ಶನಿವಾರ, ಸೆಪ್ಟೆಂಬರ್ 19, 2020
23 °C

ಉಸಿರಾಟ ಸಮಸ್ಯೆಯಿಂದ ಸಂಜಯ್‌ ದತ್‌ ಆಸ್ಪತ್ರೆಗೆ ದಾಖಲು: ಕೋವಿಡ್ ನೆಗೆಟಿವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಸಂಜಯ್ ದತ್

ಮುಂಬೈ: ಉಸಿರಾಟದಲ್ಲಿ ಸಮಸ್ಯೆ ಉಂಟಾದ ಕಾರಣ ಬಾಲಿವುಡ್‌ ನಟ ಸಂಜಯ್‌ ದತ್ (61) ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‌–19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ವೈದ್ಯಕೀಯ ಪರೀಕ್ಷೆಗಳಿಗಾಗಿ ಆಸ್ಪತ್ರೆಯಲ್ಲಿಯೇ ಉಳಿದಿದ್ದಾರೆ.

'ನಾನು ಚೆನ್ನಾಗಿರುವೆ ಎಂದು ಎಲ್ಲರಿಗೂ ತಿಳಿಯಲು ಬಯಸುತ್ತೇನೆ. ಸದ್ಯ ನಾನು ವೈದ್ಯಕೀಯ ತಪಾಸಣೆಗಳಿಗೆ ಒಳಗಾಗುತ್ತಿದ್ದೇನೆ ಹಾಗೂ ಕೋವಿಡ್‌–19 ನೆಗೆಟಿವ್‌ ಬಂದಿದೆ' ಎಂದು ಸಂಜಯ್‌ ದತ್ ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಎರಡು ಮೂರು ದಿನಗಳಲ್ಲಿ ಮನೆಗೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ.

'ಉಸಿರಾಟದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಸಂಜೆ 4:30-5:00ರ ವೇಳೆಗೆ ಸಾಮಾನ್ಯ ಪರೀಕ್ಷೆಗಳಿಗಾಗಿ ಅವರು ಲೀಲಾವತಿ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಕೋವಿಡ್–19 ಪರೀಕ್ಷೆಯನ್ನೂ ನಡೆಸಲಾಗಿದ್ದು, ನೆಗೆಟಿವ್‌ ಬಂದಿದೆ' ಎಂದು ಸಂಜಯ್‌ ದತ್‌ ಸೋದರಿ ಪ್ರಿಯಾ ದತ್‌ ಹೇಳಿದ್ದಾರೆ.

ಸಂಜಯ್‌ ದತ್‌ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ನಟರಾದ ಸುನಿಲ್‌ ದತ್‌ ಮತ್ತು ನರ್ಗಿಸ್‌ ಅವರ ಹಿರಿಯ ಮಗ ಸಂಜಯ್. ಅವರಿಗೆ ಇಬ್ಬರು ಸೋದರಿಯರು ಪ್ರಿಯಾ ದತ್‌ ಮತ್ತು ನಮ್ರತಾ ದತ್. ಸಂಜಯ್‌ ಮೊದಲ ಪತ್ನಿ ರಿಚಾ ಶರ್ಮಾ ಅವರ ಮಗಳು ತ್ರಿಶಾಲಾ ದತ್‌ ಹಾಗೂ ಎರಡನೇ ಪತ್ನಿ ಮಾನ್ಯತಾ ದತ್‌ಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ರಿಚಾ ಶರ್ಮಾ 1996ರಲ್ಲಿ ಮಿದುಳು ಕ್ಯಾನ್ಸರ್‌ನಿಂದ ಸಾವಿಗೀಡಾದರು.
 
ಪ್ರಶಾಂತ್‌ ನೀಲ್‌ ನಿರ್ದೇಶನದ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ಸಂಜಯ್ ದತ್‌ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು