ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ್ಯಾ ಕಂಡ ಕನಸು

Last Updated 4 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‌ಗಟ್ಟಿಮೇಳದ ‘ಸಾಹಿತ್ಯ’ ಪಾತ್ರ ಧಾರಾವಾಹಿಗೆ ಕೆಲವೊಂದು ಪ್ರಮುಖ ತಿರುವುಗಳನ್ನು ನೀಡಿತ್ತು. ಸುಮಾರು 50 ಎಪಿಸೋಡುಗಳಷ್ಟು ಪ್ರಸಾರವಾದ ಸಾಹಿತ್ಯ ಪಾತ್ರಕ್ಕೆ ಜನ ಇಂದಿಗೂ ಬೈಯುತ್ತಿದ್ದಾರೆ. ಸಾಹಿತ್ಯ ಎಂಬ ಖಳನಟಿಯಾಗಿ ಗಟ್ಟಿಮೇಳ ಪ್ರವೇಶಿಸಿ ಹೆಸರಾದವರು ಶರಣ್ಯಾ ಶೆಟ್ಟಿ. ‘ರವಿ ಬೋಪಣ್ಣ’ ಸಿನಿಮಾದ ಸಣ್ಣ ಪಾತ್ರದ ಮೂಲಕ ನಟನೆ ಆರಂಭಿಸಿದ ಶರಣ್ಯಾಗೆ ‘ಗಟ್ಟಿಮೇಳ’ ಮೊದಲ ಧಾರಾವಾಹಿ. ಈ ಧಾರಾವಾಹಿಯಿಂದಲೇ ಸಾಕಷ್ಟು ಹೆಸರು ಗಳಿಸಿರುವ ಇವರ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಇಂತಿಪ್ಪ ಶರಣ್ಯಾ ತಮ್ಮ ಕಿರುತೆರೆ ಹಾಗೂ ಸಿನಿಪಯಣದ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ.

ನಟನೆಯ ನಂಟು: ಶರಣ್ಯಾ ತಂದೆ ಸಿನಿಮಾ ವಿತರಕರಾಗಿದ್ದವರು. ಆ ಕಾರಣಕ್ಕೆ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಪ್ರೀಮಿಯರ್ ಷೋ, ಶೂಟಿಂಗ್‌ಗಳಿಗೆಲ್ಲಾ ಇವರನ್ನೂ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ನಟ, ನಟಿಯರನ್ನೆಲ್ಲಾ ನೋಡುತ್ತಿದ್ದ ಇವರಿಗೆ ತಾನು ಅವರಂತೆ ಆಗಬೇಕು ಎನ್ನಿಸುತ್ತಿತ್ತು. ಇದರೊಂದಿಗೆ ಬಾಲ್ಯದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸದಾ ಮುಂದಿದ್ದರು. ಜೊತೆಗೆ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೂ ಪಳಗಿದವರು. ಮಾಡೆಲಿಂಗ್‌ನಲ್ಲೂ ಪಳಗಿದ್ದ ಇವರಿಗೆ ಸಿನಿಮಾ ನಟಿಯಾಗಬೇಕು ಎಂಬುದು ಬಾಲ್ಯದ ಕನಸು.

ಖ್ಯಾತಿ ತಂದುಕೊಟ್ಟ ನೆಗೆಟಿವ್‌ ಪಾತ್ರ: ಮೊದಲಿನಿಂದಲೂ ಸಿನಿಮಾ ಮಾಡಬೇಕು ಎಂಬ ಕನಸಿಟ್ಟುಕೊಂಡಿದ್ದ ಇವರಿಗೆ ಧಾರಾವಾಹಿ ಅವಕಾಶ ಬಂದಾಗ ತಿರಸ್ಕರಿಸಲು ಸಾಧ್ಯವಾಗಿರಲಿಲ್ಲ. ನೆಗೆಟಿವ್‌ ಪಾತ್ರವಾದರೂ ಹೆಚ್ಚು ತೂಕವಿರುವ ಪಾತ್ರ, ಜೊತೆಗೆ ಚಾಲೆಜಿಂಗ್ ಎನ್ನಿಸಿದ್ದ ಕಾರಣ ನಟಿಸಲು ಒಪ್ಪಿಕೊಳ್ಳುತ್ತಾರೆ. ‘ನೆಗೆಟಿವ್, ಪಾಸಿಟಿವ್ ಎನ್ನುವುದಕ್ಕಿಂತ ಪಾತ್ರಕ್ಕೆ ಎಷ್ಟು ಪ್ರಾಮುಖ್ಯವಿದೆ ಎನ್ನುವುದೂ ಮುಖ್ಯವಾಗುತ್ತದೆ. ಸಿನಿಮಾ ಎಂದರೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು. ಧಾರಾವಾಹಿ ಎಂದರೆ ಮೂರ್ನ್ಕಾಲು ವರ್ಷಗಳ ಕಾಲ ಒಂದೇ ಪಾತ್ರಕ್ಕೆ ಸಿಮೀತವಾಗಿರಬೇಕು ಎಂಬ ಆತಂಕ ನನ್ನಲ್ಲಿತ್ತು. ಆ ಕಾರಣಕ್ಕೆ ನನಗೆ ಸಿನಿಮಾದ ಮೇಲೆ ಹೆಚ್ಚು ಒಲವಿತ್ತು’ ಎನ್ನುತ್ತಾರೆ ಮಲೆನಾಡಿನ ಬೆಡಗಿ.

ಸಾಹಿತ್ಯ ಪಾತ್ರ ತಂದ ತಿರುವು: ‘ನಾನು ಶರಣ್ಯಾ ಎನ್ನುವುದನ್ನೂ ಮರೆತು ಜನ ನನ್ನನ್ನು ಸಾಹಿತ್ಯ ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಹೆಸರು ತಂದಿದೆ ಈ ಪಾತ್ರ. ವೈಯಕ್ತಿಕವಾಗಿ ಹೇಳಬೇಕು ಎಂದರೆ ನಾನು ಮೊದಲಿನಿಂದಲೂ ಹೆಚ್ಚು ಮಾತನಾಡದ ಮುಗ್ಧ ಸ್ವಭಾವದ ಹುಡುಗಿಯಾಗಿದ್ದೆ. ಧಾರಾವಾಹಿ ಮಾಡಿದ ಮೇಲೆ ನನ್ನಲ್ಲಿ ಧೈರ್ಯ ಹೆಚ್ಚಿದೆ. ನೆಗೆಟಿವ್‌ ಪಾತ್ರ ಮಾಡಿದಾಗ ಜನ ಬೈಯ್ಯುತ್ತಾರೆ. ಆದರೆ ಬೈಯುವ ಜೊತೆಗೆ ನಮ್ಮ ನಟನೆಯನ್ನು ಇಷ್ಟಪಡುತ್ತಾರೆ. ಅದು ನನಗೆ ಖುಷಿಯ ವಿಚಾರ. ವಿಲನ್‌ಗೂ ಇಷ್ಟೊಂದು ಪ್ರೀತಿ ಸಿಗುತ್ತಾ ಎಂದು ನೆನಪಿಸಿಕೊಂಡು ಖುಷಿಯಾಗುತ್ತದೆ. ಒಟ್ಟಾರೆ ಆ ಪಾತ್ರ ನನ್ನ ಗುರುತಿಗೆ ಕಾರಣವಾಗಿದೆ’ ಎಂಬ ಖುಷಿ ಇವರದ್ದು.

ಕೈಯಲ್ಲಿರುವ ಸಿನಿಮಾಗಳು: ಸದ್ಯ ‘ರವಿ ಬೋಪಣ್ಣ’ ಸಿನಿಮಾ ತಯಾರಾಗಿದ್ದು ಬಿಡುಗಡೆ ಸಿದ್ಧವಾಗಿದೆ. ‘1980’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಪ್ರಿಯಾಂಕ ಉಪೇಂದ್ರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ. ಇದರೊಂದಿಗೆ ‘14 feb’, ‘ಸ್ಪೂಕಿ ಕಾಲೇಜ್‌’, ‘31 ಡೇಸ್’ ಸಿನಿಮಾಗಳೂ ಇವರ ಬತ್ತಳಿಕೆಯಲ್ಲಿವೆ.

ಮಹಿಳಾ ಪ್ರಧಾನ ಸಿನಿಮಾ ಮಾಡುವ ಆಸೆ: ಶಾಸ್ತ್ರೀಯ ನೃತ್ಯಗಾರ್ತಿ ಆಗಿರುವ ಕಾರಣ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ನಾಟ್ಯ ಕಲೆ ಕುರಿತಾದ ಮೇಲಿನ ಮಹಿಳಾ ಪ್ರಧಾನ ಸಿನಿಮಾ ಮಾಡುವ ಹಂಬಲ ಹೊಂದಿದ್ದಾರೆ ಶರಣ್ಯಾ. ತೂಕದ ಪಾತ್ರವಿದ್ದರೆ ಪಾತ್ರ ಎಷ್ಟೇ ಸಣ್ಣದಾಗಿದ್ದರೂ ಷರತ್ತು ಹಾಕದೇ ಪಾತ್ರ ಮಾಡಲು ಸಿದ್ಧ ಎನ್ನುವ ಇವರ ಮಾತಲ್ಲಿ ನಟಿಯಾಗಿ ಸಿನಿರಂಗದಲ್ಲಿ ಗಟ್ಟಿಯಾಗಿ ಬೇರೂರುವ ಕನಸೂ ವ್ಯಕ್ತವಾಗುತ್ತದೆ.

ಪರಭಾಷೆಯಿಂದಲೂ ಅವಕಾಶ: ಮೊದಲಿನಿಂದಲೂ ಪರಭಾಷಾ ಕಿರುತೆರೆ ಕ್ಷೇತ್ರದಿಂದ ಇವರಿಗೆ ಅವಕಾಶ ಬಂದಿದ್ದವು. ಈ ನಡುವೆ ತಮಿಳು, ತೆಲುಗು ಸಿನಿಮಾಗಳಿಂದಲೂ ಅವಕಾಶಗಳು ಬಂದಿವೆ. ‘ಸದ್ಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿರುವುದರಿಂದ ಮುಂದಿನ ದಿನಗಳಲ್ಲಿ ಪರಭಾಷೆಯ ಬಗ್ಗೆ ಯೋಚಿಸುತ್ತೇನೆ. ಸದ್ಯ ಕನ್ನಡದಲ್ಲೇ ಇಷ್ಟೊಂದು ಅವಕಾಶಗಳಿರುವುದು ಖುಷಿ ತಂದಿದೆ’ ಎನ್ನುತ್ತಾ ಮಾತು ಮುಗಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT