ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಆ್ಯಕ್ಟಿಂಗ್‌ ಮಾಡ್ತಾರಂತೆ ನಟಿ ರಂಭಾ

Last Updated 28 ಆಗಸ್ಟ್ 2020, 11:21 IST
ಅಕ್ಷರ ಗಾತ್ರ

ಬಹುಭಾಷಾ ನಟಿ ರಂಭಾ ಚಂದನವನದ ಸಿನಿಪ್ರಿಯರಿಗೆ ಚಿರಪರಿಚಿತ. ಆಕೆ ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ ‘ಸರ್ವರ್‌ ಸೋಮಣ್ಣ’. ಇದು ತೆರೆಕಂಡಿದ್ದು 1993ರಲ್ಲಿ. ಇದಾದ ಬಳಿಕ ಆಕೆ ‘ಕೆಂಪಯ್ಯ ಐಪಿಎಸ್’, ‘ಓ ಪ್ರೇಮವೇ’, ‘ಪಾಂಚಾಲಿ’, ‘ಭಾವ ಭಾಮೈದ’, ‘ಸಾಹುಕಾರ’, ‘ಪಾಂಡು ರಂಗ ವಿಠಲ’, ‘ಗಂಡುಗಲಿ ಕುಮಾರರಾಮ’ ಚಿತ್ರಗಳಲ್ಲಿ ನಟಿಸಿದರು.

ಕನ್ನಡದಲ್ಲಿ ಆಕೆ ಕೊನೆಯದಾಗಿ ನಟಿಸಿದ ಚಿತ್ರ ‘ಅನಾಥರು’. ಇದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಇದಾದ ಬಳಿಕ ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದರೂ ಕನ್ನಡದಲ್ಲಿ ಮಾತ್ರ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. 2010ರಲ್ಲಿ ಕೆನಡಾ ಮೂಲದ ಉದ್ಯಮಿಯ ಕೈಹಿಡಿದ ಬಳಿಕ ಆಕೆ ಬೆಳ್ಳಿತೆರೆಯಿಂದ ದೂರವೇ ಉಳಿದರು. ಈಗ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರ ಇದ್ದಾನೆ.

ರಂಭಾ ಅವರ ಮೂಲ ಆಂಧ್ರಪ್ರದೇಶದ ವಿಜಯವಾಡ. ತನ್ನ ಗ್ಲಾಮರ್‌ ಲುಕ್‌ನಿಂದಲೇ ಚಿತ್ರರಸಿಕರ ಮನಸ್ಸು ಗೆದ್ದಿದ್ದ ಆಕೆ ಕೊನೆ ಕೊನೆಗೆ ಐಟಂ ಸಾಂಗ್‌ಗಳಲ್ಲೂ ಮಿಂಚಿದ್ದು ಉಂಟು. ಜೂನಿಯರ್‌ ಎನ್‌ಟಿಆರ್‌ ನಟನೆಯ ‘ಯಮದೊಂಗ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕೆ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದಾರೆ. ಈಗ ಆಕೆ ನ್ಯೂಯಾರ್ಕ್‌ ವಾಸಿ.

ಆಕೆ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳ, ಭೋಜಪುರಿ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂಗ್ಲಿಷ್‌ ಸಿನಿಮಾವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಆಕೆಗೆ ಈಗ 44 ವರ್ಷ. ಮತ್ತೆ ಬಣ್ಣದ ಲೋಕದತ್ತ ಮರಳಲು ಆಕೆ ಚಿತ್ತ ಹರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಕೇಳಿಬರುತ್ತಿದೆ.

ರಂಭಾ ವೃತ್ತಿಬದುಕಿನಲ್ಲಿ ಎರಡನೇ ಇನ್ನಿಂಗ್ಸ್‌ಗೆ ಸಜ್ಜಾಗುತ್ತಿರುವುದು ಖಾತ್ರಿಯಾಗಿದೆ. ಈ ನಿಟ್ಟಿನಲ್ಲಿ ಕೆಲವು ಪ್ರೊಡಕ್ಷನ್ಸ್‌ ಹೌಸ್‌ಗಳ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದಾರಂತೆ. ಆದರೆ, ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ. ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಆಕೆಯ ಆಸೆ. ಆದರೆ, ಆಕೆಯ ಕಾಲದಲ್ಲಿ ಪರದೆ ಮೇಲೆ ಮಿಂಚಿದ್ದ ಹೀರೊಯಿನ್‌ಗಳು ಈಗ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ, ರಂಭಾ ಕೂಡ ತಾಯಿ ಪಾತ್ರಕ್ಕಷ್ಟೇ ಸೀಮಿತಗೊಳ್ಳಬಹುದು ಎಂಬುದು ಟಾಲಿವುಡ್‌ ಅಂಗಳದಲ್ಲಿನ ಚರ್ಚೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT