ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ನೀವೇ ವಕೀಲರಾಗಿ: ‘ಪುರುಷೋತ್ತಮ’ ಜಿಮ್ ರವಿ ಸಂದರ್ಶನ

Last Updated 14 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಕೋಲಾರ ಜಿಲ್ಲೆಯ ಕಠಾರಿಪಾಳ್ಯದ ಹುಡುಗ ಅಪ್ಪಟ ಏಕಲವ್ಯನಂತೆಯೇ ಬೆಳೆದು ದೇಹದಾರ್ಢ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದರು. ಅವರೇ ಜಿಮ್‌ ರವಿ. ಅವರ ಗರಡಿಯಲ್ಲಿ ಪಳಗಿದವರು ಸಾವಿರಾರು ಮಂದಿ. ಕ್ರೀಡಾಪಟು, ಪೋಷಕನಟರಾಗಿದ್ದ ಅವರು ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಈಗ ‘ಪುರುಷೋತ್ತಮ’ನಾಗಿ ಬರುತ್ತಿರುವ ಹೊತ್ತಿನಲ್ಲಿ ಒಂದಿಷ್ಟು ಮಾತುಕತೆ..

ಕ್ರೀಡಾಪ‍ಟುವಿನಿಂದ ಸಿನಿಮಾ ಹೀರೊವರೆಗಿನ ಬದುಕು ಹೇಗಿತ್ತು?

ನನ್ನ ಸಾಧನೆಗೆ ಸ್ಫೂರ್ತಿಯೇ ಕಡುಬಡತನ. ಅದು ನನಗೆ ಹಸಿವನ್ನು ತೋರಿಸಿತು. ಕನಸು ಕಾಣುವುದನ್ನು ಕಲಿಸಿತು. ಅಮ್ಮನೂ ಅದನ್ನೇ ಹೇಳುತ್ತಿದ್ದರು. ಕನಸು ಕಾಣಬೇಕು ಅಂತ. ಜತೆಗೊಂದು ಛಲ ಇತ್ತು. ಹಾಗಾಗಿ ಪರಿಶ್ರಮದ ಜತೆಗೆ ಕ್ರೀಡಾಪಥದಲ್ಲಿ ಮುನ್ನಡೆದೆ. ನೂರಾರು ಚಿನ್ನದ ಪದಕಗಳು ಅರಸಿ ಬಂದವು. ಏಕಲವ್ಯ, ಮಿಸ್ಟರ್‌ ಇಂಡಿಯಾ ಸಹಿತ ಹಲವು ಪ್ರಶಸ್ತಿಗಳು ಬಂದವು. ಈಗ ‘ಪುರುಷೋತ್ತಮ’ನಾಗಿ ಬಂದಿದ್ದೇನೆ.

ಸಿನಿಮಾ ಹೀರೊ ಆಗಲು ಕಾರಣ?

4ನೇ ತರಗತಿಯಲ್ಲಿದ್ದಾಗಲೇ ‘ನಮ್ಮಮ್ಮ ತಾಯಿ ಅಣ್ಣಮ್ಮ’ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದೆ. ರವಿಚಂದ್ರ ವಿ. ಅವರ ಸಿಪಾಯಿ ಚಿತ್ರದಲ್ಲಿ ಸಹ ಅವಕಾಶ ಸಿಕ್ಕಿತು. ನಂತರ ಸಾಲು ಅವಕಾಶಗಳು ಬಂದವು. ತೆಲುಗಿನಲ್ಲಿ ಸುಮಾರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಯಾವಾಗಲೂ ಖಳ, ಒದೆ ತಿನ್ನುವ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದೆ. ಹೀರೊ ಆಗುವುದು ಯಾವಾಗ ಎಂದು ನನ್ನ ಸ್ನೇಹಿತರು, ಹಿತೈಷಿಗಳು ಕೇಳುತ್ತಿದ್ದರು. ಈಗ ‘ಪುರುಷೋತ್ತಮ’ನಾಗಿ ಆ ಪ್ರಯತ್ನಕ್ಕೆ ಕೈಹಾಕಿದ್ದೇನೆ.

ಯಾರು ಈ ‘ಪುರುಷೋತ್ತಮ’?

ಚಿತ್ರದಲ್ಲಿ ಹೇಳಿರುವುದು ತ್ಯಾಗಮಯಿ ಪುರುಷೋತ್ತಮ. ಗಂಡ ಹೆಂಡತಿಗಾಗಿ, ಹೆಂಡತಿ ಗಂಡನಿಗಾಗಿ ಪರಸ್ಪರ ತ್ಯಾಗಿಗಳಾಗಬೇಕು. ಅದರಲ್ಲೇನೂ ಹೆಚ್ಚುಗಾರಿಕೆ ಇಲ್ಲ. ರಾಜೀ ಸೂತ್ರವೇ ಮುಖ್ಯ. ಒಬ್ಬರನ್ನೊಬ್ಬರು ಬಿಟ್ಟುಕೊಡಬಾರದು. ಈ ವಿಚಾರ ಎಲ್ಲರಿಗೂ ಇಷ್ಟವಾಗುತ್ತದೆ. ಮದುವೆ ಆಗಬೇಕಾದರೆ ಕುಟುಂಬದ ಎಲ್ಲರೂ ಸೇರಿ ನಿರ್ಧರಿಸುತ್ತಾರೆ. ವಿಚ್ಛೇದನವನ್ನು ಗಂಡ ಹೆಂಡತಿ ಮಾತ್ರ ನಿರ್ಧರಿಸುತ್ತಾರೆ. ವಿಚ್ಛೇದಿತರೇನೋ ಚೆನ್ನಾಗಿಯೇ ಬದುಕಬಹುದು. ಆದರೆ, ಅವರ ಸುತ್ತಮುತ್ತಲಿನವರು, ಕುಟುಂಬದವರು ಎಷ್ಟು ನೋವು ಅನುಭವಿಸುತ್ತಾರೆ ಅಲ್ವಾ? ಆದ್ದರಿಂದ ನಿಮ್ಮ ಭಿನ್ನಾಭಿಪ್ರಾಯಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ನಿಮಗೆ ನೀವೇ ವಕೀಲರಾಗಿ ಎಂದು ಚಿತ್ರದಲ್ಲಿ ಹೇಳಿದ್ದೇನೆ. ವಿಚ್ಛೇದನ ಎಲ್ಲದಕ್ಕೂ ಪರಿಹಾರ ಅಲ್ಲ.

‘ಪುರುಷೋತ್ತಮ’ನ ವಕೀಲಿಕೆ ತಯಾರಿ ಹೇಗಿತ್ತು?

ಈಗಾಗಲೇ ಚಿತ್ರಗಳಲ್ಲಿ ನಟಿಸಿದ ಕಾರಣ ಹೆಚ್ಚಿನ ತಯಾರಿ ಮಾಡಲಿಲ್ಲ. ಆದರೆ ನನ್ನ ಪಾತ್ರ ವಕೀಲರು, ನ್ಯಾಯಾಧೀಶರಿಗೆ ಖಂಡಿತವಾಗಿ ಇಷ್ಟವಾಗುತ್ತದೆ. ಅವರ ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತದೆ. ವಕೀಲ ಈ ರೀತಿಯೂ ಇರಬಹುದು ಎಂಬುದನ್ನು ತೋರಿಸಿದ್ದೇನೆ.

‘ಪುರುಷೋತ್ತಮ’ನ ಪ್ರಕಾರ ಹೆಂಡತಿಯನ್ನು ಹೇಗೆ ಪ್ರೀತಿಸಬೇಕು?

ಸ್ನೇಹಿತೆಯ ತರಹ ನೋಡಿ. ತಾಯಿಯ ತರಹ ಪ್ರೀತಿಸಿ. ಅವರು ನಿಮ್ಮೊಡನೆ (ಗಂಡನೊಡನೆ) ಹೇಳಲಾಗದ ತೊಳಲಾಟಗಳನ್ನು ಅರ್ಥಮಾಡಿಕೊಳ್ಳಿ. ಸಂಕಷ್ಟಗಳನ್ನು ಎದುರಿಸಲು ಬೆನ್ನೆಲುಬಾಗಿ ನಿಲ್ಲಿ. ವಿಶ್ವಾಸ ಮೂಡಿಸಿ. ಹೆಂಡತಿ ಹೇಗಿರಬೇಕು ಎಂಬುದನ್ನು ಇಲ್ಲಿ ನಾಯಕಿ ಅಪೂರ್ವಾ ತುಂಬಾ ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ. ಈ ಕಥೆಯನ್ನು ನನ್ನ ಪತ್ನಿ ಜ್ಯೋತಿ ಅವರು ಆಯ್ಕೆ ಮಾಡಿದರು.

ಸಿನಿಮಾ ಮೇಲೆ ನಿಮ್ಮ ನಿರೀಕ್ಷೆ?

ಒಳ್ಳೆಯ ಕಂಟೆಂಟ್‌ ಕೊಟ್ಟಿದ್ದೇನೆ. ಅದನ್ನು ಜನರಿಗೆ ಕೊಡುತ್ತೇನೆ. ಹೇಗಿದೆ ಎಂಬುದನ್ನು ಅವರೇ ಹೇಳಲಿ. ಪ್ರತಿಫಲವನ್ನು ದೇವರು ಕೊಡುತ್ತಾನೆ. ಇದು ನನ್ನ ನಂಬಿಕೆ. ಇಲ್ಲಿ ಜಿಮ್‌ ರವಿಯನ್ನು ನೋಡಲು ಬಂದರೆ ನಿರಾಸೆಯಾಗಬಹುದು. ಆದರೆ, ಪುರುಷೋತ್ತಮ ಎಂಬ ಸದ್ಗೃಹಸ್ಥನನ್ನು ನೋಡಲು ಬಂದರೆ ಖಂಡಿತವಾಗಿಯೂ ಚಿತ್ರ ಇಷ್ಟವಾಗುತ್ತದೆ. ಆದ್ದರಿಂದ ‘ಪುರುಷೋತ್ತಮ’ನನ್ನು ನೋಡಲು ಬನ್ನಿ.

ಗರಡಿಮನೆ ಉಳಿಸುವ ಅಭಿಯಾನ ಎಲ್ಲಿವರೆಗೆ ಬಂದಿತು?

ಈಗಾಗಲೇ ಅದು ಚಾಮರಾಜನಗರ, ಕೊಳ್ಳೆಗಾಲದಲ್ಲಿ ಆರಂಭವಾಗಿದೆ. ಸಿನಿಮಾ ಕೆಲಸ ಮುಗಿದ ಮೇಲೆ ಪೂರ್ಣವಾಗಿ ಆ ಅಭಿಯಾನ ರಾಜ್ಯದಾದ್ಯಂತ ಮುಂದುವರಿಯಲಿದೆ. ನಮ್ಮ ಗರಡಿಮನೆಗಳು ಪುನರುಜ್ಜೀವನಗೊಳ್ಳಬೇಕು. ದೇಸಿ ಆಹಾರ ಬರಬೇಕು. ಈ ಬಗ್ಗೆ ಸಮಗ್ರವಾದ ಕಾರ್ಯತಂತ್ರ ಇದೆ. ಜನಬೆಂಬಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT