ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓಲ್ಡ್ ಮಾಂಕ್’ ಹಿಡಿದ ಶ್ರೀನಿ, ಅದಿತಿ!

Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಎಂ.ಜಿ. ಶ್ರೀನಿವಾಸ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಓಲ್ಡ್ ಮಾಂಕ್’. ಈ ಚಿತ್ರಕ್ಕೆ ಬೇಕಿರುವ ಪಾತ್ರಧಾರಿಗಳನ್ನು ಹುಡುಕಿ, ರಾಜ್ಯದ ಹಲವೆಡೆ ಆಡಿಷನ್ ನಡೆಸಿದ್ದ ಶ್ರೀನಿವಾಸ್, ಈಗ ಚಿತ್ರದ ಮುಹೂರ್ತ ಕಾರ್ಯಕ್ರಮ ಪೂರೈಸಿದ್ದಾರೆ.

ಇದರ ಚಿತ್ರೀಕರಣವು ಗುರುವಾರದಿಂದಲೇ ಶುರುವಾಗಲಿದೆ. ಎರಡನೆಯ ಹಂತದ ಚಿತ್ರೀಕರಣವು ಮಾರ್ಚ್‌ ತಿಂಗಳಲ್ಲಿ ನಡೆಯಲಿದೆ.

‘ಓಲ್ಡ್‌ ಮಾಂಕ್‌’ ಅಂದರೆ ಏನು ಎಂಬ ಪ್ರಶ್ನೆ ಹೆಚ್ಚಿನವರಲ್ಲಿ ಮೂಡುವುದಿಲ್ಲ. ಬಹಳ ಜನಪ್ರಿಯ ರಮ್‌ ಅದು. ಆದರೆ, ಈ ಚಿತ್ರದ ಶೀರ್ಷಿಕೆಗೂ, ಆ ರಮ್‌ಗೂ ಸಂಬಂಧ ಇಲ್ಲ ಎಂದು ಶ್ರೀನಿವಾಸ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ‘ಓಲ್ಡ್ ಮಾಂಕ್ ಅಂದರೆ ಹಳೆಯ ಸನ್ಯಾಸಿ ಎಂದು ಅರ್ಥ. ಇದು ಹಳೆಯ ಸನ್ಯಾಸಿಯೊಬ್ಬನಿಗೆ ಸಂಬಂಧಿಸಿದ ಕಥೆ’ ಎನ್ನುವುದು ಚಿತ್ರದ ಶೀರ್ಷಿಕೆ ಕುರಿತು ಅವರು ನೀಡಿರುವ ವಿವರಣೆ.

‘ರಾಧೆ ಮತ್ತು ಕೃಷ್ಣ ಒಟ್ಟಿಗೆ ಇದ್ದ ಸಂದರ್ಭದಲ್ಲಿ ಒಮ್ಮೆ ನಾರದ ಅಲ್ಲಿಗೆ ಬರುತ್ತಾನೆ. ಆಗ ಏನೋ ಎಡವಟ್ಟು ಮಾಡಲು ಹೋಗುತ್ತಾನೆ. ಇದರಿಂದಾಗಿ ರಾಧೆ ಮುನಿಸಿಕೊಳ್ಳುತ್ತಾಳೆ. ಆಗ ನಾರದನು ಶ್ರೀಕೃಷ್ಣನಿಂದ ಶಾಪಕ್ಕೆ ಗುರಿಯಾಗುತ್ತಾನೆ. ಭೂಲೋಕಕ್ಕೆ ಹೋಗಿ ಪ್ರೀತಿಸಿ ಮದುವೆ ಆದರೆ ಶಾಪವಿಮೋಚನೆ ಆಗುತ್ತದೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ನಾರದ ಭೂಲೋಕಕ್ಕೆ ಬಂದು ಏನು ಮಾಡುತ್ತಾನೆ, ಶಾಪದಿಂದ ಹೇಗೆ ವಿಮೋಚನೆ ಪಡೆಯುತ್ತಾನೆ ಎಂಬುದು ಚಿತ್ರದ ಕಥೆ’ ಎಂದು ಶ್ರೀನಿವಾಸ್ ಅವರು ಸಿನಿಮಾ ಕಥೆಯ ಮೂಲ ಎಳೆಯನ್ನು ವಿವರಿಸಿದರು.

ಅದಿತಿ ಪ್ರಭುದೇವ ಅವರು ಚಿತ್ರದ ನಾಯಕಿ. ಶ್ರೀನಿವಾಸ್ ಸೃಷ್ಟಿಸಿದ ಪಾತ್ರಕ್ಕೆ ಅದಿತಿ ಅವರು ಬಹಳ ಸೂಕ್ತ ಎಂದು ಅವರನ್ನು ಆಯ್ಕೆ ಮಾಡಿದರಂತೆ. ಎಸ್. ನಾರಾಯಣ್ ಅವರು ಇದರಲ್ಲಿ ನಾಯಕನ ತಂದೆಯ ಪಾತ್ರ ನಿಭಾಯಿಸಲಿದ್ದಾರೆ. ‘ಬಹಳ ದಿನಗಳ ನಂತರ ಅವರು ಒಂದು ವಿಶೇಷವಾದ ಹಾಗೂ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಲಿದ್ದಾರೆ’ ಎಂದು ಸಿನಿತಂಡ ಹೇಳಿದೆ.

ನಾರದನು ಭೂಲೋಕಕ್ಕೆ ಬಂದ ನಂತರ ಪಾತ್ರವನ್ನು ಶ್ರೀನಿವಾಸ್ ನಿಭಾಯಿಸಲಿದ್ದಾರೆ. ಇದು ಬಹಳ ತರಲೆ ಮಾಡುವ ಪಾತ್ರವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT