ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ವಿಷ್ಣುವರ್ಧನ್ ಪ್ರತಿಮೆ ಧ್ವಂಸ; ಅಭಿಮಾನಿಗಳಿಂದ ಪ್ರತಿಭಟನೆ

ಕಿಡಿಗೇಡಿಗಳ ಕೃತ್ಯ
Last Updated 26 ಡಿಸೆಂಬರ್ 2020, 16:11 IST
ಅಕ್ಷರ ಗಾತ್ರ

ಬೆಂಗಳೂರು: ಮಾಗಡಿ ರಸ್ತೆಯ ಟೋಲ್‌ಗೇಟ್‌ ಬಳಿ ಇದ್ದ ನಟ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಶುಕ್ರವಾರ ತಡರಾತ್ರಿ ಧ್ವಂಸ ಮಾಡಿದ್ದಾರೆ. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಮೆ ಧ್ವಂಸ ವಿರೋಧಿಸಿ ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ವಿಷ್ಣುವರ್ಧನ್‌ ಅಭಿಮಾನಿಗಳು, ಪ್ರತಿಮೆಯನ್ನು ಅದೇ ಜಾಗದಲ್ಲಿಮರುಸ್ಥಾಪಿಸುವಂತೆ ಪಟ್ಟು ಹಿಡಿದರು.

‘ಒಂದೂವರೆ ವರ್ಷದ ಹಿಂದೆ ಪ್ರತಿಮೆ ಸ್ಥಾಪಿಸಲಾಗಿತ್ತು. ಕಿಡಿಗೇಡಿಗಳು ಈ ಹಿಂದೆಯೂ ಒಮ್ಮೆ ಪ್ರತಿಮೆ ತೆರವುಗೊಳಿಸಿದ್ದರು. ವಿಷ್ಣುವರ್ಧನ್ ವಿಚಾರದಲ್ಲಿ ಪದೇಪದೇ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ,‘ ಈ ಜಾಗದಲ್ಲಿ ಬಾಲ ಗಂಗಾಧರ ಸ್ವಾಮೀಜಿ ಪುತ್ಥಳಿ ಸ್ಥಾಪಿಸುವ ಚರ್ಚೆಗಳು ನಡೆದಿದ್ದವು. ಇದರ ನಡುವೆಯೇ ಅಪ್ಪಾಜಿಯವರ ಪ್ರತಿಮೆ ಧ್ವಂಸ ಮಾಡಿರುವುದು ತಪ್ಪು. ಕೃತ್ಯ ಎಸಗಿದವರನ್ನು ಕಠಿಣವಾಗಿ ಶಿಕ್ಷಿಸ ಬೇಕು’ ಎಂದರು.

‘ಈ ವಿಚಾರದಲ್ಲಿ ದ್ವೇಷ ಸಾಧಿಸುವುದು ಬೇಡ. ಪ್ರೀತಿಯಿಂದ ಎಲ್ಲರನ್ನೂ ಗೆಲ್ಲೋಣ. ಘಟನೆಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಾರದು’ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದರು.

‘ಈ ವೃತ್ತಕ್ಕೆಹಿಂದಿನಿಂದಲೇ ಬಾಲಗಂಗಾಧರ ಸ್ವಾಮೀಜಿ ಅವರ ಹೆಸರಿದೆ. ವಿಷ್ಣುವರ್ಧನ್ ಅವರ ಮೇಲೆ ನನಗೂ ಅಭಿಮಾನವಿದೆ. ಅವರ ಪ್ರತಿಮೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಕಾನೂನು ಪ್ರಕಾರವಾಗಿ ಪ್ರತಿಮೆಯನ್ನು ಸ್ಥಳಾಂತರಿಸಲಾಗುವುದು’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

‘ವಿಷ್ಣು ಸರ್ ಪುತ್ಥಳಿಯನ್ನು ಧ್ವಂಸ ಮಾಡಿರುವ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು’ ಎಂದು ನಟ ದರ್ಶನ್‌ ಟ್ವೀಟ್‌ ಮಾಡಿದ್ದಾರೆ.

‘ಇದೇ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಿ’
‘ಪ್ರತಿಮೆ ಸ್ಥಳಾಂತರಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ. ಅದನ್ನು ಗೌರವಿಸಿ, ಇದೇ ವೃತ್ತದಲ್ಲಿ ಬೇರೆಡೆ ಪ್ರತಿಮೆ ಸ್ಥಾಪಿಸಲು ಒಪ್ಪಿದ್ದೇವೆ. ಮಾಗಡಿ ರಸ್ತೆಯಿಂದ ಪ್ರತಿಮೆ ಸ್ಥಳಾಂತರಿಸಲು ಬಿಡುವುದಿಲ್ಲ. ಪ್ರತಿಮೆ ವಿರೂಪಗೊಳಿಸಿರುವಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು’ ಎಂದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಆಗ್ರಹಿಸಿದರು.

ಮೈಸೂರಿನಲ್ಲಿ ಪ್ರತಿಭಟನೆ
ಮೈಸೂರು:
ನಟ ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಖಂಡಿಸಿ, ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಕಾರ್ಯಕರ್ತರು ಇಲ್ಲಿನ ಜಗನ್ಮೋಹನ ಅರಮನೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಕನ್ನಡ ಕ್ರಾಂತಿದಳ, ವಿಷ್ಣು ಅಭಿಮಾನಿಗಳ ಬಳಗ ಮತ್ತು ಕನ್ನಡ ಸೇನೆಯ ಕಾರ್ಯಕರ್ತರು ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT