ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಂಗಬಾದ್‌ನಲ್ಲೂ ಗೆದ್ದ ‘ಕಲಬುರಗಿ’ಯ ಪ್ರಥಮ ಸಂಸದ

ಮೊದಲ ಸಂಸದ ಸ್ವಾಮಿ ರಮಾನಂದ ತೀರ್ಥರ ಹೆಸರಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ
Published 27 ಮಾರ್ಚ್ 2024, 5:16 IST
Last Updated 27 ಮಾರ್ಚ್ 2024, 5:16 IST
ಅಕ್ಷರ ಗಾತ್ರ

ಕಲಬುರಗಿ: 1951ರಲ್ಲಿ ಲೋಕಸಭೆಗೆ ನಡೆದ ಪ್ರಥಮ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಗೆದ್ದಿದ್ದ ಸ್ವಾಮಿ ರಮಾನಂದ ತೀರ್ಥರು, 1957ರ ಚುನಾವಣೆಯಲ್ಲಿ ನೆರೆಯ ಮಹಾರಾಷ್ಟ್ರದ ಔರಂಗಬಾದ್‌ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲಿಯೂ ಜಯದ ನಗೆ ಬೀರಿದ್ದರು.

ಹೈದರಾಬಾದ್ ನಿಜಾಮನ ಸಂಸ್ಥಾನವನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ರಾಮಾನಂದ ತೀರ್ಥರು ಸುರಿಸಿದ್ದ ಬೆವರು, ಜೈಲು ವಾಸ, ಸಂಘಟನಾತ್ಮಕ ಹೋರಾಟಗಳು ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ಮರಾಠವಾಡ ಹಾಗೂ ತೆಲಂಗಾಣದಲ್ಲಿ ದೊಡ್ಡ ಹೆಸರು ತಂದುಕೊಟ್ಟವು.

ಸ್ವಾಮಿ ರಮಾನಂದ ತೀರ್ಥರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಭಾವನರಾವ್‌ ಖೇಡ್ಗೀಕರ್ ಹಾಗೂ ಯಶೋಧಬಾಯಿ ದಂಪತಿಗೆ ಜನಿಸಿದ್ದರು. ಅವರ ಮೊದಲ ಹೆಸರು ವೆಂಕಟೇಶ ಖೇಡ್ಗೀಕರ್. ದೇವಲ ಗಾಣಗಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು. ತಾಯಿ ಸಾವಿನ ಬಳಿಕ ಸೋಲಾಪುರದ ಚಿಕ್ಕಪ್ಪನ ಆಶ್ರಯದಲ್ಲಿ ಮಾಧ್ಯಮಿಕ ಶಾಲೆ ಕಲಿತರು. ಶೈಕ್ಷಣಿಕ ಅಗತ್ಯ ಪೂರೈಸಲು ಹೋಟೆಲ್ ಮಾಣಿಯಾಗಿಯೂ ಕೆಲಸ ಮಾಡಿದ್ದರು.

ಪುಣೆಯಲ್ಲಿನ ರಾಷ್ಟ್ರೀಯ ವಿದ್ಯಾಪೀಠದಲ್ಲಿ ಬಿ.ಎ. ಪದವಿ ಪಡೆದರು. ತಿಲಕ್ ವಿದ್ಯಾಪೀಠದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪಡೆದು, ‘ಪ್ರಜಾಪ್ರಭುತ್ವದ ವಿಕಾಸ’ ಎಂಬ ಪ್ರಬಂಧವೂ ಮಂಡಿಸಿದ್ದರು. ಓದಿನ ಅವಧಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲೋಕಮಾನ್ಯ ತಿಲಕರಿಂದ ಪ್ರಭಾವಿತರಾಗಿ, ರಾಜಕೀಯ ಹೋರಾಟಗಳಲ್ಲಿ ತೊಡಿಸಿಕೊಂಡರು.

ನಿಜಾಮರ ಆಡಳಿತದಲ್ಲಿ ಕಾಂಗ್ರೆಸ್‌ ಪದ ನಿಷೇಧವಾಗಿತ್ತು. ಸಂಕಷ್ಟದ ದಿನಗಳಲ್ಲಿ ಹಲವು ವರ್ಷ ಕದ್ದು–ಮುಚ್ಚಿ ಜನರ ಪರವಾಗಿ ಕೆಲಸ ಮಾಡಿದ್ದರು. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಮಾದರಿಯಲ್ಲಿ ಹೈದರಾಬಾದ್ ಕಾಂಗ್ರೆಸ್ ಪಕ್ಷ ಕಟ್ಟಿ, ಸತ್ಯಾಗ್ರಹ, ಹೋರಾಟ ನಡೆಸಿ ಜೈಲು ಸೇರಿದ್ದರು. ಹೈದರಾಬಾದ್ ಸಂಸ್ಥಾನವನ್ನು ದಾಸ್ಯದಿಂದ ಮುಕ್ತಗೊಳಿಸುವಲ್ಲಿ ಕೊನೆಗೂ ಯಶಸ್ವಿಯಾದರು.

ಸ್ವಾತಂತ್ರ್ಯದ ಬಳಿಕ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುವ ಇಚ್ಛೆ ಹೊಂದಿದ್ದರು. ಜವಾಹರಲಾಲ್‌ ನೆಹರೂ, ಎಸ್‌. ನಿಜಲಿಂಗಪ್ಪ ಸೇರಿದಂತೆ ಹಲವರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕೆ ಇಳಿದರು. 1951ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಕಲಬುರಗಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸ್ವಾಮಿ ರಾಮಾನಂದ ತೀರ್ಥರು, 56,087 ಮತಗಳನ್ನು ಪಡೆದರು. ಪ್ರತಿ ಸ್ಪರ್ಧಿಗಳಾಗಿದ್ದ ಸ್ವತಂತ್ರ ಅಭ್ಯರ್ಥಿ ಶರಣಗೌಡ ಹಾಗೂ ಎಸ್‌.ಪಿ ಪಕ್ಷದ ಸದಾಶಿವಪ್ಪ ಡಿ.ಅಕ್ಕಿ ಅವರನ್ನು ಸೋಲಿಸಿದ್ದರು.

1957ರ ಚುನಾವಣೆಯಲ್ಲಿ ಸ್ವಾಮಿ ರಮಾನಂದ ತೀರ್ಥರು, ಮಹಾರಾಷ್ಟ್ರದ ಔರಂಗಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 76,274 ಮತಗಳನ್ನು ಪಡೆದು, ಸಿಪಿಐನಿಂದ ಕಣಕ್ಕೆ ಇಳಿದಿದ್ದ ಮಿರಾಜಕರ್ ಶಾಂತರಾಮ ಅವರನ್ನು 18,835 ಮತಗಳಿಂದ ಪರಾಭವಗೊಳಿಸಿದ್ದರು.

ಸಮಾಜದ ವಿವಿಧ ಸ್ತರಗಳಲ್ಲಿ ಅವಿರತವಾಗಿ ಶ್ರಮಪಟ್ಟಿದ್ದ ರಮಾನಂತ ತೀರ್ಥರು, ಸಾಕಷ್ಟು ಆಯಾಸಗೊಂಡಿದ್ದರು. ರಾಜಕೀಯ ಮತ್ತು ಸಾರ್ವಜನಿಕ ಜೀವನದಿಂದ ಗುರುಪೀಠ ಪರಂಪರೆಯ ಆಶ್ರಮಗಳತ್ತ ವಾಲಿದರು. ಅಂದಿನ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಶಾಂತಿ ಆಶ್ರಮದ ಚಟುವಟಿಕೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು.

ತೆಲುಗು ಮರಾಠಿಗರಲ್ಲಿ ಧನ್ಯತಾ ಭಾವ

ಕನ್ನಡ ನೆಲದಲ್ಲಿ ಜನಿಸಿದ್ದ ಸ್ವಾಮಿ ರಮಾನಂದ ತೀರ್ಥರು ರಾಜಕೀಯದಲ್ಲಿ ಇದ್ದರೂ ಅಧಿಕಾರದಿಂದ ಗಾವುದ ದೂರ ಉಳಿದು ಜನರ ಮಧ್ಯೆ ಇದ್ದುದ್ದರಿಂದಲೇ ಮರಾಠಿ ಮತ್ತು ತೆಲುಗು ಭಾಷಿಕರು ತಮ್ಮ ಸ್ವಂತ ನಾಯಕರೆಂಬ ಧನ್ಯತಾ ಭಾವ ಇಂದಿಗೂ ತೋರುತ್ತಿದ್ದಾರೆ. ಮರಾಠವಾಡದಲ್ಲಿನ ಶೈಕ್ಷಣಿಕ ಕ್ರಾಂತಿ ರಾಜಕೀಯ ಕಾರ್ಮಿಕ ಆಂದೋಲನಗಳನ್ನು ನಡೆಸಿದ್ದರು. ತೆಲಂಗಾಣದಲ್ಲಿನ ಜಮೀನ್ದಾರಿಕೆ ಊಳಿಗಮಾನ್ಯ ಶಕ್ತಿಗಳ ವಿರುದ್ಧ ಹೋರಾಡಿದ್ದರಿಂದ ಅಂದಿನ ಹೈದರಾಬಾದ್ ರಾಜ್ಯವು ಭೂಸುಧಾರಣಾ ಕಾಯ್ದೆ ಜಾರಿಗೆ ತಂದಿತ್ತು. ಇಂದಿಗೂ ಈ ಎರಡು ರಾಜ್ಯಗಳು ರಮಾನಂದ ತೀರ್ಥರನ್ನು ಸ್ಮರಿಸುತ್ತಿವೆ. ಮಹಾರಾಷ್ಟ್ರ ಸರ್ಕಾರ ನಾಂದೇಡ್‌ನಲ್ಲಿ ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯ ಸ್ಥಾಪಿಸಿದ್ದರೆ ತೆಲಂಗಾಣದಲ್ಲಿ ಸ್ವಾಮಿ ರಮಾನಂದ ತೀರ್ಥರ ಹೆಸರಿನಲ್ಲಿ ಮೂರ್ನಾಲ್ಕು ಸಂಸ್ಥೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT