ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ನಂತರ ಹೆಣ್ಣು ಯಾರ ಮನೆ ಸೇರ್ತಾರೆ?: ಸಂಸದರ ಹೇಳಿಕೆಗೆ ಯಶ್‌ ತಿರುಗೇಟು

ಜೋಡೆತ್ತುಗಳ ಅಬ್ಬರದ ಪ್ರಚಾರ
Last Updated 2 ಏಪ್ರಿಲ್ 2019, 12:21 IST
ಅಕ್ಷರ ಗಾತ್ರ

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟರಾದ ಯಶ್‌– ದರ್ಶನ್‌ ಜಿಲ್ಲೆಯ ವಿವಿಧೆಡೆ ಮಂಗಳವಾರ ಪ್ರತ್ಯೇಕವಾಗಿ ಅಬ್ಬರದ ಪ್ರಚಾರ ನಡೆಸಿದರು. ಸುಮಲತಾ ಅವರ ಜಾತಿ ಕೆದಕಿದ ಸಂಸದ ಎಲ್‌.ಆರ್‌.ಶಿವರಾಮೇಗೌಡರಿಗೆ ಇಬ್ಬರೂ ತಿರುಗೇಟು ನೀಡಿದರು.

ತಾಲ್ಲೂಕಿನ ಕಿರಗಂದೂರು ಗ್ರಾಮದಲ್ಲಿ ಮಾತನಾಡಿದ ಯಶ್‌ ‘ಹಳ್ಳಿಯ ಯಾವುದೇ ಹೆಣ್ಣುಮಗಳನ್ನು ಕೇಳಿ, ಮದುವೆಯಾದ ನಂತರ ಯಾರ ಮನೆಗೆ ಸೇರುತ್ತಾರೆ ಎಂದು. ಜಾತಿ ಮೂಲ ಹುಡುಕುವುದು ಸಣ್ಣತನದ ಮನಸ್ಥಿತಿ. ವೈಯಕ್ತಿಕ ವಿಚಾರ ಇಟ್ಟುಕೊಂಡು ಟೀಕೆ ಮಾಡುವುದು ದೊಡ್ಡ ತಪ್ಪು. ಮುಖಂಡರು ಈ ಮಟ್ಟಕ್ಕೆ ಇಳಿದು ಟೀಕೆ ಮಾಡಬಹುದು. ಅಂಬರೀಷ್‌ ಬದುಕಿದ್ದಾಗ ಇವರೆಲ್ಲಾ ಯಾವ ರೀತಿ ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಒಬ್ಬ ಹೆಣ್ಣುಮಗಳು ಕಣಕ್ಕಿಳಿದಿದ್ದಾರೆ. ಜನರು ತೀರ್ಮಾನ ಮಾಡುತ್ತಾರೆ ಬಿಡಿ, ಸುಮ್ಮನೆ ಏಕೆ ಸಲ್ಲದ ವಿಚಾರ ತೆಗೆದು ಮಾತನ್ನಾಡುತ್ತೀರಿ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪರ ಪ್ರಚಾರ ಮಾಡಿದ್ದೆ. ಅಂಬರೀಷಣ್ಣನ ಪ್ರೀತಿಗಾಗಿ ಈ ಬಾರಿ ಸುಮಲತಾ ಅವರ ಪರ ಓಟು ಕೇಳುತ್ತಿದ್ದೇನೆ. ಸುಮಲತಾ ಅವರಿಗೆ ಸಾಕಷ್ಟು ಅವಕಾಶಗಳಿದ್ದವು, ಬೇರೆಡೆ ಸ್ಪರ್ಧೆ ಮಾಡಬಹುದಾಗಿತ್ತು. ಆದರೆ ಅವರು ಮಂಡ್ಯವೇ ಬೇಕು ಎಂದು ಬಂದಿದ್ದಾರೆ. ಅದಕ್ಕೆ ನಾವೆಲ್ಲಾ ಪ್ರೋತ್ಸಾಹ ನೀಡಬೇಕು’ ಎಂದರು.

ಅಣ್ತಮ್ಮಾಸ್‌ ಹೇಳಿಕೆಗೆ ರೋಮಾಂಚನ

ಯಶ್‌ ಪ್ರಚಾರ ನಡೆಸಿದ ಪ್ರತಿ ಹಳ್ಳಿಯಲ್ಲೂ ‘ಅಣ್ತಮ್ಮಾಸ್‌’ ಎಂದು ಭಾಷಣ ಆರಂಭಿಸಿದರು. ಈ ಹೇಳಿಕೆ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತು. ಪ್ರಚಾರ ಮಧ್ಯೆ ಮರದ ನೆರಳಿನಲ್ಲಿ ಊಟ ಮಾಡಿದರು. ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಧ್ವಜಗಳು ರಾರಾಜಿಸಿದವು. ಕೆ.ಜಿ.ಎಫ್‌ ಚಿತ್ರದ ನಿರ್ಮಾಪಕ ವಿಜಯ್‌ ಕಿರಂಗಂದೂರು ಮನೆಗೆ ಭೇಟಿ ನೀಡಿದ್ದರು.

ದರ್ಶನ್‌ ತಿರುಗೇಟು: ಮತ್ತೊಂದೆಡೆ ನಗರದ ಷುಗರ್‌ ಟೌನ್‌, ಆಲಹಳ್ಳಿಯಲ್ಲಿ ಪ್ರಚಾರ ನಡೆಸಿದ ದರ್ಶನ್‌ ‘ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲಾ ಧರ್ಮ, ಜಾತಿಗಳೀಗೆ ಸೇರಿದವನು. ಮೊದಲು ನಾನು ಬಾರತೀಯ. ಜಾತಿಗಿಂತ ಅಭಿಮಾನ ದೊಡ್ಡದು. ಯಾರನ್ನೇ ಆದರೂ ಜಾತಿಯಿಂದ ನೋಡಬಾರದು’ ಎಂದು ತಿರುಗೇಟು ನೀಡಿದರು.

ವಿಶೇಷವಾಗಿ ಸಿಂಗರಿಸಿದ್ದ ಎತ್ತಿನಗಾಡಿ ಸವಾರಿ ಮಾಡಿ ದರ್ಶನ್‌ ಮತಯಾಚನೆ ಮಾಡಿದರು. ಬೀಡಿ ಕಾಲೊನಿಯಲ್ಲಿ ಮುಸ್ಲಿಂ ಸಮುದಾಯದ ಜನರು ಮುಸ್ಲಿಂ ಟೋಪಿ, ಹಸಿರು ಶಾಲು ನೀಡಿದರು. ದರ್ಶನ್‌ ‘ಅಸ್ಲಮುಲೇಕೂಮ್‌’ ಎನ್ನುತ್ತಾ ಪ್ರಚಾರ ಮಾಡಿದರು. ಅವರಿಗೆ ‘ನೆನಪಿರಲಿ’ ಚಿತ್ರ ಖ್ಯಾತಿಯ ಪ್ರೇಮ್‌ ಸಾಥ್‌ ನೀಡಿದರು.

ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲಿ ನಡೆದ ರೈತಸಂಘ, ಕಾಂಗ್ರೆಸ್‌, ಬಿಜೆಪಿ ಮುಖಂಡರ ಸ್ವಾಭಿಮಾನಿಗಳ ಸಭೆಯಲ್ಲಿ ಅಂಬರೀಷ್‌ ಪುತ್ರ ಅಭಿಷೇಕ್‌, ಅಮ್ಮನಿಗೆ ಬೆಂಬಲ ನೀಡುವಂತೆ ಕೋರಿದರು.

ಆತ್ಮಸಾಕ್ಷಿ ಕೇಳಿಕೊಳ್ಳಿ: ತಮ್ಮಣ್ಣಗೆ ತಿರುಗೇಟು

ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಸುಮಲತಾ ಹೆಸರು ಹೇಳದೇ ವಾಗ್ದಾಳಿ ನಡೆಸಿದರು. ‘ಸಚಿವರೊಬ್ಬರು ಚಿಕ್ಕವರಾಗಿದ್ದಾಗ ನಮ್ಮ ಮಾವ ಮಳವಳ್ಳಿ ಹುಚ್ಚೇಗೌಡರು ಓದಿಸಿ, ಬೆಳೆಸಿದ್ದರು. ಅನ್ನ ಹಾಕಿ ಬೆಳೆಸಿದ ಮನೆಗೆ ಏನೆಲ್ಲಾ ಮಾಡುತ್ತಿದ್ದಾರೆ ಎಂದು ಅವರನ್ನೇ ಕೇಳಿ. ಸ್ವಲ್ಪವೂ ಕೃತಜ್ಞತೆ ಇಲ್ಲದ ಮನುಷ್ಯ. ಇಷ್ಟೆಲ್ಲಾ ಅನುಭವ ಪಡೆದಿದ್ದರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅಂಬರೀಷ್‌ ಅವರಿಂದ ಏನೆಲ್ಲಾ ಮಾಡಿಸಿಕೊಂಡಿದ್ದಾರೆ ಎಂಬುದನ್ನು ತಮ್ಮ ಆತ್ಮಸಾಕ್ಷಿ ಕೇಳಿ ತಿಳಿದುಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT