ಶುಕ್ರವಾರ, ಜೂನ್ 18, 2021
24 °C

ಆರೋಗ್ಯದ ಕುರಿತು ವದಂತಿ: ನಾನು ಆರೋಗ್ಯವಾಗಿದ್ದೇನೆ ಎಂದ ನಟ ದೊಡ್ಡಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಬುಧವಾರವೂ ಇದೇ ರೀತಿ ವದಂತಿಯೊಂದು ಹರಡಿದ್ದು, ಹಿರಿಯ ನಟ ದೊಡ್ಡಣ್ಣ ಅವರ ಚಿತ್ರದ ಜೊತೆಗೆ ‘ಕನ್ನಡ ಚಿತ್ರರಂಗದ ಹಾಸ್ಯ ನಟ ದೊಡ್ಡಣ್ಣ ಇನ್ನಿಲ್ಲ. ಭಾವಪೂರ್ಣ ಶ್ರದ್ಧಾಂಜಲಿ’ ಎನ್ನುವ ಅಡಿಬರಹವಿರುವ ಪೋಸ್ಟ್‌ ಹರಿದಾಡಿತ್ತು.

ಈ ವದಂತಿಯಿಂದ ಸಾಕಷ್ಟು ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರು ಒಂದು ಕ್ಷಣ ಆಘಾತಕ್ಕೊಳಗಾಗಿದ್ದರು. ಸೂಕ್ತ ಮಾಹಿತಿ ಅರಿಯದ ಹಲವರು ದೊಡ್ಡಣ್ಣ ಅವರ ಚಿತ್ರವನ್ನು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದರು. ತಕ್ಷಣದಲ್ಲೇ ಈ ಕುರಿತು ಸ್ಪಷ್ಟನೆ ನೀಡಿದ ನಟ ದೊಡ್ಡಣ್ಣ, ‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೊಟೊ ಹಾಕಿ, ನಾನು ಮೃತಪಟ್ಟಿದ್ದೇನೆ ಎಂದು ಹಾಕಿದ್ದಾರೆ. ನನಗೆ ನೂರಾರು ಕರೆಗಳು ಬಂದಿದೆ. ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿದ್ದೇನೆ. ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಕನ್ನಡ ನಾಡಿನ ಜನರ ಆಶೀರ್ವಾದ ಇರುವವರೆಗೂ ನನಗೆ ಏನೂ ಆಗುವುದಿಲ್ಲ. ಆಯಸ್ಸು ಜಾಸ್ತಿಯಾಯಿತು, ಕಂಟಕ ಬಗೆಹರಿಯಿತು’ ಎಂದು ವಿಡಿಯೊದಲ್ಲಿ ಉಲ್ಲೇಖಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ನಟ ಅನಿರುದ್ಧ ಅವರಿಗೆ ಕೋವಿಡ್‌ ದೃಢಪಟ್ಟಿದೆ ಎನ್ನುವ ಪೋಸ್ಟ್‌ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೊನೆಗೆ ಸ್ವತಃ ಅನಿರುದ್ಧ ಅವರೇ ‘ನನಗೇನೂ ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು