ಮಂಗಳವಾರ, ಮಾರ್ಚ್ 21, 2023
29 °C
ಹೊಸ ಪೋಸ್ಟರ್‌ ಬಿಡುಗಡೆಗೊಳಿಸಿದ ‘ಬೆಲ್‌ ಬಾಟಂ’ ಸಿನಿಮಾ ತಂಡ

ನಟ ಅಕ್ಷಯ್‌ ಕುಮಾರ್‌ಗೆ ಇಂದು ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಲಕ್ಷ್ಮಿಬಾಂಬ್‌’, ‘ಸೂರ್ಯವಂಶಿ’, ‘ಪೃಥ್ವಿರಾಜ್’, ‘ಅಂಟ್ರಂಗಿ ರೆ’, ‘ಬೆಲ್‌ ಬಾಟಂ’, ‘ರಕ್ಷಾಬಂಧನ್’ –ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ಸಿನಿಮಾಗಳ ಪಟ್ಟಿ ಇದು. ಸದ್ಯ ಬಿಟೌನ್‌ನಲ್ಲಿ ಅವರಷ್ಟು ಬ್ಯುಸಿಯಾದ ನಟ ಮತ್ತೊಬ್ಬರಿಲ್ಲ. ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿರುವ ‘ಬೆಲ್‌ ಬಾಟಂ’ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಅಕ್ಷಯ್‌ ಕುಮಾರ್‌ಗೆ ಇಂದು ಜನ್ಮದಿನದ ಸಂಭ್ರಮ.

ಅಂದಹಾಗೆ ‘ಬೆಲ್‌ ಬಾಟಂ’ ಚಿತ್ರತಂಡ ಅವರ ಹೊಸ ಫಸ್ಟ್‌ ಲುಕ್‌ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದೆ. 80ರ ದಶಕದಲ್ಲಿ ನಡೆಯುವ ಕಥೆ. ರಂಜಿತ್‌ ಎಂ. ತಿವಾರಿ ನಿರ್ದೇಶನದ ಇದರಲ್ಲಿ ಅವರದು ‘ರಾ’ ಏಜೆಂಟ್‌ ಪಾತ್ರ.

ಅಕ್ಷಯ್‌ ಕುಮಾರ್‌ ನಟನೆಯ ಮತ್ತೊಂದು ಪ್ರಮುಖ ಚಿತ್ರ ‘ಲಕ್ಷ್ಮಿಬಾಂಬ್‌’. ರಾಘವ ಲಾರೆನ್ಸ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಇದು ಬಿಡುಗಡೆಯಾಗಲಿದೆ ಎಂಬ ಸುದ್ದಿಯಿತ್ತು. ಈಗ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಂಜಯ್‌ ದತ್‌ ನಟನೆಯ ‘ಪೃಥ್ವಿರಾಜ್‌’ ಚಿತ್ರದಲ್ಲೂ ಅಕ್ಷಯ್‌ ಕುಮಾರ್‌ ನಟಿಸಿದ್ದಾರೆ. ಇದು ಐತಿಹಾಸಿಕ ಆ್ಯಕ್ಷನ್‌ ಸಿನಿಮಾ. ಡಾ.ಚಂದ್ರಶೇಖರ್‌ ದ್ವಿವೇದಿ ನಿರ್ದೇಶನದ ಇದರ ಶೇಕಡ 40ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಇದಕ್ಕೆ ಬಂಡವಾಳ ಹೂಡಿರುವುದು ಯಶ್‌ ರಾಜ್‌ ಫಿಲ್ಮ್ಸ್‌.

ಅಕ್ಷಯ್‌ ಕುಮಾರ್‌ ಮತ್ತು ಧನುಶ್‌ ನಟನೆಯ ‘ಅಟ್ರಂಗಿ ರೆ’ ಚಿತ್ರದ ಎರಡನೇ ಹಂತದ ಶೂಟಿಂಗ್‌ ಅಕ್ಟೋಬರ್‌ನಿಂದ ಶುರುವಾಗಲಿದೆಯಂತೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಆನಂದ್‌ ಎಲ್‌. ರೈ. ರೋಹಿತ್‌ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ ಚಿತ್ರದಲ್ಲೂ ಅಕ್ಷಯ್‌ ಕುಮಾರ್‌ ನಟಿಸುತ್ತಿದ್ದಾರೆ. ಇದರಲ್ಲಿ ಅವರದು ಉಗ್ರ ನಿಗ್ರಹ ಪಡೆಯ ಮುಖ್ಯಸ್ಥನ ಪಾತ್ರ. ಕತ್ರೀನಾ ಕೈಫ್‌ ಇದರ ನಾಯಕಿ.

ಈ ನಡುವೆಯೇ ಆನಂದ್ ಎಲ್‌. ರೈ ನಿರ್ದೇಶನದ ಮತ್ತೊಂದು ಹೊಸ ಚಿತ್ರ ‘ರಕ್ಷಾ ಬಂಧನ್‌’ನಲ್ಲಿ ಅಕ್ಷಯ್‌ ನಟಿಸುತ್ತಿದ್ದಾರೆ. ಅಣ್ಣ ಮತ್ತು ತಂಗಿಯ ಬಾಂಧವ್ಯದ ಸುತ್ತ ಇದರ ಕಥೆ ಹೆಣೆಯಲಾಗಿದೆ. ತನ್ನ ತಂಗಿ ಅಲ್ಕಾ ಭಾಟಿಯಾ ಅವರಿಗಾಗಿ ಅಕ್ಷಯ್‌ ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಮುಂದಿನ ವರ್ಷ ಇದರ ಶೂಟಿಂಗ್‌ ಶುರುವಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು