ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನಪೂರ್ಣಿ’ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಆರೋಪ: ಕ್ಷಮೆಯಾಚಿಸಿದ ನಯನತಾರಾ

Published 19 ಜನವರಿ 2024, 4:20 IST
Last Updated 19 ಜನವರಿ 2024, 4:20 IST
ಅಕ್ಷರ ಗಾತ್ರ

ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನಲೆಯಲ್ಲಿ ಬಹುಭಾಷಾ ನಟಿ ನಯನತಾರಾ ಅವರು ಕ್ಷಮೆಯಾಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನಾನು ಸೇರಿದಂತೆ ‘ಅನ್ನಪೂರ್ಣಿ’ ಚಿತ್ರತಂಡದವರು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ದೇಶವನ್ನು ಹೊಂದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಅಜಾಗರೂಕತೆಯಿಂದಾಗಿ ನೋವನ್ನು ಉಂಟುಮಾಡಿರಬಹುದು. ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾದ, ಸೆನ್ಸಾರ್‌ಗೆ ಒಳಪಟ್ಟಿದ್ದ ಚಲನಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದನ್ನು ನಾವು ನಿರೀಕ್ಷಿಸಿರಲಿಲ್ಲ. ನಾನು ಸೇರಿದಂತೆ ಚಿತ್ರತಂಡದವರು ಇತರರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ’ ಎಂದು ತಿಳಿಸಿದ್ದಾರೆ.

ನಾನು ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ ಮತ್ತು ದೇಶದಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

‘ಅನ್ನಪೂರ್ಣಿ’ ಚಿತ್ರದ ಉದ್ದೇಶ ಸುಧಾರಣೆ ಬಯಸುವುದಾಗಿತ್ತೇ ಹೊರತು, ದುಃಖವನ್ನು ಉಂಟುಮಾಡುವುದಲ್ಲ. ಕಳೆದ ಎರಡು ದಶಕಗಳಿಂದ ಚಿತ್ರೋದ್ಯಮದಲ್ಲಿ ನನ್ನ ಪ್ರಯಾಣ ಸಕಾರಾತ್ಮಕತೆಯನ್ನು ಹರಡುವುದರೊಂದಿಗೆ ಸಾಗಿದೆ ಎಂದು ಬರೆದುಕೊಂಡಿದ್ದಾರೆ.

‘ಅನ್ನಪೂರ್ಣಿ’ ಸಿನಿಮಾದ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿರುವ ಎರಡು ಬಲಪಂಥೀಯ ಸಂಘಟನೆಗಳು ನಯನತಾರಾ ವಿರುದ್ಧ ಪತ್ಯೇಕ ದೂರು ದಾಖಲಿಸಿದ್ದವು.

ಚಿತ್ರದಲ್ಲಿ ಹಿಂದೂ ದೇವರು ಶ್ರೀರಾಮನನ್ನು ಮಾಂಸಾಹಾರಿ ಎಂದು ಕರೆದು ಅವಹೇಳನ ಮಾಡಲಾಗಿದೆ. ಅಲ್ಲದೇ ಲವ್‌ ಜಿಹಾದ್‌ ಅನ್ನು ಪ್ರೋತ್ಸಾಹಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಬಜರಂಗ ದಳದ ಕಾರ್ಯಕರ್ತರು ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿದ್ದು, ಹಿಂದೂ ಐಟಿ ಸೆಲ್ ಸಂಸ್ಥಾಪಕ ರಮೇಶ್ ಸೋಲಂಕಿ ಅವರು ದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ನಟಿ ಮತ್ತು ಇತರರ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ. ದೂರುದಾರರು ಇದುವರೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿಲ್ಲ. ಪೊಲೀಸರ ಮುಂದೆ ದೂರುದಾರರು ಹಾಜರಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಚಿತ್ರದ ಬಗ್ಗೆ ವಿರೋಧ ವ್ಯಕ್ತವಾಗುತ್ತಲೇ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಿಂದ ಚಿತ್ರ ಕಾಣೆಯಾಗಿದೆ. ಚಿತ್ರ ನಿರ್ಮಾಣ ಸಂಸ್ಥೆ ಜೀ5 ಕ್ಷಮೆ ಕೋರಿ ಸಂಬಂಧಪಟ್ಟವರಿಗೆ ಪತ್ರ ಬರೆದಿದೆ.

ಏನಿದು ವಿವಾದ?

ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನ್ನಪೂರ್ಣಿ (ನಯನತಾರಾ ಪಾತ್ರದ ಹೆಸರು) ಅಡುಗೆ ಬಗ್ಗೆ ಆಸಕ್ತಿ ಹೊಂದಿದವಳಾಗಿರುತ್ತಾಳೆ. ಕುಟುಂಬದ ವಿರೋಧದ ನಡುವೆಯೂ ಮಾಂಸಾಹಾರಿ ಅಡುಗೆ ಮಾಡಲು ಅನ್ನಪೂರ್ಣಿ ನಿರ್ಧರಿಸುತ್ತಾಳೆ. ಈ ವೇಳೆಯೇ ಮುಸ್ಲಿಂ ಸ್ನೇಹಿತನ ಪರಿಚಯವಾಗುತ್ತದೆ. ಚಿತ್ರದ ಒಂದು ಸನ್ನಿವೇಶದಲ್ಲಿ ‘ರಾಮನೂ ಮಾಂಸಾಹಾರಿ’ ಎಂದು ಮುಸ್ಲಿಂ ಸ್ನೇಹಿತ ಅನ್ನಪೂರ್ಣಿಗೆ ಹೇಳುತ್ತಾನೆ. ಮುಸ್ಲಿಂ ಸ್ನೇಹಿತನ ಪ್ರಭಾವಕ್ಕೊಳಗಾದ ಅನ್ನಪೂರ್ಣಿ ಬಿರಿಯಾನಿ ಮಾಡುವ ವೇಳೆ ಹಿಜಾಬ್ ಧರಿಸುತ್ತಾಳೆ. ಈ ಎಲ್ಲ ವಿಷಯಗಳು ಚಿತ್ರವನ್ನು ವಿವಾದದ ಸುಳಿಯಲ್ಲಿ ಇಟ್ಟಿವೆ.

ನಿಲೇಶ್‌ ಕೃಷ್ಣ ನಿರ್ದೇಶನದ ಈ ಚಿತ್ರ ಕಳೆದ ವರ್ಷ ಡಿಸೆಂಬರ್ 1ರಂದು ಬಿಡುಗಡೆಯಾಗಿತ್ತು. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಗೊಂಡಿದ್ದು, ಚಿತ್ರದ ಬಗ್ಗೆ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT