ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಟೋಲ್‌ ಪ್ಲಾಜಾದಲ್ಲಿ ₹1.75 ಕೋಟಿ ಪತ್ತೆ

ಲೋಕಸಭೆ ಚುನಾವಣೆಯಲ್ಲಿ ಹಂಚಲು ಅಕ್ರಮವಾಗಿ ಹಣ ಸಂಗ್ರಹದ ಶಂಕೆ
Last Updated 3 ಮೇ 2019, 13:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಂಗಳೂರು–ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ಬಾಗೇಪಲ್ಲಿ ಬಳಿ ಇರುವ ಟೋಲ್‌ ಪ್ಲಾಜಾದಲ್ಲಿ ಚುನಾವಣೆ ಉದ್ದೇಶಕ್ಕಾಗಿ ಅಕ್ರಮವಾಗಿ ₹1.75 ಕೋಟಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೆರೆಗೆ ಆದಾಯ ತೆರಿಗೆ ಮತ್ತು ಚುನಾವಣಾಧಿಕಾರಿಗಳು ಗುರುವಾರ ಟೋಲ್‌ ಪ್ಲಾಜಾ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶಕ್ಕಾಗಿ ರಾಜಕಾರಣಿಯೊಬ್ಬರು ಈ ಹಣವನ್ನು ಟೋಲ್‌ ಪ್ಲಾಜಾದ ಕೊಠಡಿಯೊಂದರಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಮಾಹಿತಿಯನ್ನು ನೆರೆಯ ಆಂಧ್ರಪ್ರದೇಶದ ಅನಂತಪುರ ಎಸ್ಪಿ ಅವರು ಜಿಲ್ಲೆಯ ಚುನಾವಣಾಧಿಕಾರಿ ಮತ್ತು ಎಸ್ಪಿಯವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಅದರ ಬೆನ್ನಲ್ಲೇ ಟೋಲ್‌ ಪ್ಲಾಜಾ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಹಣದ ಮೂಲದ ಮಾಹಿತಿ ಕಲೆ ಹಾಕುವ ಜತೆಗೆ ಕೊಠಡಿಯಲ್ಲಿ ಸಂಗ್ರಹಿಸಿಟ್ಟ ಹಣವನ್ನು ಎಣಿಕೆ ಮಾಡುತ್ತಿದ್ದಾರೆ.

‘ಚುನಾವಣೆಯಲ್ಲಿ ಹಂಚಲು ಟೋಲ್ ಪ್ಲಾಜಾದಲ್ಲಿ ಅಕ್ರಮವಾಗಿ ಹಣ ಶೇಖರಿಸಿಡಲಾಗಿದೆ. ಆ ಹಣವನ್ನು ಇವತ್ತು ಕೆಲವರು ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ನಮಗೆ ಸಿಕ್ಕ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಟೋಲ್‌ ಪ್ಲಾಜಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆ ಸಿಬ್ಬಂದಿ ಟೋಲ್‌ ಸಂಗ್ರಹದ ಬಗ್ಗೆ ಮಾಹಿತಿ ತೋರಿಸುತ್ತಿಲ್ಲ. ಆ ಹಣ ವಶಪಡಿಸಿಕೊಳ್ಳುತ್ತಿದ್ದೇವೆ’ ಎಂದು ಅನಿರುದ್ಧ್ ಶ್ರವಣ್ ಹೇಳಿದರು.

‘ಟೋಲ್‌ಪ್ಲಾಜಾ ಸಿಬ್ಬಂದಿ ಆ ಹಣ ಟೋಲ್‌ ಸಂಗ್ರಹದ ಹಣ ಎಂದು ಹೇಳುತ್ತಿದ್ದಾರೆ. ಆದರೆ ನಿತ್ಯ ಅಷ್ಟೊಂದು ಪ್ರಮಾಣದಲ್ಲಿ ಹಣ ಸಂಗ್ರಹವಾಗಲು ಸಾಧ್ಯವಿಲ್ಲ.

ದುಡ್ಡು ಎಲ್ಲಿಂದ ಬಂತು ಎಂದು ಪರಿಶೀಲನೆ ಮಾಡುತ್ತಿದ್ದಾರೆ. ಹಣಕ್ಕೆ ಸರಿಯಾಗಿ ಲೆಕ್ಕ ಕೊಟ್ಟರೆ ಅವರಿಗೆ ವಾಪಸ್ ನೀಡಲಾಗುತ್ತದೆ. ಇಲ್ಲದಿದ್ದರೆ ವಶಪಡಿಸಿಕೊಳ್ಳುತ್ತೇವೆ. ಈವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ಎಸ್ಪಿ ಕೆ.ಸಂತೋಷ್‌ ಬಾಬು ತಿಳಿಸಿದರು.

ಸದ್ಯ ಟೋಲ್ ಪ್ಲಾಜಾದಲ್ಲಿ ಹೈದರಾಬಾದ್‌ ಮೂಲದ ಚಾಬ್ರಾಸ್‌ ಅಸೋಸಿಯೇಟ್ಸ್‌ ಕಂಪೆನಿ ರಸ್ತೆ ಬಳಕೆದಾರರಿಂದ ಶುಲ್ಕ ಸಂಗ್ರಹಿಸುವ ಗುತ್ತಿಗೆ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT