕೇಂದ್ರಪಾಡಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಉತ್ತರಪ್ರದೇಶ ಹಲವರಿಗೆ ಕೊಕ್‌

ಉತ್ತರ ಪ್ರದೇಶದ 28 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಪ್ರಕಟವಾಗಿರುವ ಕ್ಷೇತ್ರಗಳಲ್ಲಿ ಆರು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಕೇಂದ್ರ ಸಚಿವೆ ಕೃಷ್ಣಾ ರಾಜ್‌ ಅವರಿಗೆ ಶಾಜಹಾನ್‌‍ಪುರ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಲಾಗಿದೆ. ಆಗ್ರಾ ಸಂಸದ ಮತ್ತು ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ರಾಮ್‌ ಶಂಕರ್‌ ಕಥೇರಿಯಾ ಅವರಿಗೂ ಟಿಕೆಟ್‌ ಸಿಕ್ಕಿಲ್ಲ.

ಸಿನಿಮಾ ತಾರೆ ಹೇಮಾಮಾಲಿನಿ ಅವರಿಗೆ ಮತ್ತೆ ಮಥುರಾದಿಂದ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ. 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿ 71 ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ, ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಯಿಂದಾಗಿ ಬಿಜೆಪಿ ಭಾರಿ ಸವಾಲು ಎದುರಿಸುತ್ತಿದೆ. ಹಾಗಾಗಿ, ಹಲವು ಹಾಲಿ ಸಂಸದರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದೆ.

ಬಿಹಾರದ 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಆದರೆ, ಅದನ್ನು ಪ್ರಕಟಿಸಲಾಗಿಲ್ಲ. ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್ ಅವರಿಗೆ ಪಟ್ನಾಸಾಹಿಬ್‌ ಕ್ಷೇತ್ರದಿಂದ ಟಿಕೆಟ್‌ ದೊರೆಯುವುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರವನ್ನು ಹಿರಿಯ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ನಾಯಕತ್ವದ ವಿರುದ್ಧದ ಬಂಡಾಯದಿಂದಾಗಿ ಅವರಿಗೆ ಈ ಬಾರಿ ಟಿಕೆಟ್‌ ಸಿಗಲಾರದು ಎನ್ನಲಾಗಿದೆ.

ಕುತೂಹಲದತ್ತ ಅಮೇಠಿ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಠಿ ಕ್ಷೇತ್ರ ಈ ಬಾರಿ ಕುತೂಹಲ ಕೆರಳಿಸಬಹುದು. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ರಾಹುಲ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಬಾರಿಯೂ ಸ್ಮೃತಿ ಅವರನ್ನೇಬಿಜೆಪಿ ಕಣಕ್ಕಿಳಿಸಿದೆ. ಕಳೆದ ಬಾರಿ ರಾಹುಲ್‌ ಅವರ ಗೆಲುವಿನ ಅಂತರ 1.07 ಲಕ್ಷಕ್ಕೆ ಇಳಿದಿತ್ತು. 2009ರ ಚುನಾವಣೆಯಲ್ಲಿ ರಾಹುಲ್‌ ಮೂರು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.

ಲಖನೌಗೆ ರಾಜನಾಥ್‌, ಗಡ್ಕರಿಗೆ ನಾಗಪುರ

*ಬಿಜೆಪಿಯಿಂದ ಸ್ಪರ್ಧಿಸಲಿರುವ 184 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಜೆ.ಪಿ. ನಡ್ಡಾ

*ಹಿರಿಯ ನಾಯಕ ಅಡ್ವಾಣಿ ಕೈತಪ್ಪಿದ ಗಾಂಧಿನಗರ ಕ್ಷೇತ್ರ. ಈ ಕ್ಷೇತ್ರದಿಂದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಣಕ್ಕೆ

*ಲಖನೌಗೆ ರಾಜನಾಥ್‌ ಸಿಂಗ್‌, ಗಡ್ಕರಿಗೆ ನಾಗಪುರ ಕ್ಷೇತ್ರದಿಂದ ಸ್ಪರ್ಧಿಸಲು ಪುನಃ ಅವಕಾಶ

*ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ವಿ.ಕೆ. ಸಿಂಗ್‌ ಹಾಗೂ ಮಹೇಶ್‌ ಶರ್ಮಾ ಅವರು ಕ್ರಮವಾಗಿ ಅರುಣಾಚಲ ಪೂರ್ವ, ಗಾಜಿಯಾಬಾದ್‌ ಹಾಗೂ ಗೌತಮಬುದ್ಧ ನಗರಗಳಿಂದ ಸ್ಪರ್ಧೆ

*ಮುಂಬೈ ಉತ್ತರ ಕೇಂದ್ರ ಕ್ಷೇತ್ರದಿಂದ ಪೂನಂ ಮಹಾಜನ್‌ ಬಿಜೆಪಿಯ ಅಭ್ಯರ್ಥಿ. ಪ್ರಿಯಾ ದತ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಲ್ಲಿಂದ ಸ್ಪರ್ಧಿಸಲಿದ್ದಾರೆ

*ಬಿಹಾರದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪಕ್ಷದ ರಾಜ್ಯ ಘಟಕಕ್ಕೆ ಕಳುಹಿಸಲಾಗಿದೆ. ಅಲ್ಲಿ ಮೈತ್ರಿ ಪಕ್ಷಗಳ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೆಸರು ಪ್ರಕಟಿಸಲು ನಿರ್ಧಾರ

***

* ಮೊದಲಿಗೆ ಅಡ್ವಾಣಿ ಅವರನ್ನು ಬಲವಂತವಾಗಿ ಮಾರ್ಗದರ್ಶಕ ಮಂಡಳಿಗೆ ತಳ್ಳಿದರು. ಈಗ ಅವರ ಸಂಸತ್‌ ಕ್ಷೇತ್ರವನ್ನೂ ಕಸಿದುಕೊಳ್ಳಲಾಗಿದೆ. ಹಿರಿಯರಿಗೆ ಗೌರವ ಕೊಡುವುದೇ ಗೊತ್ತಿಲ್ಲದ ಮೋದಿ ಅವರು ಜನರ ವಿಶ್ವಾಸವನ್ನು ಹೇಗೆ ಉಳಿಸಿಕೊಳ್ಳಬಲ್ಲರು

-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT