ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಪರಿಸರ ನೀತಿಗೆ ನಟಿ ರಮ್ಯಾ ಆಕ್ಷೇಪವೇನು?

Last Updated 11 ಆಗಸ್ಟ್ 2020, 4:41 IST
ಅಕ್ಷರ ಗಾತ್ರ

ನಟಿ ರಮ್ಯಾ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಸೆಲ್‌ನ ಮುಖ್ಯಸ್ಥೆಯಾಗಿದ್ದು ಎಲ್ಲರಿಗೂ ಗೊತ್ತು. ಈ ಹುದ್ದೆಯಿಂದ ಕೆಳಗಿಳಿದ ಬಳಿಕ ಹಲವು ತಿಂಗಳುಗಳ ಕಾಲ ಅವರು ಸಾಮಾಜಿಕ ಜಾಲತಾಣದಿಂದ ನಾಪತ್ತೆಯಾಗಿದ್ದರು. ಇತ್ತೀಚೆಗೆ ಅವರು ಸೆಲ್ಫಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸಕ್ರಿಯರಾಗಿದ್ದಾರೆ. ತಮ್ಮ ಖಾತೆಯಲ್ಲಿ ತರೇಹವಾರಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಮಯ ಸಿಕ್ಕಿದಾಗಲೆಲ್ಲಾ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸುತ್ತಾರೆ.

ಇತ್ತೀಚೆಗೆ ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಿಸುವ ವೇಳೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ ವೈರಲ್‌ ಆಗಿತ್ತು. ‘ಸಂತಸವು ಒಗ್ಗಟ್ಟು, ಏಕತೆ, ಜೊತೆಜೊತೆಗೆ ಬದುಕುವುದರಲ್ಲಿದೆ. ಬಾಹ್ಯವಾದುದನ್ನು ತಿರಸ್ಕರಿಸಿ. ನಿಮ್ಮೊಳಗೆ ಇಣುಕಿ ನೋಡಿ. ಅಲ್ಲಿ ನಿಮ್ಮ ನಿಜವಾದ ದೇವರಿರುತ್ತಾನೆ ಮತ್ತು ನಿಜವಾಗಿ ನೀವಿರುತ್ತೀರಿ’ ಎಂದು ಬರೆದಿದ್ದರು.

ಈಗ ಮತ್ತೆ ಅವರು ಕೇಂದ್ರದ ವಿರುದ್ಧ ವಾಕ್ಸಮರಕ್ಕೆ ಇಳಿದಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ 2020’ ಅನ್ನು ಪ್ರಕಟಿಸಿದೆ. ಇದು ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ 2006ರ ಬದಲಾಗಿ ಹೊರಡಿಸಿರುವ ಅಧಿಸೂಚನೆಯಾಗಿದೆ. ರಮ್ಯಾ ಆಕ್ಷೇಪ ಎತ್ತಿರುವುದು ಇದರ ಬಗ್ಗೆಯೇ.

‘ಸರ್ಕಾರ ಹೊರಡಿಸಿರುವ ಅಧಿಸೂಚನೆಯು ಪರಿಸರ ಸಂರಕ್ಷಣಾ ನಿಯಮಾವಳಿಗಳನ್ನು ಕೃಶಗೊಳಿಸಲಿದೆ. ಸಮುದಾಯದ ಮೇಲೂ ಪರಿಣಾಮ ಬೀರಲಿದೆ. ಇದು ಸಂಪೂರ್ಣ ಕೈಗಾರಿಕೆಗಳ ಪರವಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಹೊಂದಾಣಿಕೆ ಕಾಯ್ದುಕೊಳ್ಳುವ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಹಾಗಾಗಿ, ಈ ಅಧಿಸೂಚನೆಯನ್ನು ವಾಪಸ್‌ ಪಡೆಯಬೇಕು’ ಎಂಬುದು ಅವರ ಆಗ್ರಹ.

ಈಗಾಗಲೇ, ದೇಶದಾದ್ಯಂತ ಹಲವು ಪರಿಸರವಾದಿಗಳು, ನಟ, ನಟಿಯರು ಈ ಕರಡು ಅಧಿಸೂಚನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಕೂಡಲೇ, ಕೇಂದ್ರ ಸರ್ಕಾರ ಇದನ್ನು ವಾಪಸ್‌ ಪಡೆಯಬೇಕು ಎಂದು ಸಹಿ ಸಂಗ್ರಹ ಅಭಿಯಾನವನ್ನೂ ಆರಂಭಿಸಿದ್ದಾರೆ. ಈ ಸಂಬಂಧ ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಅವರ ಹಿನ್ನೆಲೆ ಧ್ವನಿ ಇರುವ ಪರಿಸರ ಸಂರಕ್ಷಣೆ ಕುರಿತ ವಿಡಿಯೊವೊಂದನ್ನು ಸಿದ್ಧಪಡಿಸಲಾಗಿದೆ. ಇದರ ಲಿಂಕ್‌ ಅನ್ನು ರಮ್ಯಾ ಕೂಡ ಹಂಚಿಕೊಂಡಿದ್ದಾರೆ. ‘ಭೂಮಿ ತಾಯಿಯ ಬಗೆಗಿನ ಈ ವಿಡಿಯೊ ವೀಕ್ಷಿಸಿ ಅರಿವು ಹೊಂದಬೇಕು. ಜೊತೆಗೆ, ಅಧಿಸೂಚನೆ ವಾಪಸ್‌ ಪಡೆಯಲು ಸಹಿ ಹಾಕಿ’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT