ಗುರುವಾರ , ಏಪ್ರಿಲ್ 15, 2021
29 °C

PV Web Exclusive: ಆಲ್‌ ಇಂಡಿಯಾ ಕಟೌಟ್‌ 25 ನಾಟೌಟ್‌

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರವೊಂದು ಬಿಡುಗಡೆಯಾದರೆ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಮುಖ್ಯಚಿತ್ರಮಂದಿರಕ್ಕೆ ಆ ಚಿತ್ರದ ನಾಯಕ ನಟ ಭೇಟಿ ನೀಡುವುದು ವಾಡಿಕೆ. ಆದರೆ ಕಹಿ ಅನುಭವದ ಕಾರಣ ತಮ್ಮ ಹೊಸ ಚಿತ್ರ ಬಿಡುಗಡೆಯಾದಾಗ ಯಶವಂತಪುರದ ಗೋವರ್ಧನ ಚಿತ್ರಮಂದಿರಕ್ಕೆ ಆ ನಟ ಭೇಟಿ ನೀಡಿದ್ದರು. ಜನರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲ, ಚಪ್ಪಾಳೆ ನಿರೀಕ್ಷೆ, ಜನರಿಗೆ ಇಷ್ಟವಾಗದಿದ್ದರೆ ಹೇಗೆ ಎಂಬ ಅಳಕು ಆತನನ್ನು ಕಾಡುತ್ತಿತ್ತು. ಫಸ್ಟ್ ಡೇ ಫಸ್ಟ್‌ ಶೋಗೆ ಜನರೇ ಇರಲಿಲ್ಲ!

ಈ ಚಿತ್ರದ ಕತೆಯೂ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ನಿರ್ಮಾಪಕರಿಂದ ದೂರವಾಣಿ ಕರೆ ಬರುತ್ತದೆ. ‘ಗೋವರ್ಧನ ಚಿತ್ರಮಂದಿರದಲ್ಲಿದ್ದೇನೆ, ಜನರೇ ಇಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಆ ನಟ. ‘ಅಲ್ಲಿಗೆ ಯಾಕೆ ಹೋದ್ಯಪ್ಪ, ಮೇನ್ ಥೇಟರ್ ಮೇನಕದಲ್ಲಿ 9.30ಕ್ಕೆ ಹೌಸ್‌ಫುಲ್ ಬೋರ್ಡ್‌ ಬಿದ್ದಿದೆ. ಇನ್ನೊಂದು ಚಿತ್ರಮಂದಿರಕ್ಕಾಗುವಷ್ಟು ಜನರು ಹೊರಗೆ ನಿಂತಿದ್ದಾರೆ. ಬೇಗ ಬಾ ಇಲ್ಲಿ ಎನ್ನುತ್ತಾರೆ ನಿರ್ಮಾಪಕ.

ಆಶ್ಚರ್ಯಗೊಂಡ ನಟ ಆ ಚಿತ್ರಮಂದಿರಕ್ಕೆ ದೌಡಾಯಿಸುತ್ತಾರೆ. ಸಿನಿಮಾ ಮುಗಿದ ನಂತರ  ಪ್ರೇಕ್ಷಕರು ಅವರನ್ನು ಬಾಚಿ ತಬ್ಬಿಕೊಂಡು, ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸುತ್ತಾರೆ. ಕಿಚ್ಚನಿಗೆ ಜೈ ಎನ್ನುತ್ತಾರೆ. ಅಲ್ಲಿಗೆ, ಆರಡಿ ಎತ್ತರದ ಕನ್ನಡದ ಹೊಸ ಹೀರೋ ಹುಟ್ಟಿಕೊಳ್ಳುತ್ತಾನೆ. ಕನ್ನಡದ ಬಾವುಟವನ್ನು ಬಾಲಿವುಡ್‌, ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿಯೂ ಹಾರಿಸುತ್ತಾನೆ.

ಕಿಚ್ಚ ಎಂದು ಹೇಳಿದ ಮೇಲೆ ಆ ನಟ ಸುದೀಪ್ ಎನ್ನುವ ಅವಶ್ಯಕತೆ ಇಲ್ಲ. ಸುದೀಪ್ ಹೆಸರಿನೊಂದಿಗೇ ಕಿಚ್ಚ ಸೇರಿ ಹೋಗಿದೆ. ಸುದೀಪ್ ಸಂಜೀವ್, ಅಭಿಮಾನಿಗಳ ಕಿಚ್ಚ; ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷಗಳೇ ಕಳೆದಿದೆ. ಕನ್ನಡದ ಸೂಪರ್‌ಸ್ಟಾರ್‌ನ ಚಿತ್ರರಂಗದ ಪಯಣದ ಹಾದಿಯಲ್ಲಿ ಏಳುಬೀಳುಗಳಿವೆ. ಅಪಮಾನ, ಸನ್ಮಾನವೂ ಇದೆ. ನಟನಾಗಿ ವೃತ್ತಿ ಜೀವನ ಆರಂಭಿಸಿದ ಸುದೀಪ್ ನಿರ್ದೇಶಕ, ನಿರ್ಮಾಪಕ, ಗಾಯಕರಾಗಿಯೂ ಛಾಪು ಮೂಡಿಸಿದ್ದಾರೆ.

ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಬಿಡುಗಡೆಗೆ ಸಿದ್ಧವಾಗಿರುವ ಸುದೀಪ್ ಅಭಿನಯದ ಚಿತ್ರಗಳು. ಎರಡೂ ಚಿತ್ರಗಳು ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿವೆ. ಫ್ಯಾಂಟಮ್ ಹೆಸರನ್ನು ವಿಕ್ರಾಂತ್ ರೋಣ ಎಂದು ಬದಲಿಸಲಾಗಿದೆ. ಕೊರೊನಾ ನಂತರ ಶೂಟಿಂಗ್ ಪ್ರಾರಂಭಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಗೆ ಸಹ ಈ ಚಿತ್ರದ್ದು.

ಚಿತ್ರದ 180 ಸೆಕೆಂಡ್‌ಗಳ ತುಣುಕನ್ನು ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ಜನವರಿ 31ರಂದು ಪ್ರದರ್ಶಿಸಲಾಗುತ್ತಿದೆ. ಅಲ್ಲದೆ ಸುದೀಪ್ ಅವರ 200 ಅಡಿ ಎತ್ತರದ ವರ್ಚುವಲ್ ಕಟೌಟ್‌ ಅನ್ನು ಸಹ ನಿಲ್ಲಿಸಲಾಗುತ್ತದೆ. ಬುರ್ಜ್‌ ಖಲೀಫಾದಲ್ಲಿ ಸಾಮಾನ್ಯವಾಗಿ ಬಾಲಿವುಡ್‌ ನಟರ ಚಿತ್ರ ಹಾಕಲಾಗುತ್ತದೆ. ಇದೇ ಮೊದಲ ಬಾರಿ ಕನ್ನಡದ ನಟನೊಬ್ಬನ ಕಟೌಟ್‌ ನಿಲ್ಲಲಿದೆ.


ಅಮಿತಾಬ್ ಬಚ್ಚನ್ ಅವರೊಂದಿಗೆ ಸುದೀಪ್

ಸುದೀರ್ಘ ಪಯಣ: 2001ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಹುಚ್ಚ ಸುದೀಪ್‌ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟ ಚಿತ್ರವಾದರೂ, ಅದಕ್ಕೂ ಆರು ವರ್ಷಗಳ ಮೊದಲೇ ಅವರು 1996ರಲ್ಲಿ ಬ್ರಹ್ಮ ಎಂಬ ಚಿತ್ರಕ್ಕೆ ಮೊದಲು ಬಣ್ಣ ಹಚ್ಚಿದ್ದರು. ಆದರೆ ಆ ಚಿತ್ರದ ಚಿತ್ರೀಕರಣ ಅರ್ಧಕ್ಕೆ ನಿಂತಿತು. ಆ ನಂತರ ಓ ಕುಸುಮಾ ಬಾಲೆ ಚಿತ್ರದಲ್ಲಿ ನಟಿಸಿದರು. ಅದೂ ಪೂರ್ಣವಾಗಲಿಲ್ಲ. ಅದರ ಮಧ್ಯೆ ಹಾಸಿಗೆ ಜಾಹೀರಾತು, ಧಾರಾವಾಹಿಯಲ್ಲಿ ನಟಿಸಿದರು.

ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಚಿತ್ರ ತಾಯಮ್ಮ. ಆದರೆ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಯಿತು. ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರತ್ಯರ್ಥ ಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದರು. ಆ ನಂತರ ತಮ್ಮದೇ ಹೋಂ ಬ್ಯಾನರ್‌ನಲ್ಲಿ ದೇಸಾಯಿ ಅವರ ನಿರ್ದೇಶನದಲ್ಲಿ ‘ಸ್ಪರ್ಶ’ ಚಿತ್ರದಲ್ಲಿ ನಟಿಸಿದರು. ಸ್ಪರ್ಶ ಹೆಸರು ತಂದುಕೊಟ್ಟರೂ, ಸ್ಟಾರ್ ಪಟ್ಟ ನೀಡಲಿಲ್ಲ.

ಆ ನಂತರ ಸುದೀಪ್ ನಟಿಸಿದ ಚಿತ್ರವೇ ಹುಚ್ಚ. ಇದು ತಮಿಳಿನ ‘ಸೇತು’ ಚಿತ್ರದ ರಿಮೇಕ್. ಬಾಲ ನಿರ್ದೇಶನದ ತಮಿಳಿನ ಚಿತ್ರದಲ್ಲಿ ಚಿಯಾನ್‌ ವಿಕ್ರಮ್ ಅಭಿನಯಿಸಿದ್ದರು. ಸೇತು ದೊಡ್ಡ ಹಿಟ್ ಆಗಿತ್ತು. ಯಜಮಾನ ಚಿತ್ರ ನಿರ್ಮಿಸಿದ್ದ ಆಸ್ಕರ್ ಫಿಲಮ್ಸ್ ಸಂಸ್ಥೆಯ ರೆಹಮಾನ್ ಚಿತ್ರದ ರಿಮೇಕ್ ಹಕ್ಕು ಖರೀದಿಸಿದ್ದರು.

ಶಿವರಾಜ್ ಕುಮಾರ್, ಉಪೇಂದ್ರ ಅವರನ್ನು ಅಭಿನಯಿಸುವಂತೆ ಕೇಳಿದರೂ, ಕೈಗೂಡಿರಲಿಲ್ಲ. ಕೊನೆಗೆ ಅದಕ್ಕೆ ಸುದೀಪ್ ಆಯ್ಕೆಯಾದರು. ಒರಟು ಸ್ವಭಾವದ ಮುಗ್ಧ ಮನಸ್ಸಿನ ಪ್ರೇಮಿಯೊಬ್ಬ ದುರಂತ ಅಂತ್ಯ ಕಾಣುವುದು ಚಿತ್ರದ ತಿರುಳು. ಎನ್‌. ಓಂ ಪ್ರಕಾಶ್ ರಾವ್ ಚಿತ್ರದ ನಿರ್ದೇಶಕ. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಐರನ್ ಲೆಗ್ ಎಂದು ಮೂದಲಿಸುತ್ತಿದ್ದವರು ಮೂಗಿನ ಮೇಲೆ ಕೈ ಇಟ್ಟುಕೊಳ್ಳುವಂತಾಯಿತು. ಅಲ್ಲಿಂದ ಆರಂಭವಾದ ಸುದೀಪ್ ಚಿತ್ರಓಟ, ಫ್ಯಾಂಟಮ್ ವರೆಗೂ ಸಾಗಿ ಬಂದಿದೆ.

ಕಿಚ್ಚನ ಚಿತ್ರ ಜೀವನದಲ್ಲಿ ಏಳುಬೀಳಿನ ಗ್ರಾಫ್‌ ಇದೆ. ಹುಚ್ಚ ನಂತರ ಇನ್ನೊಂದು ತಮಿಳಿನ ರಿಮೇಕ್ ವಾಲಿ ಚಿತ್ರದಲ್ಲಿ ನಟಿಸಿದರು. ಆ ಚಿತ್ರವೂ ಹೆಸರು ಮಾಡಿತು. ಮುಖ್ಯವಾಗಿ ವಿಕ್ಷಿಪ್ತ ಪಾತ್ರ ಸುದೀಪ್ ನಟನೆಯನ್ನು ಒರೆಗಲ್ಲಿಗೆ ಹಚ್ಚಿತು. ಆ ನಂತರ ಚಂದು, ಕಿಚ್ಚ, ಪಾರ್ಥ, ಮಹಾರಾಜ, ಕಾಶಿ, ಸೈ ಮುಂತಾದ ಚಿತ್ರಗಳು ಸಾಲುಸಾಲಾಗಿ ತೆರೆಕಂಡವು. ಚಿತ್ರಗಳು ಕಮರ್ಷಿಯಲ್ ಆಗಿ ಸೈ ಎನಿಸಿಕೊಂಡರೂ, ಪಾತ್ರದ ಏಕಾತಾನತೆಯಿಂದ ಅವರಲ್ಲಿನ ನಟ ಹೊಳಪು ಕಳೆದುಕೊಳ್ಳುತ್ತಿರುವಂತೆ ಭಾಸವಾಯಿತು.

ಆ ನಂತರ ಸುದೀಪ್ ಮತ್ತೊಮ್ಮೆ ಸದ್ದು ಮಾಡಿದ್ದು ಮೈ ಆಟೊಗ್ರಾಫ್ ಚಿತ್ರದ ಮೂಲಕ. ಇದು ತಮಿಳಿನ ಚೇರನ್ ನಿರ್ದೇಶನದ ಆಟೊಗ್ರಾಫ್‌ ಚಿತ್ರದ ರಿಮೇಕ್. ಮಾಡಿದ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣದ ಕಾರಣ, ಸುದೀಪ್ ಖುದ್ದು ತಾವೇ ನಿರ್ದೇಶನಕ್ಕಿಳಿದರು. ನೆನಪುಗಳ ಲೋಕದ ಪಯಣದಲ್ಲಿ ಮುರಿದ ಪ್ರೀತಿಯ ಗುರುತುಗಳು ಪರಿಕಲ್ಪನೆಯ ಮೈ ಆಟೊಗ್ರಾಫ್‌ ದೊಡ್ಡ ಹಿಟ್‌ ಆಯಿತು. ಸಂತೋಷ್ ಚಿತ್ರಮಂದಿರದಲ್ಲಿ 25 ವಾರಗಳ ಪ್ರದರ್ಶನ ಕಂಡಿತು.

ನಿರ್ದೇಶಕರಾಗಬೇಕು ಎಂಬ ಕನಸಿನೊಂದಿಗೆ ಚಿತ್ರರಂಗ ಪ್ರವೇಶಿಸಿದವರು ಸುದೀಪ್. ಆದರೆ, ಅವರನ್ನು ನೋಡಿದ ನಟ– ನಿರ್ದೇಶಕ ಉಪೇಂದ್ರ ಅವರು ’ಇಷ್ಟು ಚೆನ್ನಾಗಿದ್ದೀರ, ಒಳ್ಳೆ ಹೈಟ್‌ ಇದ್ದೀರ, ನಿರ್ದೇಶಕ ಆಗ್ತೀನಿ ಅಂತೀರಲ್ಲ. ಹೀರೋನೆ ಆಗಿ‘ ಎಂದಿದ್ದರು. ಆ ನಂತರ ಅವರು ನಟನಾಗುವ ನಿಟ್ಟಿನಲ್ಲಿ ಮುಂದಡಿ ಇಟ್ಟರು. ಬೇಡಿಕೆ ಕಳೆದುಕೊಳ್ಳುವ ಹೊತ್ತಿನಲ್ಲಿ ಖುದ್ದು ನಿರ್ದೇಶನ ಮಾಡಿ ಗೆದ್ದ ಸುದೀಪ್ ಮತ್ತೊಮ್ಮೆ ಅಭಿಯನ ಚಾತುರ್ಯ ಸಾಬೀತು ಮಾಡಿದರು.

ಆ ನಂತರದ ದಿನಗಳಲ್ಲಿ ಅವರು ಯಶಸ್ಸಿನ ಗ್ರಾಫ್ ನೋಡಿದರೆ ಕಣ್ಣಿಗೆ ಕಾಣುವ ಚಿತ್ರಗಳು ವೀರ ಮದಕರಿ, ಕೆಂಪೇಗೌಡ, ಮುಸ್ಸಂಜೆ ಮಾತು, ವಿಷ್ಣುವರ್ಧನ, ಮಾಣಿಕ್ಯ, ರನ್ನ, ಕೋಟಿಗೊಬ್ಬ 2.

ಪರಭಾಷೆಯಲ್ಲಿ ಕನ್ನಡ ಬಾವುಟ: ಸುದೀಪ್ ಒಳ್ಳೆಯ ನಟನಾಗಿ ಗುರುತಿಸಿಕೊಂಡರು. ಪರಭಾಷೆಯ ನಿರ್ದೇಶಕರು ಚಿತ್ರ ಮಾಡುವಾಗ ನಿರ್ದಿಷ್ಟ ಪಾತ್ರವೊಂದನ್ನು ಸುದೀಪೇ ಮಾಡಬೇಕು ಎಂದು ಬಯಸುತ್ತಾರೆ. ದುಷ್ಟನಿಂದ ಸಾಯುವ ಪ್ರೇಮಿ ನೊಣವಾಗಿ ಮರುಜನ್ಮ ಪಡೆದು, ಸೇಡು ತೀರಿಸಿಕೊಳ್ಳುವ ಕಥೆ ಇರುವ ತೆಲುಗಿನ ಈಗ ಸಿನಿಮಾ ಸುದೀಪ್ ಅದ್ಭುತ ನಟನೆಗೆ ಸಾಕ್ಷಿ. ‘ಚಿತ್ರದ ಕಥೆ ಮಾಡಿದ ನಂತರ ಈ ಪಾತ್ರವನ್ನು ಸುದೀಪ್ ಮಾತ್ರ ಮಾಡಬಲ್ಲರು, ಅವರೇ ಮಾಡಬೇಕು ಎಂದು ಮನಸ್ಸಿನಲ್ಲಿ ಫಿಕ್ಸ್ ಆಗಿದ್ದೆ‘ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದರು.

ಅನ್ಯಭಾಷೆ ಚಿತ್ರಗಳಲ್ಲಿ ಸುದೀಪ್ ಪಯಣವೂ ಕುತೂಹಲಕಾರಿಯಾಗಿದೆ. ಟಾಲಿವುಡ್ ಹಾಗೂ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ‘ಫೂಂಕ್’ ಹಿಂದಿ ಚಿತ್ರದಲ್ಲಿ ಸುದೀಪ್ ನಟಿಸಿದ್ದರು. ಆ ನಂತರ ‘ಫೂಂಕ್ 2’ ಚಿತ್ರದಲ್ಲಿಯೂ ನಟಿಸಿ ಶಹಬ್ಬಾಸ್‌ ಅನಿಸಿಕೊಂಡರು. ಆಲ್‌ ಇಂಡಿಯಾ ಕಟೌಟ್‌ ಅನಿಸಿಕೊಳ್ಳಲು ಇದು ಭದ್ರ ಬುನಾದಿಯಾಯಿತು.

ಮಾಧ್ಯಮಗಳ ಒಳಸುಳಿಗಳ ಕಥೆ ಇರುವ ರಣ್ ಚಿತ್ರದಲ್ಲಿನ ಸುದೀಪ್ ಅಭಿಯನಕ್ಕೆ ಬಾಲಿವುಡ್ ಮಂದಿ ಭೇಷ್ ಎಂದರು. ಈ ಚಿತ್ರದಲ್ಲಿ ಸುದೀಪ್ ನಟಿಸಿದ್ದು ಬಿಗ್‌ ಬಿ ಅಮಿತಾಬ್ ಬಚ್ಚನ್‌ ಎದುರು. ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಅವರೊಂದಿಗಿನ ಮುಖಾಮುಖಿ ಸನ್ನಿವೇಶಗಳಲ್ಲಿ ಸುದೀಪ್ ಅಭಿಯನವನ್ನು ಕೊಂಡಾಡದ ಸಿನಿಪ್ರಿಯರಿಲ್ಲ. ಅವರ ಧ್ವನಿ ಬಗ್ಗೆಯೂ (ಬೇಸ್‌ ವಾಯ್ಸ್) ಭಾರಿ ಪ್ರಶಂಸೆ ವ್ಯಕ್ತವಾಯಿತು.

ತೆಲುಗಿನ ರಕ್ತ ಚರಿತ್ರೆ, ಬಾಹುಬಲಿ, ಸೈರಾನರಸಿಂಹ ರೆಡ್ಡಿ, ತಮಿಳಿನ ಪುಲಿ, ಮುಡಿಂಜ ಇವನ್‌ಪುಡಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಲಿ ಚಿತ್ರದಲ್ಲಿ ದಳಪತಿ ವಿಜಯ್ ಎದುರು ವಿಲನ್ ಪಾತ್ರ ಅವರದ್ದು. ಸೈರಾನರಸಿಂಹ ರೆಡ್ಡಿ ಚಿತ್ರದಲ್ಲಿ ಅವುಕ ರಾಜು ಎಂಬ ಪಾತ್ರ ಸುದೀಪ್‌ರದ್ದು. ’ಅವುಕ ರಾಜು ಪಾತ್ರದ ಬಗ್ಗೆ ಕೇಳಿದೊಡನೆ ನನಗೆ ನೆನಪಾಗಿದ್ದು ಸುದೀಪ್‘ ಎಂದು ಆ ಚಿತ್ರದ ನಟ ಚಿರಂಜೀವಿ ಹೇಳಿದ್ದರು. ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ದಬಾಂಗ್ 3 ಚಿತ್ರದಲ್ಲಿಯೂ ವಿಲನ್ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿನ ವಿಕ್ಷಿಪ್ತ ಪ್ರೇಮಿಯ ಪಾತ್ರಕ್ಕಾಗಿ ಕಿಚ್ಚನಿಗೆ ಪ್ರಶಂಸೆಯ ಸುರಿಮಳೆಯಾಯಿತು. ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಸೋಹೆಲ್ ಖಾನ್ ಅವರು ₹ 35 ಲಕ್ಷ ಬೆಲೆ ಬಾಳುವ ಕಾರನ್ನು ಖುದ್ದು ಬೆಂಗಳೂರಿಗೆ ತಂದು ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದರು!

ಹಿಂದಿ, ತೆಲುಗು, ತಮಿಳಿನಲ್ಲಿಯೂ ಭಾರಿ ಬೇಡಿಕೆ ಇರುವ ನಟರಾಗಿದ್ದಾರೆ. ಮಲಯಾಳಂ ಚಿತ್ರರಂಗದಿಂದಲೂ ಹಲವು ಕರೆ ಬಂದರೂ ಭಾಷೆಯ ಕಾರಣಕ್ಕೆ ಹೋಗಿಲ್ಲ ಎನ್ನಲಾಗಿದೆ. ಹಿಂದಿ, ತೆಲುಗು ಹಾಗೂ ತಮಿಳಿನ ಚಿತ್ರಗಳಿಗೆ ಅವರೇ ಡಬ್ಬಿಂಗ್ ಮಾಡಿದ್ದಾರೆ. ಆದರೆ, ಮಲಯಾಳಂ ಭಾಷೆ ಉಚ್ಚಾರಣೆ ಕಠಿಣ ಎಂಬ ಕಾರಣಕ್ಕೆ ಅವರು ಒಪ್ಪಿಕೊಂಡಿಲ್ಲ. ಈ ವಿಷಯವನ್ನು ಸುದೀಪ್ ಅವರೇ ಸಂದರ್ಶನಗಳಲ್ಲಿ ಹೇಳಿದ್ದಾರೆ. ‘ಪೈಲ್ವಾನ್’ ಪ್ಯಾನ್ ಇಂಡಿಯಾ ಸಿನಿಮಾದ ಮೂಲಕ ಸಹ ಗಮನ ಸೆಳೆದಿದ್ದಾರೆ.

ಪ್ರಶಸ್ತಿಗಳು: ಕರ್ನಾಟಕ ಸರ್ಕಾರ ನೀಡುವ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಸುದೀಪ್ ಭಾಜನರಾಗಿದ್ದಾರೆ. ನಂದಿ ಚಿತ್ರದ ಅಭಿಯನಕ್ಕಾಗಿ ರಾಜ್ಯ ಪ್ರಶಸ್ತಿ. ಹುಚ್ಚ, ಸ್ವಾತಿಮುತ್ತು, ಈಗ ಚಿತ್ರಗಳಲ್ಲಿನ ಅಭಿಯನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ. ದಾದಾ ಸಾಹೇಬ್‌ ಫಾಲ್ಕೆ ಫಿಲ್ಮ್‌ ಫೆಸ್ಟಿವಲ್ ಪ್ರಶಸ್ತಿ, ಈಗ ಚಿತ್ರಕ್ಕೆ ಸೈಮಾ ಪ್ರಶಸ್ತಿ, ಅದೇ ಚಿತ್ರದ ಅಭಿಯನಕ್ಕೆ ಆಂಧ್ರ ಸರ್ಕಾರದ ನಂದಿ ಪ್ರಶಸ್ತಿ ಬಂದಿದೆ.

ಕನ್ನಡ ರಕ್ಷಣಾ ವೇದಿಕೆ ಸುದೀಪ್ ಚಿತ್ರರಂಗದ ಸೇವೆ ಗುರುತಿಸಿ ‘ಅಭಿನಯ ಚಕ್ರವರ್ತಿ’ ಬಿರುದು ನೀಡಿದೆ. ಪೈಲ್ವಾನ್ ಪ್ಯಾನ್ ಇಂಡಿಯಾ ಚಿತ್ರದ ನಂತರ ಅವರು ‘ಬಾದ್‌ಶಾ ಕಿಚ್ಚ ಸುದೀಪ್’ ಆಗಿದ್ದಾರೆ.

ಬಹುಮುಖ ಪ್ರತಿಭೆ: ‘ಸದಾ ಕೆಲಸ ಕೆಲಸ, ಶೂಟಿಂಗ್’ ಸುದೀಪ್‌ ಬಗ್ಗೆ ತಂದೆ ಸರೋವರ್ ಸಂಜೀವ್ ಮಾತುಗಳಿವು. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಸುದೀಪ್. ಕಿರುತೆರೆ ನಿರೂಪಣೆ, ಸೆಲೆಬ್ರೆಟಿ ಕ್ರಿಕೆಟ್ ಟೀಂನ ನಾಯಕತ್ವ, ಅತಿಥಿ ಪಾತ್ರಗಳಲ್ಲಿ ಅಭಿನಯ. ಹಿನ್ನೆಲೆ ಗಾಯನ, ಸಿನಿಮಾ ನಿರ್ಮಾಣ ಹೀಗೆ ಹಲವು ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ತೊಡಗಿಸಿಕೊಳ್ಳುವುದು ಸುದೀಪ್ ವಿಶೇಷತೆ. ಹೊಸತನದ ನಿರೂಪಣೆಯಿಂದಾಗಿ ಕನ್ನಡದ ಬಿಗ್‌ಬಾಸ್‌ಗೆ ಹೊಸ ಪ್ರೇಕ್ಷಕರನ್ನ ಸೃಷ್ಟಿಸಿದ ಕೀರ್ತಿ ಸಹ ಅವರದ್ದು. ಜಸ್ಟ್ ಮಾತ್‌ ಮಾತಲ್ಲಿ ಚಿತ್ರಕ್ಕೆ ಚಿತ್ರಕತೆಯನ್ನೂ ಬರೆದಿದ್ದಾರೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ನಿರೂಪಣೆಯೂ ಇವರದ್ದೆ.

ಹೊಸಬರಿಗೆ ಪ್ರೋತ್ಸಾಹ: ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಬಯಸುವ ಹೊಸಬರನ್ನು ಸದಾ ಪ್ರೋತ್ಸಾಹಿಸಿದ್ದಾರೆ ಸುದೀಪ್. ಚಿತ್ರದ ಶೂಟಿಂಗ್‌ಗೆ ಚಾಲನೆ ನೀಡುವುದರಿಂದ ಹಿಡಿದು, ಅತಿಥಿ ಪಾತ್ರಗಳಲ್ಲಿ ಅಭಿನಯಿಸುವ ವರೆಗೂ ಒಂದಿಲ್ಲೊಂದು ರೀತಿ ಬೆನ್ನುಲುಬಾಗಿ ನಿಲ್ಲುತ್ತಾರೆ. ಶೂಟಿಂಗ್‌ಗಾಗಿ ಹೊರ ರಾಜ್ಯ, ದೇಶದಲ್ಲಿದ್ದರೂ ಹೊಸಬರ ಒಳ್ಳೆಯ ಚಿತ್ರದ ಬಗ್ಗೆ ಟ್ವೀಟ್ ಮಾಡಿ ನೋಡುವಂತೆ ಅಭಿಮಾನಿಗಳಿಗೆ ಮನವಿ ಮಾಡುತ್ತಾರೆ.

ನಿರ್ದೇಶಕ, ನಿರ್ಮಾಪಕ: ಸ್ಪರ್ಶ ಮತ್ತು ಸ್ವಾತಿಮುತ್ತು ಚಿತ್ರವನ್ನು ಸುದೀಪ್ ತಂದೆ ಸಂಜೀವ್ ಅವರು ನಿರ್ಮಾಣ ಮಾಡಿದ್ದಾರೆ. ನಂತರ ಕಿಚ್ಚ ಕ್ರಿಯೇಷನ್ಸ್ ಹೆಸರಿನ ಸ್ವಂತ ಬ್ಯಾನರ್ ಆರಂಭಿಸಿದ ಸುದೀಪ್ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಮೈ ಆಟೊಗ್ರಾಫ್‌, ನಂ 73 ಶಾಂತಿ ನಿವಾಸ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಜಿಗರ್‌ಥಂಡಾ ಸಹ ಕಿಚ್ಚ ಕ್ರಿಯೇಷನ್ಸ್‌ನಲ್ಲಿ ನಿರ್ಮಾಣವಾದ ಚಿತ್ರ. ವಾರಸ್ದಾರ ಧಾರವಾಹಿಯನ್ನು ಸಹ ನಿರ್ಮಿಸಿದ್ದರು. ಕೆಂಪೇಗೌಡ, ವೀರ ಮದಕರಿ, ಜಸ್ಟ್‌ ಮಾತ್‌ಮಾತಲ್ಲಿ ಚಿತ್ರಕ್ಕೆ ಸುದೀಪ್ ನಿರ್ದೇಶನವಿದೆ.

ಗಾಯಕ ಸುದೀಪ್: ಸುದೀಪ್ ಗಾಯಕರಾಗಿಯೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಚಂದು ಚಿತ್ರದ  ‘ಸೊಂಟದ ವಿಷ್ಯ ಬೇಡಮ್ಮ ಶೀಷ್ಯ‘ದಿಂದ ಗಾಯಕರಾದ ಅವರು ಹತ್ತಾರು ಚಿತ್ರಗಳಲ್ಲಿ ಹಾಡಿದ್ದಾರೆ. ರಂಗ ಎಸ್‌ಎಸ್‌ಎಲ್‌ಸಿಯ ಡವ್‌ ಡವ್‌ ದುನಿಯಾ, ಭೂಮಿ ಯಾಕೆ ತಿರುಗುತ್ತೈತೆ, ವೀರ ಮದಕರಿಯ ಹಳೇ ರೇಡಿಯೋ, ಕೋಟಿಗೊಬ್ಬ2ನ ಹೂನ ಹೂನ ಪ್ರಮಖ ಗೀತೆಗಳು.

ಸಮಾಜ ಸೇವೆಗೂ ಸೈ: ನಟನೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಸುದೀಪ್ ಅವರು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ ಮೂಲಕ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವುದರಿಂದ ಸತತವಾಗಿ 25 ದಿನಗಳ ಕಾಲ ಸಾಮಾಜಿಕ ಕೆಲಸಕ್ಕೆ ನೆರವು ನೀಡಿದ್ದಾರೆ.

ಗೋವಾದಲ್ಲಿ ಇತ್ತೀಚೆಗೆ ನಡೆದ 51ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸುದೀಪ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಇದೊಂದು ದೊಡ್ಡ ಗೌರವ ಎಂದು ಅವರು ಹೇಳಿದ್ದಾರೆ.


ಸುದೀಪ್ ಜನ್ಮ ದಿನಕ್ಕೆ ಬಿಡುಗಡೆ ಮಾಡಿದ್ದ ಕಾಮನ್ ಡಿಪಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು