ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಸಿನಿಪಯಣದ ನೆನಪು ಬಿಚ್ಚಿಟ್ಟ ಕಿಚ್ಚ, ವಿಕ್ರಾಂತ್‌ ರೋಣ ಟೀಸರ್‌ ಬಿಡುಗಡೆ

Last Updated 31 ಜನವರಿ 2021, 11:32 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷೆಯ ಚಿತ್ರ ‘ಫ್ಯಾಂಟಮ್‌’ನ ಶೀರ್ಷಿಕೆ ‘ವಿಕ್ರಾಂತ್‌ ರೋಣ’ ಎಂದು ಬದಲಾಗಿದ್ದು, ಚಿತ್ರದ 180 ಸೆಕೆಂಡ್‌ಗಳ ಅವಧಿಯ ಟೀಸರ್‌ ಮತ್ತು ‘ವಿಕ್ರಾಂತ್‌ ರೋಣ’ನ ಕಟೌಟ್‌ ದುಬೈನ ಬುರ್ಜ್ ಖಲೀಫಾದಲ್ಲಿ ನಾಳೆ (ಭಾನುವಾರ) ಅನಾವರಣವಾಗಲಿದೆ.

ಸುದೀಪ್‌ ಚಿತ್ರರಂಗಕ್ಕೆ ಕಾಲಿಟ್ಟು 25 ವಸಂತಗಳನ್ನು ಪೂರ್ಣಗೊಳಿಸಿರುವುದರಿಂದ ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಸುದೀಪ್‌ ಜತೆಗೆ ಚಿತ್ರತಂಡವೂ ದುಬೈನಲ್ಲಿ ಬೀಡುಬಿಟ್ಟಿದೆ.

ದುಬೈನ ಬುರ್ಜ್ ಖಲೀಫಾದಲ್ಲಿ ಶನಿವಾರ ವರ್ಚ್ಯುವಲ್‌ ಸುದ್ದಿಗೋಷ್ಠಿ ನಡೆಸಿದ ಸುದೀಪ್‌ ಅವರು, ‘ನನ್ನ ವೃತ್ತಿ ಬದುಕಿನ 25 ವರ್ಷಗಳ ಪಯಣದಲ್ಲಿ ಪಾಲುದಾರರಾಗಿರುವ ಎಲ್ಲರಿಗೂ ಧನ್ಯವಾದಗಳು. ನಾಳೆ 26ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ’ ಎಂದು ಮಾತಿಗಾರಂಭಿಸಿದರು.

‘ಚಿತ್ರರಂಗದಲ್ಲಿ 25 ವರ್ಷಗಳು ಇರುತ್ತೇನೆಂಬ ನಂಬಿಕೆಯೇ ಇರಲಿಲ್ಲ. ಎಲ್ಲರಿಂದಲೂ ನಾವು ಕಲಿಯುತ್ತಾ ಸಾಗಬೇಕು, ಹೊಸಬರಿಂದಲೂ ನಾವು ಸಾಕಷ್ಟು ಕಲಿಯುವುದು ಇದೆ. ನಮ್ಮೊಟ್ಟಿಗೆ ಯಾರೆಲ್ಲ ಇದ್ದಾರೋ ಅವರೆಲ್ಲರ ಜತೆಗೆ ಬದುಕು ಸಾಗಬೇಕು.

‘ಮೈ ಆಟೋಗ್ರಾಫ್’ ಚಿತ್ರವನ್ನು ನಾನು ಎಂದಿಗೂ ಮರೆಯಲಾಗದು. ಆ ಸಿನಿಮಾಕ್ಕಾಗಿ ನನ್ನ ತಂದೆಯ ಮನೆಯ ದಾಖಲೆಪತ್ರಗಳನ್ನೇ ಅಡಮಾನ ಇಟ್ಟಿದ್ದೆ. ಆ ಚಿತ್ರ ಯಶಸ್ಸು ತಂದುಕೊಡದಿದ್ದರೆ ಊಹೆಗೂ ನಿಲುಕದಷ್ಟು ಕಷ್ಟಕ್ಕೆ ಬದುಕು ಸಿಲುಕುತ್ತಿತ್ತು. ಹಾಗೆಯೇ ‘ಹುಚ್ಚ’ ಸಿನಿಮಾ ಬಿಡುಗಡೆಯಾದಾಗಲೂ ಆರಂಭದಲ್ಲಿ ನನ್ನ ಉತ್ಸಾಹವೇ ಬತ್ತಿ ಹೋಗಿತ್ತು. ಆ ಚಿತ್ರ ಯಶಸ್ಸು ಕೊಡದಿದ್ದರೆ ವಾಪಸ್‌ ಊರಿಗೆ ಹೋಗಿ, ತಂದೆಯ ಹೋಟೆಲ್‌ ಉದ್ಯಮ ಮುಂದುವರಿಸಲು ನಿರ್ಧರಿಸಿದ್ದೆ’ ಎಂದು ಸುದೀಪ್‌ ಮನಬಿಚ್ಚಿ ಮಾತನಾಡಿದರು.

‘ವಿಕ್ರಾಂತ್‌ ರೋಣ’ ಚಿತ್ರದ ಕಡೆಗೆ ಮಾತು ಹೊರಳಿದಾಗ, ‘ಇದೊಂದು ಸಾಹಸ ಪ್ರಧಾನ ಕಥೆಯ ಚಿತ್ರ. ನನ್ನನ್ನು ಈವರೆಗೆ ನೋಡಿದ್ದಕ್ಕಿಂತ ಹೆಚ್ಚಿನದಾಗಿ ಈ ಚಿತ್ರದಲ್ಲಿ ಕಾಣಲಿದ್ದೀರಿ. ಅಪಾರ ನಂಬಿಕೆ ಇಟ್ಟು ಈ ಚಿತ್ರವನ್ನು ಮಾಡಿದ್ದೇವೆ.ಹಲವು ಭಾಷೆಗಳಲ್ಲಿ, ಬೇರೆ ಬೇರೆ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ’ ಎನ್ನುವ ಮಾತು ಸೇರಿಸಿದರು.

ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆಯೂ ಖುಷಿ ಹಂಚಿಕೊಂಡ ಸುದೀಪ್‌, ‘ಕಬ್ಜ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದ್ದರಿಂದ ನಟಿಸಲು ಒಪ್ಪಿಕೊಂಡಿದ್ದೇನೆ’ ಎಂದರು.

ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರ ಬಿಡುಗಡೆಗೆ ತೆಲುಗು ಚಿತ್ರರಂಗದಲ್ಲಿ ಅಡ್ಡಿಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ, ‘ಇನ್ನೊಂದು ಚಿತ್ರರಂಗಕ್ಕೆ ಸಲಹೆ ಕೊಡುವಷ್ಟು ದೊಡ್ವನು ನಾನಲ್ಲ, ಎಲ್ಲರೂ ಶ್ರಮ ಹಾಕಿ ಚಿತ್ರ ಮಾಡಿರುತ್ತೇವೆ. ಅವರವರ ಚಿತ್ರವನ್ನು ಕಾಪಾಡಿಕೊಳ್ಳುವ ಶಕ್ತಿ ಪ್ರತಿಯೊಬ್ಬರಿಗೂ ಇರುತ್ತದೆ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.

ನಾಳೆ (ಭಾನುವಾರ) ಬುರ್ಜ್ ಖಲೀಫಾದಿಂದ ಸಿನಿಪ್ರಿಯರಿಗೆ ಇನ್ನಷ್ಟು ಅಚ್ಚರಿ ಮತ್ತು ರಸದೌತಣ ನೀಡಲು ‘ವಿಕ್ರಾಂತ ರೋಣ’ ಚಿತ್ರ ತಂಡ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT