ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021: ತೆರೆಯಲ್ಲಿ ಮಿಣುಕು ಬೆಳಕು

Last Updated 23 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಊಹೆ ಮಾಡಲಾಗದಷ್ಟು ದೀರ್ಘಾವಧಿಯ ‘ಮಧ್ಯಂತರ ವಿರಾಮ’ ಜಗತ್ತಿನ ಹಲವಾರು ಕ್ಷೇತ್ರಗಳಿಗಾದಂತೆಯೇ ಚಿತ್ರರಂಗಕ್ಕೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ಕಾಡಿದೆ. ಈ ಮಧ್ಯೆ ಅಲ್ಲೊಂದು ಇಲ್ಲೊಂದು ಎಂಬಂತೆ ಇತಿಮಿತಿಗಳ ನಡುವಿನ ಮಿಣುಕು ದೀಪಗಳು ತೆರೆಯನ್ನು ಬೆಳಗಿ ಮರೆಯಾಗಿವೆ. ಕನ್ನಡ ಚಿತ್ರರಂಗವನ್ನು ತುಂಬಾ ಕಾಡಿದ್ದು ಮಾತ್ರ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿರ್ಗಮನ.

‘ರಾಜತಂತ್ರ’ ಸಿನಿಮಾ ಈ ಸಿನಿ ವರ್ಷಕ್ಕೊಂದು ಆರಂಭವನ್ನೇನೋ ನೀಡಿತು. ಆದರೆ ಸುಮಾರು ಮೂರು ತಿಂಗಳ ಕಾಲ ಚಿತ್ರರಂಗದ್ದು ತೀರಾ ಆಮೆ ನಡಿಗೆಯೇ. ಐದಾರು ಚಿತ್ರಗಳು ಬಂದವಾದರೂ ಗಳಿಕೆ– ಮನದಲ್ಲಿ ಉಳಿಯುವ ಚಿತ್ರಗಳು ಅಷ್ಟಕ್ಕಷ್ಟೆ. ಫೆಬ್ರುವರಿಯಲ್ಲಿ ಬಿಡುಗಡೆಯಾದ ‘ಪೊಗರು’ ಚಿತ್ರ ಸ್ವಲ್ಪ ಭರವಸೆ ಮೂಡಿಸಿತು. ಮಾರ್ಚ್‌ನಲ್ಲಿ ಬಿಡುಗಡೆಯಾದ ‘ರಾಬರ್ಟ್‌’, ಏಪ್ರಿಲ್‌ನಲ್ಲಿ ಬಿಡುಗಡೆಯಾದ ‘ಯುವರತ್ನ’ ಸದ್ದನ್ನೇನೋ ಮಾಡಿದವು. ಆದರೆ ಪ್ರೇಕ್ಷಕರನ್ನು ಹೆಚ್ಚಾಗಿ ಆನ್‌ಲೈನ್‌ ವೇದಿಕೆಯಲ್ಲಷ್ಟೇ ತಲುಪಿದವು.

ಏಪ್ರಿಲ್‌ 16ಕ್ಕೆ ಬಿಡುಗಡೆಗೊಂಡ ‘ಕೃಷ್ಣ ಟಾಕೀಸ್‌’ ಚಿತ್ರವೇ ಕೊನೆ. ಆ ಬಳಿಕ ಮೇ ಜೂನ್‌ ತಿಂಗಳಲ್ಲಿ ಕೋವಿಡ್‌ ಕಾರಣಕ್ಕೆ ಚಿತ್ರಮಂದಿರಗಳನ್ನು ಪೂರ್ಣ ಬಂದ್‌ ಮಾಡಬೇಕಾಯಿತು. ಈ ನಡುವೆ ‘ಶಿ’, ‘ಇಕ್ಕಟ್‌’ ಚಿತ್ರಗಳು ಆನ್‌ಲೈನ್‌ನಲ್ಲಿ ಬಿಡುಗಡೆಗೊಂಡವು.

ಜುಲೈ ಅಂತ್ಯದಲ್ಲಿ ಶೇ 50ರ ಆಸನ ಭರ್ತಿ ನಿಯಮದೊಂದಿಗೆ ಮತ್ತೆ ಚಿತ್ರಮಂದಿರಗಳು ತೆರೆದಾಗ ಹೊಸಬರ ಸಿನಿಮಾ ಬಂದವಾದರೂ ಪ್ರೇಕ್ಷಕರು ಸ್ವೀಕರಿಸಲೂ ಇಲ್ಲ. ಬಹುತೇಕ ಕಡೆ ಚಿತ್ರಮಂದಿರಗಳೇ ತೆರೆಯಲಿಲ್ಲ.

ಅಕ್ಟೋಬರ್‌ನಲ್ಲಿ ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’, ಸೂರಜ್‌ ಗೌಡ ನಟನೆ ನಿರ್ದೇಶನದ, ರಾಮ್‌ಕುಮಾರ್ ಮಗಳು ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಪರಿಚಿತರಾದ ‘ನಿನ್ನ ಸನಿಹಕೆ’ ಕೆಲದಿನ ಚಿತ್ರಮಂದಿರಗಳಲ್ಲಿ ಬೆಳಕು ಕಂಡವು. ಪರವಾಗಿಲ್ಲ ಅನ್ನಬಹುದಾದ ಬೆಳವಣಿಗೆಯಿದು.

ಅಕ್ಟೋಬರ್ 14ರಂದು ಚಿತ್ರಮಂದಿರಗಳಲ್ಲಿ ‘ಸಲಗ’ವೇನೋ ಸದ್ದು ಮಾಡಿತು. ಅ. 15ರಂದು ಬಿಡುಗಡೆಯಾದ ‘ಕೋಟಿಗೊಬ್ಬ –3’ ಆರ್ಥಿಕ ಕಾರಣಗಳಿಂದಾಗಿ ಎಡವಟ್ಟು ಅನುಭವಿಸಿತು.ಅದೇ ವಾರ ಬಿಡುಗಡೆಯಾಗಿದ್ದ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದ ‘ಶ್ರೀಕೃಷ್ಣ@ಜಿಮೇಲ್.ಕಾಮ್’ ಸಣ್ಣಗೆ ಕಚಗುಳಿಯಿಟ್ಟು ಸಾಗಿಬಿಟ್ಟಿತು.

ಅಕ್ಟೋಬರ್‌ನಲ್ಲಿ ಅಮೆಜಾನ್‌ ಪ್ರೈಮ್‌ನಲ್ಲಿ ರೋಹಿತ್ ಪದಕಿ ನಿರ್ದೇಶನದ ‘ರತ್ನನ್ ಪ್ರಪಂಚ’ ಸಿನಿಮಾ ಬಿಡುಗಡೆಯಾಗಿ ಆನ್‌ಲೈನ್‌ ವೇದಿಕೆಯಲ್ಲೂ ಕನ್ನಡದಲ್ಲೊಂದು ಗಟ್ಟಿ ವಸ್ತುವೂ ಬರಲು ಸಾಧ್ಯ ಎಂಬುದನ್ನು ನಿರೂಪಿಸಿತು. ಅದೇ ತಿಂಗಳುಶಿವರಾಜ್‌ ಕುಮಾರ್ ಅಭಿನಯದ ‘ಭಜರಂಗಿ –2’ ಬಿಡುಗಡೆಯಾಯಿತಾದರೂ ಪುನೀತ್‌ ರಾಜ್‌ಕುಮಾರ್‌ ಅವರ ನಿಧನ ಈ ಚಿತ್ರ ಹಾಗೂ ಇಡೀ ಉದ್ಯಮದ ಮೇಲೆ ಪರಿಣಾಮ ಬೀರಿತು.

ನವೆಂಬರ್‌ನಲ್ಲಿ ರಮೇಶ್‌ ಅರವಿಂದ್ ನಟಿಸಿ – ನಿರ್ದೆಶಿಸಿದ್ದ ‘100’, ಮನುರಂಜನ್‌ ರವಿಚಂದ್ರನ್ ಅಭಿನಯದ, ಭರತ್ ಎಸ್‌. ನಾವುಂದ ನಿರ್ದೇಶನದ ‘ಮುಗಿಲ್‌ ಪೇಟೆ’ ಮತ್ತು ರಾಜ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಬಿಡುಗಡೆಗೊಂಡವು.ಭಿನ್ನವಸ್ತು, ವಿಷಯ, ಪ್ರಾದೇಶಿಕತೆ ಹಾಗೂ ನಿರೂಪಣೆಯ ಕಾರಣಕ್ಕೆ ಗರುಡಗಮನಕ್ಕೆ ಪ್ರೇಕ್ಷಕರು ಭರ್ಜರಿ ಸ್ವಾಗತ ನೀಡಿದರು.

‘ಅಕ್ಷಿ’ ಚಿತ್ರಕ್ಕೆ ಮತ್ತು ಸಾಹಸ ಸಂಯೋಜಕ ವಿಕ್ರಂ ಮೋರ್‌ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಈ ವರ್ಷ ನೆನಪಿನಲ್ಲಿ ಉಳಿಯುವ ಬೆಳವಣಿಗೆಗಳು.

ವರ್ಷಾಂತ್ಯದ ಚಳಿಯ ಹಾಗೆ ಚಿತ್ರರಂಗದಲ್ಲೂ ಒಂದಿಷ್ಟು ತಂಗಾಳಿ ಬೀಸಿದೆ.ಗಣೇಶ್‌ ಅಭಿನಯದ ‘ಸಖತ್‌’, ಶ್ರೀಮುರಳಿ ನಟನೆಯ ‘ಮದಗಜ’, ದೃಶ್ಯ –2 (ಮಲಯಾಳಂನ ದೃಶ್ಯಂ –2 ಚಿತ್ರದ ಕನ್ನಡ ಅವತರಣಿಕೆ) ಬಿಡುಗಡೆಗೊಂಡಿವೆ. ಡಾಲಿ ಧನಂಜಯ ಅಭಿನಯದ ಬಡವ ರಾಸ್ಕಲ್‌, ನಿಖಿಲ್‌ ಕುಮಾರಸ್ವಾಮಿ ಅಭಿನಯದ ‘ರೈಡರ್‌’ ಚಿತ್ರಗಳ ಸರಣಿ ಬಿಡುಗಡೆ ಒಂದಿಷ್ಟು ಭರವಸೆ ಮೂಡಿಸಿವೆ.ಹಾಗೆಂದು ಪೂರ್ಣ ಚೇತರಿಸಿಕೊಂಡಿದೆ ಎಂದೂ ನಿಟ್ಟುಸಿರುಬಿಡುವಂತಿಲ್ಲ. ಕೋವಿಡ್‌ ನಂತರ ಓಮೈಕ್ರಾನ್‌ ಆತಂಕದ ನಡುವೆಯೇ ಚಿತ್ರರಂಗ ದಿನ ತಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT