ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ನೇ ಸುವರ್ಣ ಸಿನಿಮೋತ್ಸವ ಗೋವಾದಲ್ಲಿ

Last Updated 16 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಪಣಜಿಯಲ್ಲಿ ನವೆಂಬರ್‌ 20ರಿಂದ ನಡೆಯುವುದು 50ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಈ ಉತ್ಸವದ ಇದುವರೆಗಿನ ಚರಿತ್ರೆಯ ಒಂದು ಮೆಲುಕು ಇಲ್ಲಿದೆ...

ನೆರೆ, ಬರ, ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಹಿನ್ನಡೆಯ ನಡುವೆಯೂ ದೇಶ ಸಿನಿಮಾ ಉತ್ಸವಗಳತ್ತ ಹೊರಳುತ್ತಿದೆ. ಮುಂದಿನ ಮೂರು ತಿಂಗಳು ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾ ಉತ್ಸವಗಳ ಸಂಭ್ರಮ. ಈ ವರ್ಷ(2019)ದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಯೊಂದಿಗೆ ಈ ಸಂಭ್ರಮಕ್ಕೆ ಚಾಲನೆ ಸಿಗಲಿದೆ. ನವೆಂಬರ್‌ 20ರಿಂದ 28ರವರೆಗೆ ಗೋವಾದ ಪಣಜಿಯಲ್ಲಿ ಚಿತ್ರೋತ್ಸವ ನಡೆಯಲಿದೆ. ಇದು ಐವತ್ತನೆಯ ಚಿತ್ರೋತ್ಸವ.

ಗೋವಾ ಚಿತ್ರೋತ್ಸವಕ್ಕೆ ಮೊದಲೇ ಕೋಲ್ಕತ್ತ ಚಿತ್ರೋತ್ಸವ ನಡೆಯಲಿದೆ. ಆನಂತರ ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುತ್ತವೆ. ಅವೆಲ್ಲ ಆಯಾ ರಾಜ್ಯ ಸರ್ಕಾರಗಳು ಸಂಘಟಿಸುವ ಚಿತ್ರೋತ್ಸವಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದು ಪಣಜಿ ಚಿತ್ರೋತ್ಸವ. ಇದು ದೇಶದ ಪ್ರತಿಷ್ಠೆಯ ಸಿನಿಮಾ ಉತ್ಸವ.

ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಡುಗಡೆಯಾದ ಭಾರತದ ಹಾಗೂ ಜಗತ್ತಿನ ಹಲವು ಭಾಷೆಗಳ ಆಯ್ದ ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತವೆ. ದೇಶ, ವಿದೇಶಗಳ ಸಿನಿಮಾ ತಜ್ಞರು, ತಂತ್ರಜ್ಞರು, ವಿಮರ್ಶಕರು ಮತ್ತು ಆಸಕ್ತರು ಈ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ಎಂಟು ದಿನಗಳ ಪಣಜಿ ಚಿತ್ರೋತ್ಸವ ಸಿನಿಮಾ ಜಗತ್ತಿನ ಗಮನ ಸೆಳೆಯುತ್ತದೆ.

ಚಿತ್ರೋತ್ಸವದ ಭಾಗವಾಗಿ ನಡೆಯುವ ಫಿಲ್ಮ್ ಬಜಾರ್‌ ದೇಶದಲ್ಲಿ ಸಿನಿಮಾ ನಿರ್ಮಾಣಕ್ಕೆ ಬೇಕಾದ ವಿದೇಶಿ ಬಂಡವಾಳದ ಪ್ರಾಯೋಜಕತ್ವ, ಮಾರುಕಟ್ಟೆ ಸಹಕಾರ, ತಂತ್ರಜ್ಞಾನಗಳ ವಿನಿಮಯ ಇತ್ಯಾದಿ ಕುರಿತು ನಿರ್ಮಾಪಕರು ಮತ್ತು ಸಿನಿಮೋದ್ಯಮ ಸಂಸ್ಥೆಗಳ ಜತೆಗೆ ಚರ್ಚೆ, ಸಂವಾದಕ್ಕೂ ಅವಕಾಶ ಕಲ್ಪಿಸುತ್ತದೆ. ಈ ಕಾರಣಗಳಿಂದಾಗಿ ಪಣಜಿ ಚಿತ್ರೋತ್ಸವ ಭಾರತೀಯ ಸಿನಿಮಾ ಉದ್ಯಮಿಗಳಿಗೆ ಮಹತ್ವದ ವೇದಿಕೆ.

ಇನ್ನು ಸಿನಿಮಾ ಶಾಲೆಗಳ ವಿದ್ಯಾರ್ಥಿಗಳು, ವಿಮರ್ಶಕರು ಮತ್ತು ಆಸಕ್ತರಿಗೆ ದೇಶ, ವಿದೇಶಗಳ ಸಿನಿಮಾಗಳನ್ನು ನೋಡಲು ಮತ್ತು ಚರ್ಚಿಸಲು ಉತ್ತಮ ಅವಕಾಶ. ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಬಹುಕೋಟಿ ವೆಚ್ಚದಲ್ಲಿ ನಡೆಯುವ ಚಲನಚಿತ್ರೋತ್ಸವಗಳು ಬೇಕೆ? ಬಹುಕೋಟಿ ಬಂಡವಾಳದ ಒಂದೆರಡು ಸಿನಿಮಾಗಳ ಯಶಸ್ಸನ್ನೇ ದೇಶದ ಆರ್ಥಿಕ ಮುನ್ನಡೆಯ ಸಂಕೇತ ಎಂದು ಕೇಂದ್ರ ಮಂತ್ರಿಯೊಬ್ಬರು ವಾದಿಸುವ ಈ ಕಾಲಘಟ್ಟದಲ್ಲಿ ಮೇಲಿನ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಅದೇನೆ ಇರಲಿ, ಭಾರತದಲ್ಲಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಸುವ ತೀರ್ಮಾನ ದಿವಂಗತ ಪ್ರಧಾನಿ ಜವಾಹರಲಾಲ್‌ ನೆಹರೂ ಅವರದ್ದು. ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಭಾರತದ ಸಿನಿಮಾಸಕ್ತರು ಮತ್ತು ತಂತ್ರಜ್ಞರು ನೋಡಬೇಕು. ಅದರಿಂದ ಜಗತ್ತಿನ ಹಲವು ದೇಶಗಳ ಸಾಮಾಜಿಕ ಪರಿಸ್ಥಿತಿ, ಜನಜೀವನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಸಿನಿಮಾ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಪರಿಚಯ ಭಾರತೀಯ ತಂತ್ರಜ್ಞರಿಗೂ ಆಗುತ್ತದೆ ಎನ್ನುವುದೂ ನೆಹರೂ ಅವರ ಆಶಯವಾಗಿತ್ತು. ನೆಹರೂ ನಂತರದ ಎಲ್ಲ ಪ್ರಧಾನಿಗಳೂ ಈ ಆಶಯಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಮೊದಲ ಭಾರತದ ಚಲನ ಚಿತ್ರೋತ್ಸವ ನಡೆದದ್ದು ಮುಂಬೈಯಲ್ಲಿ. 1952ರ ಜನವರಿ 24ರಿಂದ ಫೆ.1ರವರೆಗೆ ನಡೆದ ಚಿತ್ರೋತ್ಸವವನ್ನು ಉದ್ಘಾಟಿಸಿದ್ದು ನೆಹರೂ ಅವರೇ. ಅದು ಏಷ್ಯಾ ಖಂಡದ ಮೊದಲ ಚಿತ್ರೋತ್ಸವವೂ ಆಗಿತ್ತು. ಮೊದಲ ಚಿತ್ರೋತ್ಸವದಲ್ಲಿ 23 ದೇಶಗಳ 40 ಸಿನಿಮಾಗಳು ಮತ್ತು 100 ಕಿರುಚಿತ್ರಗಳು ಪ್ರದರ್ಶನಗೊಂಡಿದ್ದವು. ನಂತರದ ವರ್ಷಗಳಲ್ಲಿ ಚಿತ್ರೋತ್ಸವ ಅಗಾಧವಾಗಿ ಬೆಳೆದಿದೆ. ಕಳೆದ ವರ್ಷದ ಪಣಜಿ ಚಿತ್ರೋತ್ಸವದಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚು ದೇಶಗಳ ಇನ್ನೂರು ಸಿನಿಮಾಗಳು ಪ್ರದರ್ಶನವಾಗಿದ್ದವು.

1965ರಿಂದ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗ ಆರಂಭವಾಯಿತು. ಅತ್ಯುತ್ತಮ ಚಿತ್ರಗಳಿಗೆ ಪುರಸ್ಕಾರ ನೀಡುವ ಪರಿಪಾಠ ಆರಂಭವಾದ ಮೇಲೆ ಚಿತ್ರೋತ್ಸವಕ್ಕೆ ಹೊಸ ಆಯಾಮ ಸಿಕ್ಕಿತು. ಈಗ ಜಗತ್ತಿನ ಬಹುತೇಕ ಚಲನಚಿತ್ರೋತ್ಸವಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಪಣಜಿ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗುವ ಅತ್ಯುತ್ತಮ ಚಿತ್ರಕ್ಕೆ ₹ 40 ಲಕ್ಷ ನಗದು ಮತ್ತು ಸ್ವರ್ಣ ಮಯೂರ ಫಲಕಕ್ಕೆ ಸಿಗುತ್ತದೆ. ಇದು ಭಾರತದ ಮಟ್ಟಿಗೆ ಗರಿಷ್ಠ ಮೊತ್ತದ ಚಿತ್ರೋತ್ಸವ ಪುರಸ್ಕಾರ. ಅತ್ಯುತ್ತಮ ಚಿತ್ರ, ನಿರ್ದೇಶಕ, ನಟ, ನಟಿ ಇತ್ಯಾದಿ ಒಟ್ಟು 11 ಪುರಸ್ಕಾರಗಳಿವೆ. ಅಂತರರಾಷ್ಟ್ರೀಯ ಸಿನಿಮಾ ತಜ್ಞರನ್ನೊಳಗೊಂಡ ಜ್ಯೂರಿ ಸಮಿತಿ ಈ ಪುರಸ್ಕಾರಗಳಿಗೆ ಆಯ್ಕೆ ಮಾಡುತ್ತದೆ. ಹೀಗಾಗಿ ಪಣಜಿ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಕ್ಕೆ ಅರ್ಹತೆ ಪಡೆಯುವುದೇ ಮಹತ್ವದ ಸಂಗತಿ.

ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಸಿನಿಮಾ ಬಹುದೊಡ್ಡ ಮನರಂಜನಾ ಉದ್ಯಮ. ಲಕ್ಷಾಂತರ ಜನರಿಗೆ ಅದು ಉದ್ಯೋಗ ಒದಗಿಸುತ್ತಿದೆ. ದೇಶ, ಭಾಷೆಗಳ ಗಡಿಯನ್ನು ಮೀರಿ ಅಸಂಖ್ಯ ಜನರನ್ನು ತಲುಪುವ, ಸಂಪರ್ಕಿಸುವ ಸಾಮರ್ಥ್ಯ ಸಿನಿಮಾಗಳಿಗಿದೆ. ಹೀಗಾಗಿ ಸಿನಿಮಾ ಜಗತ್ತಿನ ಎಲ್ಲ ವಯೋಮಾನದವರಿಗೂ ಎಲ್ಲ ಕಾಲಕ್ಕೂ ಕುತೂಹಲವೇ.

2004ನೇ ವರ್ಷಕ್ಕಿಂತ ಮೊದಲು ಚಿತ್ರೋತ್ಸವ ಪ್ರತಿವರ್ಷ ದೇಶದ ಒಂದೊಂದು ಪ್ರಮುಖ ನಗರಗಳಲ್ಲಿ ನಡೆಯುತ್ತಿತ್ತು. ಈ ಸಂಚಾರಿ ವ್ಯವಸ್ಥೆಯ ಸಂಘಟನೆಯಲ್ಲಿ ಸ್ವಲ್ಪ ಏರುಪೇರಾಗಿ ಕೆಲ ವರ್ಷ ಚಿತ್ರೋತ್ಸವವೇ ರದ್ದಾದ ಉದಾರಣೆಗಳಿವೆ. 2004ರಲ್ಲಿ ಭಾರತ ಸರ್ಕಾರ ಪಣಜಿಯಲ್ಲಿ ಕಾಯಂ ಆಗಿ ಚಿತ್ರೋತ್ಸವ ನಡೆಸಲು ತೀರ್ಮಾನಿಸಿದ ನಂತರ ಪ್ರತಿವರ್ಷ ನವೆಂಬರ್‌ನಲ್ಲಿ ಚಿತ್ರೋತ್ಸವ ನಿಗದಿತ ದಿನಗಳಂದು ನಡೆಯುತ್ತ ಬಂದಿದೆ. ಚಿತ್ರೋತ್ಸವದ ಕಾಯಂ ನೆಲೆ ಆದ ಮೇಲೆ ಗೋವಾದಲ್ಲಿ ಚಿತ್ರೋದ್ಯಮ ಬೆಳೆಯಬಹುದೆಂಬ ನಿರೀಕ್ಷೆ ಮಾತ್ರ ಹುಸಿಯಾಗಿದೆ. ಪಣಜಿಯ ಡೋನಾಪೌಲ ಪ್ರದೇಶದಲ್ಲಿ ಚಿತ್ರೋತ್ಸವ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ. 2019ರ ಚಿತ್ರೋತ್ಸವದ ವೇಳೆಗೆ ಹಲವು ಕೋಟಿ ರೂಗಳ ವೆಚ್ಚದಲ್ಲಿ ವಿಶ್ವ ದರ್ಜೆಯ ಚಿತ್ರೋತ್ಸವ ಕಾಂಪ್ಲೆಕ್ಸ್‌ ನಿರ್ಮಿರ್ಸುವುದು ನಮ್ಮ ಕನಸು ಎಂದು ಗೋವಾದ ಹಿರಿಯ ರಾಜಕಾರಣಿ ದಿವಂಗತ ಮನೋಹರ ಪರಿಕ್ಕರ್‌ ಹಿಂದಿನ ಹಲವು ಚಿತ್ರೋತ್ಸವಗಳ ಉದ್ಘಾಟನೆ ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. ಚಿತ್ರೋತ್ಸವವನ್ನು ಪಣಜಿಯಲ್ಲೇ ಕಾಯಂ ಆಗಿ ನಡೆಸುವಂತೆ ಕೇಂದ್ರ ಸರ್ಕಾರದ ಮನವೊಲಿಸಿದ್ದೂ ಅವರೇ. ಆದರೆ, ಪರಿಕ್ಕರ್ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ.

ಪಣಜಿಯಿಂದ ಹತ್ತು ಕಿ.ಮೀ. ದೂರದಲ್ಲಿರುವ ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪ ನಡೆಯುತ್ತವೆ. ಚಿತ್ರಗಳ ಪ್ರದರ್ಶನ ಚಿತ್ರೋತ್ಸವಕ್ಕಾಗಿಯೇ ಮಾಂಡೋವಿ ನದಿ ದಡದಲ್ಲಿ ನಿರ್ಮಿಸಿರುವ ಐನಾಕ್ಸ್‌ ಚಿತ್ರಮಂದಿರ ಕಾಂಪ್ಲೆಕ್ಸ್‌ನ ನಾಲ್ಕು ತೆರೆಗಳು, ಗೋವಾ ಮೆಡಿಕಲ್‌ ಕಾಲೇಜಿನ ಹಳೆಯ ಕಟ್ಟಡದಲ್ಲಿರುವ ಎರಡು ಸಣ್ಣ ಥಿಯೇಟರ್‌ಗಳು ಹಾಗೂ ಸಮೀಪದಲ್ಲೇ ಇರುವ 850 ಆಸನಗಳ ಕಲಾ ಅಕಾಡೆಮಿಯ ದೊಡ್ಡ ಥಿಯೇಟರ್‌ನಲ್ಲಿ ಚಿತ್ರಗಳ ಪ್ರದರ್ಶನ ನಡೆಯುತ್ತದೆ. ಪಣಜಿ ಸಣ್ಣ ನಗರ. ಅಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ. ಗೌಜು,ಗದ್ದಲ ಇಲ್ಲವೇ ಇಲ್ಲ. ಚಿತ್ರೋತ್ಸವಕ್ಕೆ ಬನ್ನಿ. ಹಾಗೇ ಗೋವಾದಲ್ಲಿ ಸುತ್ತಾಡಿ. ನಮ್ಮ ಕಡಲು, ನದಿ, ಪೋರ್ಚುಗೀಸರ ಕಾಲದ ಚರ್ಚುಗಳು, ಕಟ್ಟಡಗಳು,ಕೋಟೆ ಕೊತ್ತಲಗಳ ಸುಂದರ ಪರಿಸರವನ್ನು ನೋಡಿ. ಬಗೆ ಬಗೆಯ ಮದ್ಯ ಕುಡಿದು, ಮೀನು ತಿಂದು ದಣಿವು ನೀಗಿಸಿಕೊಳ್ಳಿ. ಕೆಲದಿನ ಇಲ್ಲೇ ಉಳಿದು ಪ್ರವಾಸದ ಸುಖ ಅನುಭವಿಸಿ. ಸುಂದರ ನೆನಪುಗಳನ್ನು ಹೊತ್ತು ನಿಮ್ಮ ಊರುಗಳಿಗೆ ಹೋಗಿ ಎನ್ನುವ ಮನೋಭಾವ ಗೋವಾ ಜನರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT