ಬುಧವಾರ, ಫೆಬ್ರವರಿ 1, 2023
27 °C

ತೆರೆ ಮೇಲೆ ಸಿದ್ದರಾಮಯ್ಯ ಜೀವನಗಾಥೆ: ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು, ಸಾಧಕರ ಬಯೋಪಿಕ್‌ (ಜೀವನಗಾಥೆ) ತೆರೆ ಮೇಲೆ ಬಂದು ಕಮಾಲ್ ಮಾಡಿವೆ. ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವನಗಾಥೆ ಯನ್ನು ತೆರೆಗೆ ತರಲು ಇಬ್ಬರು ಸದ್ದಿಲದೆ ಯತ್ನಿಸುತ್ತಿದ್ದಾರೆ. ಈ ಪೈಕಿ, ಒಬ್ಬರು ಸಿದ್ದರಾಮಯ್ಯ ಪಾತ್ರವನ್ನು ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮೂಲಕ ತೆರೆಗೆ ತರಲು ಮುಂದಾಗಿದ್ದಾರೆ.

ಕನಕಗಿರಿ ಮಾಜಿ ಶಾಸಕ ಶಿವರಾಜ ತಂಗಡಗಿ ಮತ್ತು ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮೈಸೂರಿನ ನಾಗರಾಜು ಎಂಬುವರು ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಬಯೋಪಿಕ್ ಮಾಡಲು ಅನುಮತಿ ನೀಡಬೇಕೆಂದು ಚರ್ಚೆ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.

ಗಂಗಾವತಿಯ ಸತ್ಯರತ್ನ‌ ಎಂಬ ಹೊಸ ನಿರ್ದೇಶಕನ ಜೊತೆ ಸಿದ್ದರಾಮಯ್ಯ ಅವರನ್ನು ತಂಗಡಗಿ ಭೇಟಿ ಮಾಡಿದ್ದರು. ವಿಜಯ್ ಸೇತುಪತಿ ಮೂಲಕ ಸಿದ್ದರಾಮಯ್ಯ ಅವರ ಪಾತ್ರ ಮಾಡಿಸಲು ಬಯಸಿರುವ ಬಗ್ಗೆಯೂ ಅವರು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ನಾಗರಾಜು ಕೂಡಾ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಗಮನಿಸಿದ ಬಳಿಕ ಬಯೋಪಿಕ್‌ ಬಗ್ಗೆ ತಿಳಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ನನ್ನ ಬಯೋಪಿಕ್‌ನ ಸಿನಿಮಾ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದವರು ಬಂದಿದ್ದರು. ನಾನು ಚಿತ್ರದಲ್ಲಿ ನಟಿಸಲ್ಲ, ನನಗೆ ನಟನೆ ಬರಲ್ಲ’ ಎಂದಿದ್ದಾರೆ.

ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ತಂಗಡಗಿ, ‘ಸಿದ್ದರಾಮಯ್ಯ ಅವರ ಬಯೋಪಿಕ್‌ ಅನ್ನು ತೆರೆ ಮೇಲೆ ತರಬೇಕೆಂಬ ಆಸೆಯಿಂದ ನನ್ನ ಕ್ಷೇತ್ರದ ಕೆಲವು ಯುವಕರು ನನ್ನನ್ನು ಸಂಪರ್ಕಿಸಿದ್ದರು.‌ ಈ ಉದ್ದೇಶದಿಂದ ಅವರು ‘ಎಂ.ಎಸ್‌ ಕ್ರಿಯೇಷನ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನೂ ನೋಂದಾಯಿಸಿಕೊಂಡಿ ದ್ದಾರೆ. ನಿರ್ದೇಶಕ ಸತ್ಯರತ್ನ ಎಂಬ ಹೊಸಬ. ನಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ಅವರು (ಸಿದ್ದರಾಮಯ್ಯ) ಚುನಾವಣೆಯನ್ನು ಪ್ರಸ್ತಾಪಿಸಿ ಸಮಯ ಕೇಳಿದ್ದಾರೆ. ಆದರೆ, ಅವರ ಅನುಮತಿ ಪಡೆಯಲು ಡಿ. 6, 7 ಅಥವಾ 8ರಂದು ಮತ್ತೊಮ್ಮೆ ಭೇಟಿ ಮಾಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು