ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಗಿತಗೊಂಡ ಸೆನ್ಸಾರ್‌ ಪ್ರಕ್ರಿಯೆ: ಸರತಿಯಲ್ಲಿ 132 ಚಿತ್ರಗಳು

Published 6 ಡಿಸೆಂಬರ್ 2023, 22:53 IST
Last Updated 6 ಡಿಸೆಂಬರ್ 2023, 22:53 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸೆನ್ಸಾರ್ ಮಂಡಳಿಯ(ಸಿಬಿಎಫ್‌ಸಿ) ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಇಲ್ಲದೆ ಕನ್ನಡ ಸಿನಿಮಾಗಳ ಸೆನ್ಸಾರ್‌ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಡಿಸೆಂಬರ್‌ ತಿಂಗಳಿನಲ್ಲಿ ತೆರೆಗೆ ಬರಬೇಕಿದ್ದ ಹಲವು ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ.

ಕನ್ನಡ ಸಿನಿಮಾವೊಂದಕ್ಕೆ ಸೆನ್ಸಾರ್‌ ಸರ್ಟಿಫಿಕೆಟ್‌ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್‌ ಕುಮಾರ್‌ ಅವರನ್ನು ನ.30ರಂದು ಸಿಬಿಐ ಬಂಧಿಸಿತ್ತು. ಹೀಗಾಗಿ ಸಿನಿಮಾಗಳಿಗೆ ಸೆನ್ಸಾರ್‌ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

‘ಕಳೆದ ಗುರುವಾರದಿಂದ (ನವೆಂಬರ್ 30) ಸೆನ್ಸಾರ್‌ ಪ್ರಕ್ರಿಯೆ ನಿಂತಿದೆ. ‘ಕಾಟೇರ’ ಸೇರಿ ಇದೇ ತಿಂಗಳು ಬಿಡುಗಡೆಗೆ ಸಿದ್ಧವಿರುವ ಹಲವು ಸಿನಿಮಾಗಳಿಗೆ ತೊಂದರೆಯಾಗುತ್ತಿದೆ. ಒಟ್ಟು 132 ಸಿನಿಮಾಗಳು ಸೆನ್ಸಾರ್‌ಗಾಗಿ ಕಾಯುತ್ತಿವೆ. ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮೂರು ತಂಡಗಳನ್ನು ಮಾಡಿ ದಿನಕ್ಕೆ ಮೂರು ಚಿತ್ರಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಂಡಬೇಕೆಂದು ವಿನಂತಿಸಿದ್ದೇವೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮಾ.ಗಿರೀಶ್‌ ಪ್ರತಿಕ್ರಿಯಿಸಿದರು.

ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಗೆ ನೆರವಾಗಲೆಂದೇ ಕೆಲವರು ಮಧ್ಯವರ್ತಿಗಳಿದ್ದಾರೆ. ಅಂಥವರಲ್ಲಿ ಒಬ್ಬರಾದ ಶಿವು ಹೀಗೆನ್ನುತ್ತಾರೆ: ‘ಸೆನ್ಸಾರ್‌ ಪ್ರಮಾಣಪತ್ರಕ್ಕಾಗಿ ನನ್ನಲ್ಲಿಗೆ ಬಂದಿರುವ ಸಿನಿಮಾಗಳೇ 30ರಷ್ಟಿವೆ’.

ಸೆನ್ಸಾರ್‌ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ ಮೂಲಕವೇ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸಿನಿಮಾ ವೀಕ್ಷಿಸಿ, ಸೆನ್ಸಾರ್‌ ಪ್ರಮಾಣಪತ್ರ ನೀಡಲು ಪ್ರಾದೇಶಿಕ ಸೆನ್ಸಾರ್‌ ಅಧಿಕಾರಿ ಇರಬೇಕಾದದ್ದು ಅಗತ್ಯ.

‘ನಾನು ನಿರ್ಮಿಸಿರುವ ‘ಸೈಕಿಕ್‌’ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರಬೇಕಿತ್ತು. ಸೆನ್ಸಾರ್‌ ಸಮಸ್ಯೆಯಿಂದ ಬಿಡುಗಡೆ ಮುಂದೂಡುವುದು ಅನಿವಾರ್ಯವಾಗಿದೆ. ಜನವರಿಯಲ್ಲಿ ದೊಡ್ಡ ಸಿನಿಮಾಗಳ ಸುಗ್ಗಿ ಪ್ರಾರಂಭವಾಗುತ್ತದೆ. ಹೀಗಾಗಿ ನಂತರದ ದಿನಗಳಲ್ಲಿ ಸಿನಿಮಾ ಬಿಡುಗಡೆಯೇ ಸವಾಲಾಗಿದೆ’ ಎನ್ನುತ್ತಾರೆ ನಿರ್ಮಾಪಕ ಬಿ.ಜಿ.ಮಂಜುನಾಥ್‌.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಈ ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ಒಂದೆರಡು ದಿನಗಳಲ್ಲಿ ಹೊಸ ಪ್ರಾದೇಶಿಕ ಸೆನ್ಸಾರ್‌ ಅಧಿಕಾರಿಯನ್ನು ನೇಮಕ ಮಾಡುವ ಭರವಸೆ ಸಿಕ್ಕಿದೆ.
– ರಾಕ್‌ಲೈನ್‌ ವೆಂಕಟೇಶ್‌, ‘ಕಾಟೇರ’ ಚಿತ್ರದ ನಿರ್ಮಾಪಕ

‘ಈ ವರ್ಷದ ಸೆನ್ಸಾರ್‌ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿತ್ತು. ಚಿತ್ರಮಂದಿರಕ್ಕೆ ಬರುವ ಚಿತ್ರಗಳ ಜೊತೆಗೆ ಭಾರತೀಯ ಚಿತ್ರೋತ್ಸವಗಳಿಗೆ ಸೀಮಿತವಾಗಿರುವ ಸಾಕಷ್ಟು ಚಿತ್ರಗಳು ಡಿಸೆಂಬರ್‌ನಲ್ಲಿ ಸೆನ್ಸಾರ್‌ಗೆ ಬರುತ್ತವೆ. ಜನವರಿಯಿಂದ ಹಲವು ಚಿತ್ರೋತ್ಸವಗಳು ಪ್ರಾರಂಭವಾಗುವುದೇ ಇದಕ್ಕೆ ಕಾರಣ’ ಎಂದು ಹೆಸರು ಹೇಳಲು ಇಚ್ಛಿಸದ ಸೆನ್ಸಾರ್‌ ಮಂಡಳಿಯ ಸದಸ್ಯರೊಬ್ಬರು ಮಾಹಿತಿ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT