ಮುಂಬೈ: ‘ಮೇರೆ ದೇಶ್ ಕಿ ಧರ್ತಿ ಸೋನಾ ಉಗಲೆ ಉಗಲೆ ಹೀರೇ ಮೋತಿ’ (ಹೊನ್ನು, ಮುತ್ತು ಬೆಳೆವ ಭೂಮಿಯ ದೇಶ ನನ್ನದು) ಹಾಡು ಇವತ್ತಿಗೂ ಸ್ವಾತಂತ್ರ್ಯ ದಿನಾಚರಣೆ ದಿನ ಎಷ್ಟೋ ಕಡೆ ಅನುರಣಿಸುತ್ತದೆ. ಕಲ್ಯಾಣ್ಜಿ–ಆನಂದ್ಜಿ ಸ್ವರ ಸಂಯೋಜನೆಯ, ಮಹೇಂದ್ರ ಕಪೂರ್ ಕಂಠದ ಈ ಹಾಡು ಒಂದು ಬಗೆಯಲ್ಲಿ ನಟ ಮನೋಜ್ ಕುಮಾರ್ ಅವರ ದೇಶಭಕ್ತಿ ಭಾವದ ಸಂಕೇತದಂತೆ ಸ್ಥಾಯಿಯಾಗಿದೆ. ‘ಉಪಕಾರ್’ ಹಿಂದಿ ಚಿತ್ರದ ಹಾಡು ಇದು.

ದೇಶಭಕ್ತಿಯ ಸರಣಿ ಚಿತ್ರಗಳಲ್ಲಿ ಮನೋಜ್ ಅಭಿನಯಿಸಿದ್ದರು. ‘ಮಿಸ್ಟರ್ ಭಾರತ್’ ಎಂದು ಅವರು ಜನಜನಿತರಾದದ್ದು ಇದೇ ಕಾರಣಕ್ಕೆ. ‘ಪೂರಬ್ ಔರ್ ಪಶ್ಚಿಮ್’, ‘ಶಹೀದ್’, ‘ರೋಟಿ ಕಪಡಾ ಔರ್ ಮಕಾನ್’ ಅವರ ಅಭಿನಯದ ಪ್ರಮುಖ ಚಿತ್ರಗಳು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರೊಟ್ಟಿಗೆ ನಡೆಸಿದ ಸಂವಾದದ ಫಲವಾಗಿ ‘ಉಪಕಾರ್’ ಸಿನಿಮಾ ಪರಿಕಲ್ಪನೆ ಹುಟ್ಟಿತ್ತು. ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ಚಿತ್ರವಿದು.

ಮನೋಜ್ 1960, 1970ರ ದಶಕದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಪ್ರೇಮ ಕಥಾನಕದ ‘ಹಿಮಾಲಯ ಕಿ ಗೋದ್ ಮೈ’, ‘ಪತ್ಥರ್ ಕೆ ಸನಂ’ ಚಿತ್ರಗಳಲ್ಲೂ ನಟಿಸಿದ್ದರು.

ಅವಿಭಜಿತ ಭಾರತದ, ಈಗಿನ ಪಾಕಿಸ್ತಾನದ ಜಂದ್ಯಾಲ ಶೇರ್ಖಾನ್ ಗ್ರಾಮದಲ್ಲಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಅವರು ಜನಿಸಿದ್ದರು. ಮೂಲ ಹೆಸರು ಹರಿ ಕೃಷನ್ ಗೋಸ್ವಾಮಿ. ದೇಶ ವಿಭಜನೆಯ ಬಳಿಕ ಕುಟುಂಬ 1947ರಲ್ಲಿ ದೆಹಲಿಗೆ ವಲಸೆ ಬಂದಿತ್ತು. ದೆಹಲಿ ವಿ.ವಿ.ಯಲ್ಲಿ ಪದವಿ ಶಿಕ್ಷಣದ ಬಳಿಕ ಮುಂಬೈಗೆ ತೆರಳಿದ್ದರು. ನಟ ದಿಲೀಪ್ ಕುಮಾರ್ ಅಭಿಮಾನಿಯಾಗಿದ್ದವರು ಮನೋಜ್. ‘ದಿಲೀಪ್ ಕುಮಾರ್ ನಟನೆಯ ‘ಶಬ್ನಮ್’ ವೀಕ್ಷಿಸಿದ ಬಳಿಕ ಅವರಂತೆಯೇ ನಟನಾಗುವ ಬಯಕೆ ಹುಟ್ಟಿತು. ಆಗ ನನ್ನ ವಯಸ್ಸು 11’ ಎಂದು ಪಿಟಿಐಗೆ 2021ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಮುಂದೊಂದು ದಿನ ತಮ್ಮ ನಿರ್ಮಾಣದ ‘ಕ್ರಾಂತಿ’ ಚಿತ್ರದಲ್ಲಿ ದಿಲೀಪ್ ಕುಮಾರ್ ಅವರೇ ನಟಿಸುವಂತೆ ನೋಡಿಕೊಂಡರು. ದಿಲೀಪ್ ಕುಮಾರ್ ಅವರೊಂದಿಗೆ ‘ಆದ್ಮಿ’ ಚಿತ್ರದಲ್ಲೂ ನಟಿಸಿದ್ದರು.

2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದರು. ‘ಪದ್ಮಶ್ರೀ’ ಗೌರವವೂ ಸಂದಿತ್ತು. ವಿ.ಶಾಂತಾರಾಮ್, ರಾಜ್ಕಪೂರ್ ಅವರಂತೆ ನಟನೆಗಿಂತಲೂ ನಿರ್ದೇಶನದ ಕಾರಣಕ್ಕೇ ಹೆಚ್ಚು ಹೆಸರಾದರು.

ಭಗತ್ಸಿಂಗ್ ಬದುಕಿನ ಕಥನವುಳ್ಳ ‘ಶಹೀದ್’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಂದಿತು. ಆಗ ಬಂದಿದ್ದ ಅಷ್ಟೂ ಹಣವನ್ನು ಭಗತ್ ಸಿಂಗ್ ಕುಟುಂಬದವರಿಗೆ ನೀಡಿದ್ದ ಕೊಡುಗೈ ಅವರದ್ದು. ಸಿತಾರ್ ನುಡಿಸುವುದನ್ನೂ ಕಲಿತಿದ್ದ ಅವರು ಶ್ವೇತವಸ್ತ್ರ ಇಷ್ಟಪಟ್ಟವರು. ಮನೆಯ ಬಣ್ಣ, ಕಾರಿನ ಬಣ್ಣವೂ ಬಿಳಿಯೇ ಆಗಿತ್ತು. ಸ್ವಚ್ಛ, ಶುದ್ಧತೆಯ ಸಂಕೇತ ಅದು ಎಂದೇ ಹೇಳುತ್ತಿದ್ದ ಅವರೀಗ ನೆನಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.