ನಾಸಿಕ್(ಮುಂಬೈ): ಹಿಂದಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸಿದ್ದ ನಟ ವಿಕಾಸ್ ಸೇಥಿ(48) ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
‘ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ನಾಸಿಕ್‌ಗೆ ಬಂದಿದ್ದೆವು. ನನ್ನ ತಾಯಿ ಮನೆಗೆ ತಲುಪುತ್ತಿದ್ದಂತೆ ವಿಕಾಸ್ ಅವರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ತೆರಳಲು ಅವರು ನಿರಾಕರಿಸಿದ್ದು, ವೈದ್ಯರನ್ನು ಮನೆಗೆ ಕರೆದು ಚಿಕಿತ್ಸೆ ನೀಡಲಾಗಿತ್ತು’ ಎಂದು ಪತ್ನಿ ಜಾನ್ವಿ ತಿಳಿಸಿದ್ದಾರೆ.
‘ಮುಂಜಾನೆ 6 ಗಂಟೆಗೆ ವಿಕಾಸ್ ಅವರನ್ನು ಎಬ್ಬಿಸಲು ಹೋದಾಗ ಅವರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದು, ಹೃದಯ ಸ್ತಂಭನದಿಂದ ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದು ಅವರು ಹೇಳಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮುಂಬೈನ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಜಾನ್ವಿ ತಿಳಿಸಿದರು.
‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’, ‘ಕಹಿ ತೋ ಹೋಗಾ‘ ಮುಂತಾದ ಜನಪ್ರಿಯ ಧಾರವಾಹಿಗಳಲ್ಲಿ ವಿಕಾಸ್ ಸೇಥಿ ನಟಿಸಿದ್ದರು. ಕರೀನಾ ಕಪೂರ್ ನಟನೆಯ ‘ಕಭಿ ಖುಷಿ ಕಭಿ ಗಮ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮನೆ ಮಾತಾಗಿದ್ದರು.