ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020- ಬಯೋಪಿಕ್‌ ವರ್ಷ

Last Updated 24 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಈಗ ಸಿನಿಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳು, ಕ್ರೀಡಾ ಸಾಧಕರ ಕುರಿತಾದ ಬಯೋಪಿಕ್‌ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ಬಾಲಿವುಡ್‌ನಲ್ಲಿ ಸಾಲು ಸಾಲು ಬಯೋಪಿಕ್‌ ಸಿನಿಮಾಗಳು ತಯಾರಾಗುತ್ತಲೇ ಇರುತ್ತವೆ. ಈ ಸಿನಿಮಾಗಳ ನೈಜಕತೆ ಆಧಾರಿತವಾಗಿದ್ದರಿಂದ ಕತೆ ಹಾಗೂ ನಿರೂಪಣೆಯಿಂದ ಜನರಿಗೆ ಬೇಗ ಆಪ್ತವಾಗುತ್ತವೆ. ಪ್ರೇಕ್ಷಕರು ಸಹ ನಿಜ ಜೀವನದ, ಜೀವನಕತೆಯಧಾರಿಸಿದ ಸಿನಿಮಾಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವುದರಿಂದ ನಿರ್ದೇಶಕರು ಬಯೋಪಿಕ್‌ ಸಿನಿಮಾಗಳ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. 2020 ಕೂಡ ಇದರಿಂದ ಹೊರತಾಗಿಲ್ಲ. 2020ರಲ್ಲಿ ಬಿಡುಗಡಯಾಗುವ ಕೆಲ ಬಯೋಪಿಕ್‌ ಸಿನಿಮಾಗಳು ಇಲ್ಲಿವೆ.

ಛಪಾಕ್‌

ಆ್ಯಸಿಡ್‌ ದಾಳಿಗೊಳಗಾದ ಲಕ್ಷ್ಮೀ ಅಗರ್‌ವಾಲ್‌ ಜೀವನಕತೆಯಧಾರಿಸಿದ ಸಿನಿಮಾವಿದು. ಇದರಲ್ಲಿ ಲಕ್ಷ್ಮೀ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್‌ ಈಚೆಗೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಸಾಮಾಜಿಕ ಹೋರಾಟಗಾರನಾಗಿ ವಿಕ್ರಮ್‌ ಮಸ್ಸೆ ಹಾಗೂ ಜೋಡಿಯಾಗಿ ಅಲೋಕ್‌ ದೀಕ್ಷಿತ್‌ ನಟಿಸಿದ್ದಾರೆ. ಜನವರಿ 10ಕ್ಕೆ ಬಿಡುಗಡೆಯಾಗಲಿದೆ.

ಗುಂಜನ್‌ ಸಕ್ಸೇನಾ– ದಿ ಕಾರ್ಗಿಲ್‌ ಗರ್ಲ್‌

ಕರಣ್‌ ಜೋಹರ್‌ ಅವರ ‘ಧಡಕ್‌’ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದ ನಟಿ ಜಾಹ್ನವಿ ಕಫೂರ್‌ ಈಗ ಭಾರತೀಯ ವಾಯುಪಡೆಯ ಮೊದಲ ಮಹಿಳೆ ಎಂದು ಖ್ಯಾತಿಗಳಿಸಿರುವ ಗುಂಜನ್‌ ಸಕ್ಸೇನಾ ಅವರ ಜೀವನಕತೆಯಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಾರ್ಗಿಲ್‌ ಯುದ್ಧದಲ್ಲಿ ಗಾಯಗೊಂಡಿದ್ದ ಹಲವಾರು ಮಂದಿ ಸೈನಿಕರನ್ನು ಗುಂಜನ್‌ ಸಕ್ಸೇನಾ, ತನ್ನ ಸಹೋದ್ಯೋಗಿ ಶ್ರೀವಿದ್ಯಾ ರಾಜನ್‌ ಅವರ ನೆರವಿನಿಂದ ತನ್ನ ವಿಮಾನದಲ್ಲಿ ಹತ್ತಿಸಿ, ಸುರಕ್ಷಿತ ಪ್ರದೇಶಕ್ಕೆ ಅವರನ್ನು ಕಳುಹಿಸಿದ್ದರು. ಇದೇ ಕತೆ ಈ ಸಿನಿಮಾದ್ದು.

ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್‌ ಅಡಿ, ಕರಣ್‌ ಜೋಹರ್‌ ನಿರ್ಮಾಣ ಮಾಡುತ್ತಿದ್ದಾರೆ. ಹೊಸ ನಿರ್ದೇಶಕ ಶರಣ್‌ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪಂಕಜ್‌ ತ್ರಿಪಾಠಿ ಹಾಗೂ ಅಂಗದ್‌ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಮುಂದಿನ ಮಾರ್ಚ್‌ 13ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಕಪಿಲ್‌ ದೇವ್‌ ಜೀವನ ಕತೆ 83

ಈ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾದಾಗಿನಿಂದಲೂ ಈ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 83 ಸಿನಿಮಾವು ಕ್ರಿಕೆಟಿಗ ಕಪಿಲ್‌ ದೇವ್‌ ಜೀವನಕತೆ ಆಧಾರಿತವಾಗಿದ್ದು, ನಟ ರಣವೀರ್‌ ಸಿಂಗ್‌, ಕಪಿಲ್‌ ಪಾತ್ರ ನಿರ್ವಹಿಸಲಿದ್ದಾರೆ. ಈ ಸಿನಿಮಾದಲ್ಲಿ 1983ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದ ಕತೆಯನ್ನು ಹೊಂದಿದೆ. ಈ ಚಿತ್ರವು ಮುಂದಿನ ಏಪ್ರಿಲ್‌ 10ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ತಲೈವಿ– ಜಯಾ ಜೀವನದ ಅನಾವರಣ

ರಾಜಕಾರಣಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರಕ್ಕೆ ನಟಿ ಕಂಗನಾ ರನೋಟ್‌ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾವನ್ನು ನಿರ್ದೇಶಿಸುತ್ತಿರುವವರು ಎ. ಎಲ್‌. ವಿಜಯ್‌. ಈ ಚಿತ್ರದಲ್ಲಿ ಎಂ.ಜಿ ರಾಮಚಂದ್ರನ್‌ ಪಾತ್ರವನ್ನು ಅರವಿಂದ ಸ್ವಾಮಿ ನಿರ್ವಹಿಸಲಿದ್ದಾರೆ. ಚಿತ್ರವು ಜೂನ್‌ 26ಕ್ಕೆ ಬಿಡುಗಡೆಯಾಗಲಿದೆ.

ಸರ್ದಾರ್‌ ಉದ್ಧಮ್‌ ಸಿಂಗ್‌

ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉದ್ಧಮ್‌ ಸಿಂಗ್‌ ಕುರಿತಾಗಿದೆ. ಇದರಲ್ಲಿ ಮುಖ್ಯಪಾತ್ರದಲ್ಲಿ ವಿಕ್ಕಿ ಕೌಶಲ್‌ ನಟಿಸಲಿದ್ದಾರೆ. ನಿರ್ದೇಶನ ಸುಜಿತ್‌ ಸಿರ್ಕಾರ್‌ ಅವರದು. ಮುಂದಿನ ಅಕ್ಟೋಬರ್‌ 2 ಗಾಂಧಿ ಜಯಂತಿಗೆ ಸಿನಿಮಾ ಬಿಡುಗಡೆಯಾಗುತ್ತಿದೆ.

ಸೈನಾ

‘ಸೈನಾ’ ಚಿತ್ರವು ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಕುರಿತಾಗಿದೆ. ಈ ಮೊದಲು ಈ ಚಿತ್ರದಲ್ಲಿ ಸೈನಾ ಪಾತ್ರದಲ್ಲಿ ಶ್ರದ್ಧಾ ಕಪೂರ್‌ ನಟಿಸಲಿದ್ದಾರೆ ಎಂಬ ಸುದ್ದಿ ಮೊದಲು ಹರಡಿತ್ತು. ಈಗ ನಟಿ ಪರಿಣೀತಿ ಚೋಪ್ರಾ ಅವರು ಸೈನಾ ಪಾತ್ರದಲ್ಲಿ ಮಿಂಚಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೆಲಾ ಗೋಪಿಚಂದ್‌ ಪಾತ್ರಕ್ಕೆ ಮಾನವ್‌ ಕೌಲ್‌ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT