ಶನಿವಾರ, ನವೆಂಬರ್ 28, 2020
24 °C

ಸಾಹಸ ಕಥಾನಕದ ‘ಗುಡುಗುಡಿಯ ಸೇದಿ ನೋಡೋ..’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸತನದೊಂದಿಗೆ ಆಗಮಿಸುತ್ತಿದ್ದಾರೆ. ಇದೀಗ ಆ ಭರವಸೆಯನ್ನು ಹೊತ್ತು ಬಂದಿದೆ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾತಂಡ. ‘ಹಾಗಂತ ಸದ್ಯದ ಡ್ರಗ್ಸ್, ಗಾಂಜಾ ಹಾವಳಿಯ ಸುತ್ತ ಈ ಸಿನಿಮಾ ಕಥೆ ಇದೆ ಎಂದು ಭಾವಿಸಬೇಡಿ...’ ಎನ್ನುತ್ತಲೇ ಚಿತ್ರದ ಟೀಸರ್ ಮತ್ತು ಹಾಡೊಂದನ್ನು ಸಿನಿಪ್ರಿಯರ ಮುಂದಿಟ್ಟಿದೆ ಚಿತ್ರತಂಡ. ಚಿತ್ರದ ಶೇ. 90 ಭಾಗದ ಚಿತ್ರೀಕರಣ ಮುಗಿದಿದೆ. ಡಿಸೆಂಬರ್ ವೇಳೆಗೆ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

ವಾಟರ್ ಏಂಜಲ್ಸ್ ಸಿನಿಮಾಸ್ ಲಾಂಛನದಲ್ಲಿ ಎನ್.ಕೃಷ್ಣಕಾಂತ್ ‘ಗುಡುಗುಡಿಯಾ ಸೇದಿ ನೋಡೋ’ ಚಿತ್ರ ನಿರ್ಮಿಸಿದ್ದಾರೆ.

‘ಟೈಟಲ್‌ನಲ್ಲಿ ಒಂದು ಗಟ್ಟಿತನ ಬೇಕಿತ್ತು. ಕಥೆಯ ಶೈಲಿಯೂ ಬೇರೆಯದ್ದಾಗಿರುವುದರಿಂದ ಅದಕ್ಕೆ ಒಪ್ಪುವ ಶೀರ್ಷಿಕೆಯ ಹುಡುಕಾಟದಲ್ಲಿದ್ದಾಗ, ಗುಡುಗುಡಿಯಾ ಸೇದಿ ನೋಡೋ ತುಂಬ ಹತ್ತಿರ ಎನಿಸಿತು. ಹಾಗಾಗಿ ಅದನ್ನೇ ಆಯ್ದುಕೊಂಡಿದ್ದೇನೆ. ಪ್ರಸ್ತುತದ ಸನ್ನಿವೇಶಕ್ಕೂ ಈ ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ’ ಎನ್ನುವುದು ನಿರ್ದೇಶಕ ಜಂಟಿ ಹೂಗಾರ್ ಅವರ ಸಮಜಾಯಿಷಿ. ಇವರು ಈ ಮೊದಲು ಸಭ್ಯ ಎನ್ನುವ ಕಿರುಚಿತ್ರ ನಿರ್ದೇಶಿಸಿದ್ದರು. ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ಕೆಲಸ ಮಾಡಿದ ಅನುಭವ ಇವರದು.

‘ಪಯಣದ ಹಾದಿಯಲ್ಲಿ ಮಿಸ್ಟರಿ ಥ್ರಿಲ್ಲರ್ ಶೈಲಿಯ ಕಥೆ ತೆರೆದುಕೊಳ್ಳುತ್ತದೆ. ಬುಡಕಟ್ಟು ಸಮುದಾಯ, 600ರಿಂದ 700 ವರ್ಷಗಳ ಹಿಂದಿನ ಒಂದಷ್ಟು ನಾಗರಿಕತೆ ಮತ್ತು ಕನ್ನಡದ ಕಂಪು ಈ ಚಿತ್ರದಲ್ಲಿ ಕಾಣಿಸಲಿದೆ. ಬೆಂಗಳೂರು ಸೇರಿ ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಹಳಗನ್ನಡದ ಬಳಕೆ ಇರುವುದರಿಂದ ಕನ್ನಡ ಚಿತ್ರದಲ್ಲಿ ಕನ್ನಡದ ಸಬ್‌ ಟೈಟಲ್ ನೀಡಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ ಜಂಟಿ ಹೂಗಾರ್.

‘ನಾನು ಹೊಟೇಲ್ ಉದ್ಯಮಿ. ಅಡುಗೆ ಹದವಾದರೆ ಮಾತ್ರ ರುಚಿ. ಜಂಟಿ ಹೂಗಾರ್ ಅವರು ಅಂತದ್ದೇ ಹದವಾದ ಕಥೆ ತಂದಿದ್ದರು. ಜನಪದದ ಸೊಗಡಿನ ಜತೆಗೆ ಆಗಮಿಸಿದ್ದರು. ಅವರ ಕಥೆಯನ್ನು ಮತ್ತಷ್ಟು ಮೊನಚಾಗಿಸಿ ಕಳೆದ ಎರಡು ವರ್ಷದ ಹಿಂದೆಯೇ ಸಿನಿಮಾ ಶುರುವಾಗಿ ಇದೀಗ ಬಿಡುಗಡೆಗೆ ತಂದಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಎನ್. ಕೃಷ್ಣಕಾಂತ್. 

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಸುಜಿತ್ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಿದ್ದಾರೆ. 2016ರಲ್ಲಿ ಮಿಸ್ ಕ್ವೀನ್ ಆಫ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ರೂಪದರ್ಶಿ ಐಶ್ವರ್ಯಾ ದಿನೇಶ್ ಹಾಗೂ ಭರತನಾಟ್ಯ ಪ್ರವೀಣೆ ರಶ್ಮಿತಾ ಗೌಡ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ನಿರಂಜನ್‌ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ನಿರ್ಮಾಪಕ ನವರಸನ್ ಟೀಸರ್ ನೋಡಿ ಚಿತ್ರತಂಡವನ್ನು ಬೆನ್ನುತಟ್ಟಿದರು. ಕಥಾಸಂಗಮ ಚಿತ್ರದಲ್ಲಿ ಕೆಲಸ ಮಾಡಿದ್ದ ದೀಪಿಕ್ ಯರಗೇರಾ ಈ ಚಿತ್ರಕ್ಕೆ ಛಾಯಾಗ್ರಹಣ, ಉದಿತ್ ಹರಿದಾಸ್ ಸಂಗೀತ, ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು