ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಚುನಾವಣೆ | ಬೆಳೆ ಸಮಸ್ಯೆಗಳಲ್ಲೂ ‘ಮತದ ಫಸಲು’

Published : 16 ಏಪ್ರಿಲ್ 2023, 22:45 IST
ಫಾಲೋ ಮಾಡಿ
Comments

ಧರ್ಮ, ಜಾತಿ, ಹಣ, ಬೆಲೆ ಏರಿಕೆ ಅಷ್ಟೇ ಅಲ್ಲ; ರಾಜ್ಯದ ಕೃಷಿ ಕ್ಷೇತ್ರದ ಸಮಸ್ಯೆಗಳೂ ಚುನಾವಣಾ ರಾಜಕಾರಣವನ್ನು ದಟ್ಟವಾಗಿ ಪ್ರಭಾವಿಸುತ್ತಿವೆ. ‘ಬೆಳೆ ರಾಜಕಾರಣ’ದ ಮೂಲಕವೇ ಸಮೃದ್ಧ ಮತದ ಫಸಲು’ ತೆಗೆಯುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ‘ಸೈ’ ಎನಿಸಿಕೊಂಡಿವೆ. ರಾಜ್ಯದ ಪ್ರಮುಖ ಬೆಳೆಗಳಾದ ಅಡಿಕೆ, ತೆಂಗು, ತೊಗರಿ ಬೆಳೆಗಾರರ ಸಮಸ್ಯೆಗಳು ಎಷ್ಟೋ ಚುನಾವಣೆಗಳ ಚಿತ್ರಣವನ್ನೇ ಬದಲಿಸಿವೆ. ರಾಜಕೀಯ ಪಕ್ಷಗಳ ಚುನಾವಣಾ ಅಸ್ತ್ರಗಳಾಗಿ ಹಲವು ಕ್ಷೇತ್ರಗಳಲ್ಲಿ ಫಲಿತಾಂಶದ ಮೇಲೆ ಪ್ರಭಾವ ಬೀರಿವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ‘ಬೆಳೆ ರಾಜಕಾರಣ’ ಜೋರಾಗಿ ಸದ್ದು ಮಾಡುತ್ತಿದೆ.

ಪಶ್ಚಿಮಘಟ್ಟ ವ್ಯಾಪ್ತಿಯ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ತುಮಕೂರು ಜಿಲ್ಲೆಗಳ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಪ್ರತಿ ಚುನಾವಣೆಯಲ್ಲೂ ಬಹು ಚರ್ಚಿತ ವಿಷಯ. ಹಾಗೆಯೇ, ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ತೆಂಗು, ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್‌ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರಗಳಲ್ಲಿ ತೊಗರಿ ಸಮಸ್ಯೆಗಳನ್ನು ವಿವಿಧ ರಾಜಕೀಯ ಪಕ್ಷಗಳು ಮತ ಸೆಳೆಯಲು ಬಳಸಿಕೊಳ್ಳುತ್ತಿವೆ.

ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆಗೆ ಚಿನ್ನದ ಬೆಲೆ ದೊರೆತ ನಂತರ ಬೆಳೆ ಕ್ಷೇತ್ರ ಬಯಲು ಸೀಮೆಗೂ ಹಬ್ಬಿದೆ. ಕೊಳವೆಬಾವಿ, ಜಲಾಶಯಗಳ ಅಚ್ಚುಕಟ್ಟು, ಏತ ನೀರಾವರಿ ಸೌಲಭ್ಯಗಳನ್ನು ಬಳಸಿಕೊಂಡು ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಬೆಳೆ ಕ್ಷೇತ್ರ ಹೆಚ್ಚಳವಾದಂತೆ ಬೆಳೆಗಾರರ ಸಂಖ್ಯೆಯಲ್ಲೂ ಭಾರಿ ಏರಿಕೆಯಾಗಿದೆ. ಹಾಗಾಗಿಯೇ, ಅಡಿಕೆ ಬೆಳೆಯ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ‘ಮತಬೇಟೆ’ಯ ಪ್ರಮುಖ ವಿಷಯಗಳಾಗಿವೆ. ಅಡಿಕೆ ಬೆಲೆ ಏರಿಕೆಯ ಲಾಭವನ್ನು ತಮ್ಮ ಸಾಧನೆಯ ಕಿರೀಟವೆಂಬಂತೆ ಆಡಳಿತದಲ್ಲಿರುವ ರಾಜಕೀಯ ಪಕ್ಷಗಳು ಬಿಂಬಿಸಿಕೊಂಡರೆ, ಬೆಲೆ ಕುಸಿತವನ್ನು ಆಡಳಿತ ವಿರೋಧಿ ನೀತಿಯಾಗಿ ಪ್ರತಿಪಾದಿಸಿ, ಬೆಳೆಗಾರರ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿರೋಧ ಪಕ್ಷಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇವೆ.

2013ರಲ್ಲಿ ಕಾಂಗ್ರೆಸ್‌ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿತ್ತು. ಮಲೆನಾಡು ಭಾಗದ ಕ್ಷೇತ್ರಗಳಿಂದಲೂ ಆ ಪಕ್ಷದ ಹೆಚ್ಚಿನ ಸಂಖ್ಯೆಯ ಶಾಸಕರು ಆಯ್ಕೆಯಾಗಿದ್ದರು. ಅಡಿಕೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹ 1 ಲಕ್ಷದ ಸಮೀಪ ಬಂದು, ನಂತರ ಗಣನೀಯವಾಗಿ ಕುಸಿದದ್ದು 2018ರ ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಪ್ರತಿಪಕ್ಷ ಬಿಜೆಪಿ ಧಾರಣೆ ಕುಸಿತದ ವಿಷಯವನ್ನೇ ಚುನಾವಣಾ ಅಸ್ತ್ರವಾಗಿ ಬಳಸಿತ್ತು.

ಅಡಿಕೆ ಚುನಾವಣಾ ವಿಷಯವಾಗಿ ಚಾಲ್ತಿಗೆ ಬಂದಿದ್ದು ಎರಡು ದಶಕಗಳ ಹಿಂದೆ. ಗುಟ್ಕಾ ಸೇವನೆ ಹೆಚ್ಚಾದಂತೆ ಅಡಿಕೆ ಬೆಲೆಯೂ ನಿಧಾನವಾಗಿ ಏರಿಕೆಯಾಗತೊಡಗಿತ್ತು. ಗುಟ್ಕಾ ಜತೆಗಿನ ಸಹವಾಸ ಅಡಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರತೊಡಗಿತ್ತು. ‘ಅಂಕೋರ್ ಗುಟ್ಕಾ ಕಂಪನಿ’ ವಿರುದ್ಧ ‘ಆಸ್ತಮಾ ಕೇರ್ ಸೊಸೈಟಿ’ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಅಡಿಕೆ ಬಗ್ಗೆ ಮಾಹಿತಿ ಪಡೆಯಲು 2001ರಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿತ್ತು. ಗುಟ್ಕಾದಲ್ಲಿ ಮಿಶ್ರಣ ಮಾಡಿದ್ದ ಅಡಿಕೆಯನ್ನು ಪರೀಕ್ಷೆಗೆ ಒಳಪಡಿಸಿದ್ದ ಸಮಿತಿ, ‘ಅಡಿಕೆ ಹಾನಿಕರ, ಮನುಷ್ಯರು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ’ ಎಂದು ವರದಿ ನೀಡಿತ್ತು. ಅಂದಿನಿಂದ ಅಡಿಕೆ ವಿಷಯದಲ್ಲಿ ರಾಜಕಾರಣ ಪ್ರವೇಶಿಸಿತು. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದ ನಂತರ ಇದೇ ವರದಿ ಇಟ್ಟುಕೊಂಡು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಹ ಸಲ್ಲಿಸಿತ್ತು. 2008, 2013ರ ವಿಧಾನಸಭಾ ಚುನಾವಣೆ, 2009, 2014ರ ಲೋಕಸಭಾ ಚುನಾವಣೆಯಲ್ಲಿ ಇದೇ ವಿಷಯ ಮುಂದಿಟ್ಟುಕೊಂಡು ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ನಿರಂತರ ವಾಗ್ದಾಳಿ ನಡೆಸಿತ್ತು. ಮಲೆನಾಡು ಭಾಗದಲ್ಲಿ ತನ್ನ ಮತಬ್ಯಾಂಕ್‌ ವೃದ್ಧಿಸಿಕೊಳ್ಳಲು ಬಿಜೆಪಿಯು ಅಡಿಕೆಯನ್ನು ಬಳಸಿಕೊಂಡಿತ್ತು.

‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಯುಪಿಎ ಸರ್ಕಾರ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರಿಂದಲೇ ಅಡಿಕೆ ನಿಷೇಧದ ತೂಗುಗತ್ತಿ ಎದುರಿಸುತ್ತಿದೆ. ಇದರಿಂದ ಅಡಿಕೆಯ ಮಾನ ಹರಾಜಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ದಾರಿಯಾಗಿದೆ’ ಎಂದು ಟೀಕಿಸುತ್ತಲೇ ಬಂದ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಅನಿವಾರ್ಯವಾಗಿ ಕೋರ್ಟ್‌ಗೆ ಹಿಂದೆ ಸಲ್ಲಿಸಿದ್ದ ‘ಹಾನಿಕಾರಕ’ ಎಂಬ ಅಫಿಡವಿಟ್‌ ಅನ್ನೇ ಪುನರ್‌ ಸಲ್ಲಿಸಿತ್ತು. ಇದು ಕಾಂಗ್ರೆಸ್, ಜೆಡಿಎಸ್‌ ಸೇರಿದಂತೆ ಇತರೆ ಪಕ್ಷಗಳಿಗೆ ಟೀಕಾಸ್ತ್ರವಾಯಿತು. ಸುಪ್ರಿಂಕೋರ್ಟ್‍ನಲ್ಲಿ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಬೆಳೆಗಾರರ ಭವಿಷ್ಯ ತೂಗುಗತ್ತಿಯಲ್ಲಿದೆ.

ಈ ಮಧ್ಯೆ 2018ರ ಸಂಸತ್ ಅಧಿವೇಶನದಲ್ಲಿ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು, ‘ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್ ಬರುತ್ತದೆ. ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಜತೆ ಚರ್ಚಿಸಿ ಅಡಿಕೆ ಸೇವನೆ ನಿಷೇಧಿಸುವ ಕುರಿತು ನಿರ್ಧರಿಸಲಾಗುವುದು’ ಎಂದು ಹೇಳಿಕೆ ನೀಡಿದ್ದರು. ನಂತರ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ‘ಅಡಿಕೆ ಕ್ಯಾನ್ಸರ್‌ಕಾರಕ, ಬೆಳೆಯನ್ನೇ ನಿಷೇಧ ಮಾಡಬೇಕು’ ಎಂದು ನೀಡಿದ್ದ ಹೇಳಿಕೆ ತಲ್ಲಣ ಮೂಡಿಸಿತ್ತು. ವಿವಾದ ತಣ್ಣಗಾಗಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿ, ‘ಅಡಿಕೆಗೆ ಗೌರವ ತಂದುಕೊಡುತ್ತೇವೆ. ಬೆಳೆಗಾರರ ಹಿತರಕ್ಷಣೆ ಮಾಡುತ್ತೇವೆ’ ಎಂಬ ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ತೀರ್ಥಹಳ್ಳಿ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ‘ಅಡಿಕೆ ಕಾರ್ಯಪಡೆ’ ರಚಿಸಿತ್ತು. ಕಾರ್ಯಪಡೆ ಮನವಿ ಮೇರೆಗೆ ರಾಮಯ್ಯ ಶಿಕ್ಷಣ ಸಂಸ್ಥೆಯ ಅನ್ವಯಿಕ ವಿಜ್ಞಾನ ವಿಭಾಗ ಅಡಿಕೆ ಕುರಿತು ಸಂಶೋಧನೆ ನಡೆಸಿತ್ತು. ‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಔಷಧೀಯ ಗುಣಗಳನ್ನು ಒಳಗೊಂಡಿದೆ’ ಎಂದು ಸಂಶೋಧನೆಯ ಬಳಿಕ ವರದಿ ನೀಡಿದೆ. ಈ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕಿದೆ.

‘ಅಡಿಕೆಯ ಸಾಂಪ್ರದಾಯಿಕತೆ, ಮೌಲ್ಯ, ಪ್ರಾಚೀನತೆ ಕುರಿತು ಕೇಂದ್ರ ಸರ್ಕಾರ, ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದೆ. ತಂಬಾಕಿನಿಂದ ಕ್ಯಾನ್ಸರ್‌ ಹರಡುತ್ತದೆ ಎನ್ನುವುದು ಸಾಬೀತಾಗಿದ್ದರೂ, ತಂಬಾಕು ನಿಷೇಧಿಸದ ಸರ್ಕಾರ, ಔಷಧೀಯ ಗುಣಗಳುಳ್ಳ ಅಡಿಕೆ ನಿಷೇಧಿಸಲು ಹೊರಟಿದೆ’ ಎಂದು ವಿವಿಧ ಪಕ್ಷಗಳು ಟೀಕಿಸಿವೆ.

‘ತೊಗರಿ’ಯ ಜಿದ್ದಾಜಿದ್ದಿ

ಕಲಬುರಗಿ, ಯಾದಗಿರಿ, ಬೀದರ್‌ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ತೊಗರಿ ಬೆಳೆ ಸಮಸ್ಯೆಗಳು ಸದ್ದು ಮಾಡಿವೆ. ಈ ಜಿಲ್ಲೆಗಳಲ್ಲಿ ತೊಗರಿ ಬೆಳೆಯಲಾಗುತ್ತದೆ. ಕಳೆದ ವರ್ಷ ಅತಿವೃಷ್ಟಿ, ಅನಾವೃಷ್ಟಿ ಹಾಗೂ ನೆಟೆ ರೋಗದಿಂದಾಗಿ 2.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಗೆ ಹಾನಿಯಾಗಿತ್ತು. ಈ ಸಮಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ರೈತರಿಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ. ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಬಿಜೆಪಿ ಶಾಸಕರಿಗೂ ಘೇರಾವ್‌ ಮಾಡಲಾಗಿದೆ. ತೊಗರಿ ಬೆಳೆಗಾಗರಿಗೆ ₹ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು.

ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ, ‘ನಮ್ಮ ಸರ್ಕಾರ ತೊಗರಿ ಬೆಳೆಗೆ ಸಂಭವಿಸಿದ ಬೆಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪ್ರತಿ ಹೆಕ್ಟೇರ್‌ಗೆ ₹ 10 ಸಾವಿರ ನೀಡಿದೆ. ₹ 223 ಕೋಟಿ ಪರಿಹಾರದ ಮೊತ್ತವನ್ನೂ ನೀಡಿದೆ. ಬಿಜೆಪಿ ಬೆಳೆಗಾರರ ಪರವಾಗಿದೆ’ ಎಂದು ಪ್ರತಿಪಾದಿಸಿದೆ.

ಕಲಬುರಗಿಯಲ್ಲಿರುವ ತೊಗರಿ ಮಂಡಳಿಗೆ ₹ 500 ಕೋಟಿ ಹಣ ಬಿಡುಗಡೆ ಮಾಡಬೇಕು. ಕಲಬುರಗಿಯಲ್ಲಿ ತೊಗರಿ ಪಾರ್ಕ್ ನಿರ್ಮಿಸಬೇಕು. ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು ಎನ್ನುವ ಬೇಡಿಕೆಗಳು ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ.

ತೆಂಗು ಬೆಳೆಗಾರರ ಸಿಟ್ಟಿಗೆ ಸಚಿವರೇ ಸೋತಿದ್ದರು

ತೆಂಗಿನ ಬೆಳೆ ಹಾಗೂ ಬೆಲೆ ಹಳೇ ಮೈಸೂರು ಪ್ರಾಂತ್ಯದ ಕ್ಷೇತ್ರಗಳ ರಾಜಕೀಯದ ಮೇಲೆ ಪರಿಣಾಮ ಬೀರುತ್ತಲೇ ಬಂದಿದೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಟಿ.ಬಿ.ಜಯಚಂದ್ರ ಕೃಷಿ ಸಚಿವರಾಗಿದ್ದರು. ಆಗ ತೆಂಗು ಬೆಳೆಗೆ ನುಸಿ ಪೀಡೆ ಇನ್ನಿಲ್ಲದಂತೆ ಬಾಧಿಸಿತ್ತು. ರೋಗ ನಿಯಂತ್ರಿಸುವ ಸಲುವಾಗಿ ಮರದ ಕಾಂಡಕ್ಕೆ ಔಷಧ ಕೊಡಿಸಿದ್ದರು. ಇದರಿಂದ ನುಸಿಪೀಡೆ ಕಡಿಮೆಯಾಗುವ ಬದಲು ಮರಗಳೇ ಒಣಗಿ ಹೋಗಿದ್ದವು. ಸರಿಯಾದ ರೀತಿಯಲ್ಲಿ ಪ್ರಯೋಗ ಮಾಡದೆ ಔಷಧ ಕೊಡಿಸಿ ಮರ ಸಾಯುವಂತೆ ಮಾಡಿದರು ಎಂದು ತೆಂಗು ಬೆಳೆಗಾರರು ಸಿಟ್ಟಾದರು. ಇದರ ಪರಿಣಾಮವಾಗಿ 2004ರಲ್ಲಿ ನಡೆದ ಚುನಾವಣೆಯಲ್ಲಿ ಜಯಚಂದ್ರ ಸೋಲುವಂತಾಯಿತು.

ಇತ್ತೀಚಿನ ದಿನಗಳಲ್ಲಿ ಕೊಬ್ಬರಿ ಬೆಲೆ ಕುಸಿದು ಪಾತಾಳ ಮುಟ್ಟಿದ್ದರೂ ಈ ವಿಷಯ ಅಷ್ಟೊಂದು ತೀವ್ರತೆ ಪಡೆದುಕೊಂಡಿರಲಿಲ್ಲ. ಆದರೆ, ಚುನಾವಣೆ ಹೊತ್ತಿಗೆ ಈ ಕುರಿತು ಚರ್ಚೆ ಜೋರಾಗುತ್ತಿದೆ. ತೆಂಗು ಬೆಳೆಯುವ ತಿಪಟೂರು, ತುರುವೇಕೆರೆ, ಕುಣಿಗಲ್ ಭಾಗದಲ್ಲಿ ಹೆಚ್ಚು ಪ್ರಸ್ತಾಪವಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ತೆಂಗಿಗೆ ಉತ್ತಮ ಬೆಲೆ ಕೊಡಿಸುವಂತಹ ಪಕ್ಷ, ವ್ಯಕ್ತಿಗಳಿಗೆ ಮತ ನೀಡಬೇಕು ಎಂಬ ಅಭಿಪ್ರಾಯ ಬಲಗೊಳ್ಳುತ್ತಿದೆ.

ವಿದೇಶಿ ಅಡಿಕೆ ಆಮದು ತಡೆಗೆ ವಿಫಲ

ಅಡಿಕೆ ಬೆಲೆ ಸ್ಥಿರತೆ ಕೇಂದ್ರ ಸರ್ಕಾರದ ಜವಾಬ್ದಾರಿ. ವಿದೇಶದಿಂದ ಆಮದು ಮಾಡಿಕೊಳ್ಳುವ ಒಂದು ಕ್ವಿಂಟಲ್ ಅಡಿಕೆಗೆ ₹ 25,100 ಕನಿಷ್ಠ ಬೆಲೆ ನಿಗದಿಯಾಗಿದೆ. ಆದರೂ, ಕಳ್ಳ ಸಾಗಣೆ ಮೂಲಕವು ಅಡಿಕೆ ತರಲಾಗುತ್ತಿದೆ. ಇದು ದೇಸಿ ಅಡಿಕೆ ಧಾರಣೆ ಕುಸಿಯಲು ಪ್ರಮುಖ ಕಾರಣ. ಅಡಿಕೆ ಬೆಳೆಗಾರರ ಸಂರಕ್ಷಣೆಗೆ ಬದ್ಧ ಎನ್ನುವ ಬಿಜೆಪಿ ಕೇಂದ್ರದ ಮೇಲೆ ಒತ್ತಡ ತಂದು ವಿದೇಶಿ ಅಡಿಕೆಗೆ ಕಡಿವಾಣ ಹಾಕಬೇಕು

ಬಿ.ಎ.ರಮೇಶ್ ಹೆಗ್ಡೆ, ಕಾಂಗ್ರೆಸ್‌ ಮುಖಂಡ, ಶಿವಮೊಗ್ಗ.

ಮಧ್ಯವರ್ತಿಗಳಿಂದಲೇ ಧಾರಣೆ ಏರಿಳಿತ

ಅಡಿಕೆ ಧಾರಣೆ ಕುಸಿತ ಹಲವು ಚುನಾವಣೆಗಳಲ್ಲಿ ರಾಜಕೀಯ ತಲ್ಲಣಗಳನ್ನೇ ಸೃಷ್ಟಿಸಿದೆ. ಹಾಗೆ ನೋಡಿದರೆ ಧಾರಣೆ ನಿಯಂತ್ರಣ ಸರ್ಕಾರಗಳ ಬಳಿ ಇಲ್ಲ. ಗುಟ್ಕಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡ ಕೆಲ ಮಧ್ಯವರ್ತಿಗಳು ತಮಗೆ ಬೇಕಾದ ಹಾಗೆ ಧಾರಣೆ ನಿರ್ಧಾರ ಮಾಡುತ್ತಾರೆ. ಆದರೆ, ಬೆಲೆ ಕುಸಿತದ ಆಕ್ರೋಶವನ್ನು ನಮ್ಮನ್ನಾಳುವ ಸರ್ಕಾರಗಳು ಎದುರಿಸುತ್ತಾ ಬಂದಿವೆ. ರೈತರೇ ನೇರ ಮಾರುಕಟ್ಟೆ ಪ್ರವೇಶಿಸಿ ವ್ಯಾಪಾರ ಮಾಡುವಂತಹ ಸ್ಥಿತಿ ನಿರ್ಮಾಣವಾದಾಗಲಷ್ಟೇ ಧಾರಣೆ ಸ್ಥಿರತೆ ಸಾಧ್ಯ

ಎನ್‌.ಎಸ್‌.ರುದ್ರೇಶ್, ಹುನುಮಂತಾಪುರ, ಅಡಿಕೆ ಬೆಳೆಗಾರ.

ವೈಜ್ಞಾನಿಕ ಬೆಲೆ ನಿಗದಿಯೇ ಪರಿಹಾರ

ಬೆಲೆ ಏರಿಳಿಕೆ ಎನ್ನುವುದು ಎಷ್ಟೋ ಸರ್ಕಾರಗಳ ಮೇಲೆ ಪರಿಣಾಮ ಬೀರಿವೆ. ಈರುಳ್ಳಿ ಬೆಲೆ ಏರಿಕೆಯ ವಿರುದ್ಧದ ಜನರ ಆಕ್ರೋಶ ದೆಹಲಿಯಲ್ಲಿ ಸುಷ್ಮಾ ಸ್ವರಾಜ್ ಅವರ ಸರ್ಕಾರವನ್ನೇ ಉರುಳಿಸಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವ ಸರ್ಕಾರವೂ ಬೆಲೆ ಸ್ಥಿರತೆಯತ್ತ ಗಮನ ಹರಿಸಿಲ್ಲ. ಯಾವುದೇ ಸಿದ್ಧ ಸಾಮಗ್ರಿಗೆ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಇರುವಂತೆ ರೈತರು ಬೆಳೆಯುವ ಪ್ರತಿ ಬೆಳೆಗೂ ಬೆಲೆ ನಿಗದಿಯಾಗಬೇಕು. ಬೆಂಬಲ ಬೆಲೆ ಬದಲು ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಆಗ ಮಾತ್ರ ಬೆಳೆ ರಾಜಕಾರಣ‌ಕ್ಕೆ ವಿರಾಮ ಸಿಗುತ್ತದೆ

ಎಚ್‌.ಆರ್.ಬಸವರಾಜಪ್ಪ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ.

ಹೋರಾಟ ಅನಿವಾರ್ಯ

ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡು ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಸರ್ಕಾರವು ಸಮರ್ಪಕ ಪರಿಹಾರ ನೀಡದೇ ಮತ್ತು ಸಂಕಷ್ಟಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ತೋರುವುದು ಮುಂದುವರೆಸಿದೆ. ರೈತರ ಬೇಡಿಕೆ ಈಡೇರಿಕೆಗೆ ಹೋರಾಟ ಮುಂದುವರೆಸುತ್ತೇವೆ

ಶರಣಬಸಪ್ಪ ಮಮಶೆಟ್ಟಿ, ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕ, ಕಲಬುರಗಿ

ಬುದ್ಧಿ ಕಲಿಸುತ್ತೇವೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೊಬ್ಬರಿಗೆ ಸೂಕ್ತ ಬೆಲೆ ಕೊಡಿಸುವಲ್ಲಿ ವಿಫಲವಾಗಿವೆ. ಪ್ರತಿ ಬಾರಿಯೂ ಚುನಾವಣೆ ಸಮಯದಲ್ಲಿ ಪ್ರಣಾಳಿಕೆಗಳನ್ನು ಹಿಡಿದು ರೈತರ ಬಳಿ ಬಂದು ಹುಸಿ ಭರವಸೆಗಳನ್ನು ನೀಡುತ್ತಿದ್ದಾರೆ. ಬೆಲೆ ಏರಿಕೆಗಾಗಿ ಹೋರಾಟ ಮಾಡಿದರೂ ಕಾಳಜಿ ತೋರದ ಸಚಿವರು, ಸರ್ಕಾರಕ್ಕೆ ರಾಜ್ಯದ ರೈತರೇ ಬುದ್ದಿ ಕಲಿಸುತ್ತಾರೆ. ‘ಕಲ್ಪತರು ನಾಡು’ ತಿಪಟೂರಿನಲ್ಲಿ ಕೊಬ್ಬರಿಗೆ ಬೇಡಿಕೆ ಇಲ್ಲದೇ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ

ಬಿ.ಬಿ.ಸಿದ್ದಲಿಂಗಮೂರ್ತಿ, ಬಳ್ಳೇಕಟ್ಟೆ, ಗೌರವಾಧ್ಯಕ್ಷರು, ಕೊಬ್ಬರಿ ಬೆಲೆ ಹೋರಾಟ

ಸಮಿತಿ, ತಿಪಟೂರು

ಆಮದು ತೆರಿಗೆ ಹೆಚ್ಚಳದಿಂದ ಅನುಕೂಲ

ಅಡಿಕೆ ಬೆಳೆಗಾರರ ಹಿತಕಾಯಲು ಬಿಜೆಪಿ ಸರ್ಕಾರವು ಶ್ರಮಿಸುತ್ತಿದೆ. ಅಡಿಕೆ ಮರಗಳನ್ನು ಬಾಧಿಸುತ್ತಿರುವ ಎಲೆ ಚುಕ್ಕಿ, ಕೊಳೆ ರೋಗ, ಹಳದಿ ಎಲೆ ರೋಗಗಳ ಹತೋಟಿಗೆ ಪ್ರಯತ್ನ ಮಾಡುತ್ತಿದೆ. ಆದರೆ, ಫಲಿತಾಂಶ ಆಶಾದಾಯಕವಾಗಿಲ್ಲ. ಆಮದು ತೆರಿಗೆ ಸ್ವಲ್ಪ ಹೆಚ್ಚಿಸಿರುವುದು ಅನುಕೂಲವಾಗಿದೆ. ಅಡಿಕೆ ಬೆಲೆ ನಾಲ್ಕು ವರ್ಷಗಳಿಂದ ಪರವಾಗಿಲ್ಲ, ಧಾರಣೆಯಲ್ಲಿ ತೀವ್ರ ಏರಿಳಿತ ಇಲ್ಲ. ಸರಾಸರಿ ಸ್ಥಿರತೆ ಇದ್ದರೆ ಬೆಳೆಗಾರರು ಮತ್ತು ವ್ಯಾಪಾರಸ್ಥರಿಗೆ ಒಳ್ಳೆಯದು

ಎ.ಎಸ್‌.ನಯನ, ಜಿಲ್ಲಾ ಉಪಾಧ್ಯಕ್ಷ, ಬಿಜೆಪಿ, ಚಿಕ್ಕಮಗಳೂರು

ಜಾರಿಯಾಗದ ಗೋರಖ್ ಸಿಂಗ್ ವರದಿ

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಗೋರಖ್‌ ಸಿಂಗ್‌ ವರದಿ ಜಾರಿ ಮಾಡಬೇಕು ಎಂಬ ಆಗ್ರಹ ಮಲೆನಾಡಲ್ಲಿ ಮತ್ತೆ ಪ್ರತಿಧ್ವನಿಸುತ್ತಿದೆ. ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಯುಪಿಎ ನೇತೃತ್ವದ ಕೇಂದ್ರ ಸರ್ಕಾರ 2007ರಲ್ಲಿ ಕೇಂದ್ರ ತೋಟಗಾರಿಕಾ ಇಲಾಖೆಯ ಆಯುಕ್ತರಾಗಿದ್ದ ಗೋರಖ್‌ ಸಿಂಗ್ ಅವರನ್ನು ನೇಮಿಸಿತ್ತು. ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ಹಾಸನ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ ಸೇರಿದಂತೆ ಅಡಿಕೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಂಗ್‌ ಅವರು, 2009ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಮಲೆನಾಡಿನ ಸಣ್ಣ ಪ್ರಮಾಣದ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಹಲವು ಶಿಫಾರಸುಗಳನ್ನು ಮಾಡಿದ್ದರು.

‘ರಾಜ್ಯದ ಬೇರೆ ಪ್ರದೇಶಗಳಲ್ಲಿ ಅಡಿಕೆ ಬೆಳೆದರೂ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗದಿಂದ ಮಲೆನಾಡಿನ ಭಾಗದ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ರೋಗ ಬಾಧೆಗೆ ತುತ್ತಾದ 10 ಎಕರೆ ಒಳಗಿನ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಉಚಿತ ಔಷಧಗಳನ್ನು ದೊರಕಿಸಬೇಕು. ಹೊಸ ಸಾಲಸೌಲಭ್ಯ, ಆರ್ಥಿಕ ನೆರವು, ಪ್ರೋತ್ಸಾಹಧನ ಒದಗಿಸಬೇಕು ಎನ್ನುವುದು’ ವರದಿಯ ಪ್ರಮುಖ ಶಿಫಾರಸುಗಳು. ವರದಿ ಜಾರಿಗೆ ಜೆಡಿಎಸ್‌ನ ಎಚ್‌.ಡಿ.ದೇವೇಗೌಡರು ಸಂಸತ್‌ನಲ್ಲೇ ಆಗ್ರಹಿಸಿದ್ದರು. ಯುಪಿಎ ಅಧಿಕಾರ ಕಳೆದುಕೊಂಡು ಎನ್‌ಡಿಎ ಗದ್ದುಗೆ ಏರಿದರೂ ವರದಿಯ ಶಿಫಾರಸುಗಳು ಅನುಷ್ಠಾನಗೊಂಡಿಲ್ಲ. ವಿಧಾನಸಭಾ ಅಧಿವೇಶನಗಳಲ್ಲೂ ಸಮಸ್ಯೆಗಳು ಪ್ರತಿಧ್ವನಿಸಿದರೂ, ಪರಿಣಾಮ ಶೂನ್ಯ.

ಸಮಿತಿ ಅಧ್ಯಯನ ಮಾಡುವಾಗ ರಾಜ್ಯದಲ್ಲಿ ಇದ್ದ ಅಡಿಕೆ ಬೆಳೆ ಕ್ಷೇತ್ರ 1.74 ಲಕ್ಷ ಹೆಕ್ಟೇರ್‌. ಅಡಿಕೆ ಬೆಳೆಯನ್ನು ಅಚ್ಚುಕಟ್ಟು, ಕೊಳವೆ ಬಾವಿ ಆಶ್ರಿತ ಬಯಲು ಸೀಮೆಯಲ್ಲಿ ಬೆಳೆಯದಂತೆ ನಿಷೇಧಿಸಬೇಕು ಎಂದು ಗೋರಖ್‌ ಸಿಂಗ್ ವರದಿ ಹೇಳಿದ್ದರೂ, ಇಂದು ಅಡಿಕೆ ಬೆಳೆ ಪ್ರದೇಶ 8 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT