ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಠಾಮೇಸ್ತ್ರಿ’ಯ ಭವ್ಯ ಬಂಗಲೆ

Last Updated 4 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬುದು ಚಿರಪರಿಚಿತ ನಾಣ್ಣುಡಿ. ಈ ಎರಡರ ಜೊತೆಗೂ ಮಿಳಿತಗೊಂಡಿರುವ ಸಂಭ್ರಮ, ಸಂಕಟಗಳನ್ನು ಒಟ್ಟಿಗೇ ಕಟ್ಟಿಕೊಡುವ ಮಾತು. ಇದು, ಮಧ್ಯಮ ವರ್ಗದ ಕುಟುಂಬಗಳಿಗಷ್ಟೇ ಅನ್ವಯವೇನೊ? ದೊಡ್ಡವರು ಅಥವಾ ದುಡ್ಡಿದ್ದವರ ಪಾಲಿಗೆ ಇದನ್ನೇ ಹೀಗೆ ಓದಿಕೊಳ್ಳಬಹುದು: ‘ಮನೆ ಕಟ್ಟಿದ್ದಾರೆ ನೋಡು, ಮದುವೆ ಮಾಡುತ್ತಿದ್ದಾರೆ ನೋಡು’.

ದೊಡ್ಡವರ, ದುಡ್ಡಿದ್ದವರ ಕುಟುಂಬಗಳ ಮದುವೆ ಮತ್ತು ಮನೆ ಎರಡೂ ಈಗ ಗಂಟೆಗಟ್ಟಲೆ ಬ್ರೇಕಿಂಗ್ ನ್ಯೂಸ್ ಆಗುವ ಕಾಲಘಟ್ಟವಿದು.
ಅಂಥದೊಂದುಮನೆ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಅದು, ಕೊನಿಡೇಲಾ ಶಿವಶಂಕರ ವರಪ್ರಸಾದ್ ಅವರ ಮನೆ. ಯಾರಿದು? ಎಂಬ ಪ್ರಶ್ನಾರ್ಥಕ ಭಾವಬೇಡ. ಅವರ ಇನ್ನೊಂದು ಚಿರಪರಿಚಿತ ಹೆಸರು ಚಿರಂಜೀವಿ. ಅಭಿಮಾನಿಗಳ ಪಾಲಿಗೆ ಪ್ರೀತಿಯ ಮೆಗಾಸ್ಟಾರ್.

ಬಾಕ್ಸ್ ಆಫೀಸ್ ದೃಷ್ಟಿಯಿಂದ ಒಂದು ಕಾಲದಲ್ಲಿ ತೆಲುಗು ಚಿತ್ರದಲ್ಲಿ ತನ್ನದೇ ಪ್ರಾಬಲ್ಯವೊಂದಿದ್ದ, ಈಗಲೂ ಅದೇ ಪ್ರಭಾವ, ಸ್ಟಾರ್‌ ವಾಲ್ಯೂ ಉಳಿಸಿಕೊಂಡಿರುವ ಚಿರಂಜೀವಿ ಅವರ ನೂತನ ಮನೆ ವಿಭಿನ್ನ ಕಾರಣಗಳಿಗೆ ಸದ್ದು ಮಾಡುತ್ತಿದೆ. ಇದು, ‘ಮುಠಾಮೇಸ್ತ್ರಿ’ ಅವರ ಭವ್ಯ ಬಂಗಲೆ. ವಾಸ್ತು, ಪರಂಪರೆ, ವಾಸ್ತುಶಿಲ್ಪ, ಆಧುನಿಕ ಸ್ಪರ್ಶ ಎಲ್ಲ ಕಾರಣಗಳಿಂದಲೂ ಗಮನಸೆಳೆದಿರುವ
ಮನೆ ಟಾಲಿವುಡ್‍ನ ಈ ಹೊತ್ತಿನ ಆಕರ್ಷಣೆ.

ಎಷ್ಟಾಯ್ತಂತೆ ಖರ್ಚು?

ಮನೆ ಕಟ್ಟಿದಾಗ ಆಪ್ತವಲಯದಲ್ಲಿ ಕೇಳಿಬರುವ ಪ್ರಶ್ನೆ ಇದು. ಇಲ್ಲಿಯೂ ಚಿರಂಜೀವಿ ಅಭಿಮಾನಿ ವಲಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಗುಸು ಗುಸು ನಡೆದಿದೆ! ಹೈದರಾಬಾದ್‍ನ ಪ್ರತಿಷ್ಠಿತ ಜ್ಯೂಬಿಲಿ ಹಿಲ್ಸ್ನಲ್ಲಿರುವ ಈ ಭವ್ಯ ಬಂಗಲೆಯ ನಿವೇಶನ ಮೌಲ್ಯವೇ 9 ಕೋಟಿ ಎನ್ನಲಾಗಿದೆ. ಮನೆ ನಿರ್ಮಾಣದ ಮೊದಲ ಅಂದಾಜು ₹38 ಕೋಟಿ ಇದ್ದು, ಈಗ ₹76 ಕೋಟಿ ಆಗಿದೆಯಂತೆಎಂಬ ಮಾತುಗಳಿವೆ. ವಾಸ್ತವ ವೆಚ್ಚ ಗೊತ್ತಿಲ್ಲದ ಕಾರಣ, ಇದು ಗಾಸಿಪ್ ಆಗಿಯೇ ಉಳಿದಿದೆ. ಮನೆ ಅಲಂಕಾರ, ವೈಭವ, ವಾಸ್ತುಶಿಲ್ಪವನ್ನು ಗಮನಿಸಿದರೆ 25,000ಕ್ಕೂ ಅಧಿಕ ಚದರ ಅಡಿ ವಿಸ್ತೀರ್ಣದ ಈ ಮನೆಯ ನಿರ್ಮಾಣ ವೆಚ್ಚ ಕುರಿತ ಕೋಟಿಗಳ ಲೆಕ್ಕಾಚಾರ ಅತಿಶಯೋಕ್ತಿ ಎನಿಸುವುದಿಲ್ಲ.

ಒಳಾಂಗಣ ವಿನ್ಯಾಸ ಒಳಗೊಂಡತೆ ವಾಸ್ತು

ವಿನ್ಯಾಸವನ್ನು ಹೆಸರಾಂತ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ‘ತಹಿಲಿಯಾನಿ ಹೋಮ್ಸ್’ ಮಾಡಿದೆ. ವಿನ್ಯಾಸ ಸಿದ್ಧಾಂತ, ಕಲ್ಪನೆ, ಕುರಿತಂತೆ ಸಂಸ್ಥೆಯ ಜಹನ್ ತಹಿಲಿಯಾನಿ ಅವರ ಪ್ರಕಾರ, ‘ಈ ಮನೆಗೆ ಆಧುನಿಕ ಸ್ಪರ್ಶವಿದ್ದು, ಈ ನೆಲದ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತೆ ರೂಪಿಸಲಾಗಿದೆ’.

ಮನೆಯ ವಿನ್ಯಾಸ ಮಾಡುವಾಗ ಆದಷ್ಟು ಭಾರತೀಯ ಸಂಸ್ಕೃತಿ, ಪರಂಪರೆಗೆ ಒತ್ತು ನೀಡಿದ್ದು, ಆಧುನಿಕ ಸ್ಪರ್ಶ ನೀಡಲಾಗಿದೆ. ಅಮೃತಶಿಲೆಯ ಕಾರ್ಪೆಟ್, ಮುತ್ತುಗಳನ್ನು ಬಳಸಿದ ಇನ್‍ಲೇ ಕಸೂತಿ, ದೇಶದ ವಿವಿಧ ಭಾಗದ ವಿಶೇಷಗಳನ್ನು ಬಿಂಬಿಸುವ ಸೊಬಗು
ಇಲ್ಲಿದೆ. ಆಧುನಿಕ ಭಾರತವನ್ನು ಬಿಂಬಿಸುವಂತೆ ವಿವಿಧ ಅಂಶಗಳಿಗೆ ಒತ್ತು ನೀಡಲಾಗಿದೆ ಎನ್ನುತ್ತಾರೆ.

ಚಿರಂಜೀವಿ ಅವರಿಂದ ನಿರ್ದಿಷ್ಟ ಸೂಚನೆ ಇತ್ತೆ ಎಂಬ ಪ್ರಶ್ನೆಗೆ,`ಇಲ್ಲ. ಎಲ್ಲವನ್ನೂ ನಮ್ಮ ವಿವೇಚನೆಗೆ ಬಿಟ್ಟಿದ್ದರು. ಇದೊಂದು ಷೋ ಪೀಸ್, ಚಿರಂಜೀವಿ ಅವರ ಕೊಠಡಿಗೆ ಕಪ್ಪು– ಬಿಳಿ ಕಲ್ಪನೆಯ ವಿನ್ಯಾಸ ಮಾಡಲಾಗಿದೆ. ನೆಲ ಹಾಸಿಗೆ ಚೆಸ್‍ಬೋರ್ಡ್ ಸ್ವರೂಪವಿದೆ’ಎನ್ನುತ್ತಾರೆ.

ಆದರೆ ಚಿರಂಜೀವಿ ಪತ್ನಿ ಸುರೇಖಾ, ಪುತ್ರ ರಾಮ್‍ಚರಣ್ ಆಗಾಗ್ಗೆ ಸಲಹೆ ನೀಡುತ್ತಿದ್ದರು. ಚಿರಂಜೀವಿ ಅವರು ಭಜರಂಗಬಲಿ ಭಕ್ತ. ಹೀಗಾಗಿ, ನೆಲಮಹಡಿಯಲ್ಲಿ ಪೂಜಾ ಕಾರ್ನರ್ ಇದೆ. ವಿಶಾಲವಾಗಿದ್ದು, ಗ್ರಾನೈಟ್‍ನಿಂದ ನಿರ್ಮಿಸಿದ ಪೂಜಾ ಕೊಠಡಿ. ಪ್ರಾರ್ಥನೆ,ಪಠಣೆ, ಅಧ್ಯಾತ್ಮಕ್ಕೆ ಸ್ಥಳಾವಕಾಶವಿದೆ. ದೇವಸ್ಥಾನ ಮಾದರಿಯಿದೆ. ದುಷ್ಟಶಕ್ತಿಗಳಿಂದ ರಕ್ಷಣೆ ನೀಡಲಿದೆ ಎನ್ನಲಾದ ಚೀನಾದ ಹಸಿರು ಬಣ್ಣದ ಹರಳುಗಳನ್ನು ಬಳಸಿ ಒಂದು ಕೊಠಡಿ ವಿನ್ಯಾಸ ಮಾಡಲಾಗಿದೆ.

ವಿಲಾಸಿ ಸೌಲಭ್ಯಗಳು, ಈಜುಕೊಳ, ವಿಶಾಲ ಉದ್ಯಾನ, ಮಲಗುವ ಕೊಠಡಿ, ಹಾಲ್ ಸೇರಿ ಪ್ರಕೃತಿ ಸೊಬಗು ಸವಿಯುವಂತೆ ವಾಸ್ತುವಿನ್ಯಾಸ, ಸಹಜ ಗಾಳಿ, ಬೆಳಕು ಬರುವಂತ ವಿಶಾಲ ವ್ಯವಸ್ಥೆ.. ಆಧುನಿಕ ಮನೆಯಲ್ಲಿ ಏನೆಲ್ಲಾ ಇರಬೇಕು ಎಂಬುದಕ್ಕೆ ಉದಾಹರಣೆಯಂತಿದೆ ಮನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT