ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಹಾಗೂ ಸುಶಾಂತ್ ಸಾವಿಗೆ ಸಂಬಂಧವಿಲ್ಲ: ಮೌನ ಮುರಿದ ದಿಶಾ ಸಾಲಿಯಾನ್ ತಾಯಿ

Last Updated 2 ಆಗಸ್ಟ್ 2020, 9:40 IST
ಅಕ್ಷರ ಗಾತ್ರ

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೂ ವಾರದ ಮೊದಲು ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಸುಶಾಂತ್ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಇಬ್ಬರ ಸಾವು ನಿಗೂಢವಾಗಿದ್ದು ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಈ ಬಗ್ಗೆ ಇಲ್ಲಿಯವರೆಗೆ ಮಾತನಾಡದಿದ್ದ ದಿಶಾ ತಾಯಿ ವಸಂತಿ ಮೊದಲ ಬಾರಿ ಮೌನ ಮುರಿದಿದ್ದಾರೆ. ಅಲ್ಲದೇ ಸುಶಾಂತ್ ಹಾಗೂ ದಿಶಾ ಸಾವಿನ ಕುರಿತ ವದಂತಿಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ದಿಶಾ ತಾಯಿ ಮಾತನಾಡಿದ್ದಾರೆ.

‌ತಮ್ಮ ಮಗಳ ಹಾಗೂ ಸುಶಾಂತ್ ಸಾವಿಗೆ ಯಾವುದೇ ಸಂಬಂಧವಿಲ್ಲ. ಅದು ಕಟ್ಟುಕಥೆ ಎಂದಿದ್ದಾರೆ ದಿಶಾ ತಾಯಿ.

’ನಮ್ಮ ಮಗಳು ತಾನು ಸುಶಾಂತ್ ಜೊತೆ ಕೆಲಸ ಮಾಡಿದ್ದನ್ನು ಎಂದಿಗೂ ನಮ್ಮ ಜೊತೆ ಹೇಳಿಕೊಂಡಿಲ್ಲ. ಒಂದು ವೇಳೆ ಅವಳು ಕೆಲಸ ಮಾಡಿದ್ದರೂ ಒಂದೆರಡು ಬಾರಿ ಸಣ್ಣ ಪುಟ್ಟ ಮೀಟಿಂಗ್ ಮಾಡಿರಬಹುದು ಅಷ್ಟೆ. ದಿಶಾ ಲವಲವಿಕೆಯ ಹುಡುಗಿ. ಅವಳು ಸದಾ ಕೆಲಸ, ಕುಟುಂಬ ಹಾಗೂ ಸ್ನೇಹಿತರ ಜೊತೆ ಬ್ಯುಸಿಯಾಗಿರುತ್ತಿದ್ದಳು. ದಿಶಾ ಸಾವಿನಿಂದ ಈಗಲೂ ನಮಗೆ ಹೊರ ಬರಲು ಸಾಧ್ಯವಾಗುತ್ತಿಲ್ಲ. ಈಗಲೂ ಅದರಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇವೆ’ ಎಂದಿದ್ದಾರೆ.

ನಿಮ್ಮ ಮಗಳ ಜೀವನದಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದಿತ್ತಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ದಿಶಾ ತಾಯಿ ’ಆ ರೀತಿಯ ಘಟನೆಗಳು ನಡೆದಿರಲು ಸಾಧ್ಯವಿಲ್ಲ. ನಮ್ಮ ಮಗಳ ಜೀವನದಲ್ಲಿ ನಮಗೇ ಅರಿಯದೇ ಏರಿಳಿತಗಳು ಸಂಭವಿಸಿದೆಯೇ ಎಂಬುದು ನಮಗೆ ತಿಳಿದಿಲ್ಲ. ಆದರೆ ನಮಗೆ ಎಂದಿಗೂ ಹಾಗೆ ಅನ್ನಿಸಿಲ್ಲ’ ಎಂದಿದ್ದಾರೆ.

‘ನಮ್ಮ ಮಗಳು ದಿಶಾ ನಮ್ಮ ಏಕೈಕ ದೌರ್ಬಲ್ಯವಾಗಿದ್ದಳು. ಈಗ ಅವಳೇ ನಮ್ಮಿಂದ ದೂರಾಗಿದ್ದಾಳೆ. ಈಗ ನಾವು ಯಾರಿಗೂ ಹೆದರುವುದಿಲ್ಲ. ದಿಶಾ ಸಾವಿಗೆ ಯಾರನ್ನೋ ಹೊಣೆ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು. ಆದರೆ ಯಾರೂ ಅದನ್ನು ಯೋಚಿಸುವುದಿಲ್ಲ. ನಮ್ಮ ಕುಟುಂಬದವರು ದಿಶಾ ಸಾವಿಗೆ ಯಾರನ್ನೂ ಹೊಣೆ ಮಾಡಲು ಇಷ್ಟಪಡುವುದಿಲ್ಲ. ಯಾಕೆಂದರೆ ಅವಳ ಸ್ನೇಹಿತರು, ಅವಳನ್ನು ಮದುವೆಯಾಗುವ ಹುಡುಗ ಎಲ್ಲರೂ ನಮ್ಮ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದರು’ ಎಂದಿದ್ದಾರೆ ವಸಂತಿ.

ಹಿಂದೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ಸುಶಾಂತ್ ಕುಟುಂಬಕ್ಕೆ ಆಪ್ತರು ಎಂದಿದ್ದ ಸ್ಮಿತಾ ಪಾರಿಖ್‌ ‘ದಿಶಾ ಸಾವಿನ ನಂತರ ಸುಶಾಂತ್ ತುಂಬಾನೇ ಅಪ್‌ಸೆಟ್ ಆಗಿದ್ದರು. ಅಲ್ಲದೇ ಈಗ ಈ ಜನರು ನನ್ನನ್ನು ಬಿಡುವುದಿಲ್ಲ ಎಂದು ನನ್ನ ಸಹೋದರಿ ಮಿತು ಸಿಂಗ್ ಜೊತೆ ಹೇಳಿಕೊಂಡಿದ್ದರು’ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ದಿಶಾ ಸಾವಿನ ನಂತರ ಅವಳ ಸಾವಿನೊಂದಿಗೆ ತನ್ನ ಹೆಸರು ತಳುಕು ಹಾಕಿಕೊಳ್ಳಬಹುದು ಎಂಬ ಭಯವೂ ಸುಶಾಂತ್‌ಗಿತ್ತು ಎಂದಿದ್ದರು ಸ್ಮಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT