ಬುಧವಾರ, ಜೂನ್ 3, 2020
27 °C

ನಿರ್ದೇಶನದತ್ತ ಐಶಾನಿ ಚಿತ್ತ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

ಐಶಾನಿ ಶೆಟ್ಟಿ ಸಿನಿಮಾ ನಿರ್ದೇಶನದ ಕನಸನ್ನೂ ಕಣ್ಣಲ್ಲಿ ತುಂಬಿಕೊಂಡಿರುವ ಬೆಡಗಿ. ಅಭಿನಯವೇ ಅವರ ಪ್ರಧಾನ ಆದ್ಯತೆ ಆಗಿದ್ದರೂ, ಬರವಣಿಗೆಯ ಹವ್ಯಾಸವೂ ಅವರಿಗಿದೆ. ಸ್ನಾತಕೋತ್ತರ ಪದವಿ ಪೂರೈಸಿರುವ ಅವರು ಕಥೆ, ಕವನಗಳನ್ನು ಬರೆಯುತ್ತಾರೆ. ಎರಡು ವರ್ಷದ ಹಿಂದೆ ಅವರು ನಿರ್ದೇಶಿಸಿದ್ದ ‘ಕಾಜಿ’ ಕಿರುಚಿತ್ರಕ್ಕೆ ಸೈಮಾ ಪ್ರಶಸ್ತಿ ಲಭಿಸಿದ್ದೇ ಅವರು, ಈಗ ಸಿನಿಮಾ ನಿರ್ದೇಶನದತ್ತ ಹೊರಳಲು ಮೂಲ ಪ್ರೇರಣೆ.

ಈಗಾಗಲೇ, ಎರಡು ಸಿನಿಮಾಗಳ ಸ್ಕ್ರಿಪ್ಟ್‌ ಬರೆದಿರುವ ಐಶಾನಿ ಆ ಪೈಕಿ ಲವ್‌ ಸ್ಟೋರಿಯ ಸ್ಕ್ರಿಪ್ಟ್‌ ಅನ್ನು ಮತ್ತಷ್ಟು ಸುಧಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಪರ್ಯಾಯ ಸಿನಿಮಾದ ಮತ್ತೊಂದು ಸ್ಕ್ರಿಪ್ಟ್‌ ಇನ್ನೂ ಬರವಣಿಗೆಯ ಹಂತದಲ್ಲಿದೆಯಂತೆ. ವರ್ಷಾಂತ್ಯದೊಳಗೆ ಲವ್‌ ಸ್ಟೋರಿಗೆ ತಾವೇ ಆ್ಯಕ್ಷನ್ ಕಟ್‌ ಹೇಳಲು ತಯಾರಿ ನಡೆಸಿದ್ದಾರೆ. ಕನ್ನಡದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆಯಿದೆ. ಹೆಣ್ಣೊಬ್ಬಳು ನಿರ್ದೇಶಕಿಯಾಗಿ ಬಣ್ಣದ ಲೋಕದಲ್ಲಿ ಜಯಭೇರಿ ಬಾರಿಸುವುದು ಕಷ್ಟ ಎನ್ನುವ ಅಲಿಖಿತ ವಾತಾವರಣವಿದೆ. ಇದನ್ನು ಸುಳ್ಳಾಗಿಸಬೇಕು ಎಂಬುದು ಅವರ ಇರಾದೆ.

ಲವ್‌ ಸ್ಟೋರಿ ಸಿನಿಮಾದ ಹೀರೊ ಸೇರಿ ಪಾತ್ರವರ್ಗದ ಬಗ್ಗೆ ಅವರು ಇನ್ನೂ ಚಿಂತಿಸಿಲ್ಲವಂತೆ. ‘ನೀವು ನಿರ್ದೇಶಿಸುವ ಸಿನಿಮಾದಲ್ಲಿ ನೀವೂ ಆ್ಯಕ್ಟಿಂಗ್‌ ಮಾಡುತ್ತೀರಾ’ ಎನ್ನುವ ಪ್ರಶ್ನೆಗೆ, ‘ನಾನು ನಿರ್ದೇಶನ ಮತ್ತು ನಟನೆ ಎರಡನ್ನೂ ಒಟ್ಟಿಗೆ ಮಾಡಿಲ್ಲ. ಆದರೆ, ನಾನು ಆ್ಯಕ್ಷನ್‌ ಕಟ್‌ ಹೇಳುವ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆಯಂತೂ ಇದೆ. ಚಿತ್ರತಂಡದ ಅಭಿಪ್ರಾಯದ ಮೇಲೆ ನಾನು ನಟಿಸಬೇಕೇ ಅಥವಾ ಬೇಡವೇ ಎಂಬುದು ನಿರ್ಧಾರವಾಗಲಿದೆ’ ಎಂದು ಕಣ್ಣರಳಿಸುತ್ತಾರೆ.

ಪ್ರಸ್ತುತ ಐಶಾನಿ ‘ಧರಣಿ ಮಂಡಲ ಮಧ್ಯದೊಳಗೆ’ ಮತ್ತು ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಂತದ ಶೂಟಿಂಗ್‌ ಪೂರ್ಣಗೊಂಡಿದೆ. ‘ಈ ಚಿತ್ರದಲ್ಲಿ ಕಾಲೇಜು ಜೀವನ ಮತ್ತು ಆ ಹಂತ ಮುಗಿದ ನಂತರದ ಬದುಕಿನ ಚಿತ್ರಣದ ಕಥನವಿದೆ. ನನ್ನದು ಮಹತ್ವಾಕಾಂಕ್ಷೆಯ ಹುಡುಗಿಯ ಪಾತ್ರ. ಆಕೆಗೆ ವಿಜ್ಞಾನಿಯಾಗುವ ಆಸೆ. ಅದಕ್ಕಾಗಿ ತಯಾರಿ ಮಾಡುತ್ತಿರುತ್ತಾಳೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದಲ್ಲಿ ಬೋಲ್ಡ್‌ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಇಲ್ಲಿಯವರೆಗೆ ನಾನು ಸಾಫ್ಟ್‌ ‌ಆಗಿರುವ ಪಾತ್ರಗಳಲ್ಲಿಯೇ ನಟಿಸಿದ್ದೇನೆ. ಇದು ನಿಜಕ್ಕೂ ಸವಾಲಿನ ಪಾತ್ರ. ಒಂದರ್ಥದಲ್ಲಿ ಡಾರ್ಕ್‌ ಕ್ಯಾರೆಕ್ಟರ್‌. ಒಳ್ಳೆಯ ಪಾತ್ರ ಸಿಕ್ಕಿದೆ. ಪ್ರತಿಯೊಬ್ಬ ನಟಿಗೂ ತನಗೆ ಸಿಕ್ಕಿದ ಪಾತ್ರವನ್ನು ತೆರೆಯ ಮೇಲೆ ತನ್ನದೇ ಶೈಲಿಯಲ್ಲಿ ನಿಭಾಯಿಸಬೇಕೆಂಬ ಆಸೆ ಇರುತ್ತದೆ. ಅಂತಹ ಆಸೆ ನನಗೂ ಇದೆ’ ಎನ್ನುತ್ತಾರೆ.

‘ಈ ಚಿತ್ರದಲ್ಲಿನ ಪಾತ್ರದ ಲುಕ್‌ಗೆ ಹೆಚ್ಚು ಪ್ರಾಧಾನ್ಯ ಸಿಕ್ಕಿದೆ. ಕಾಸ್ಟ್ಯೂಮ್‌ ಕೂಡ ವಿಭಿನ್ನವಾಗಿದೆ. ಚಿತ್ರದ ಶೂಟಿಂಗ್‌ ಆರಂಭವಾಗಿತ್ತು. ನನ್ನ ಪಾತ್ರದ ಚಿತ್ರೀಕರಣ ಆರಂಭವಾಗುವ ವೇಳೆಗೆ ಕೊರೊನಾ ಭೀತಿ ಕಾಣಿಸಿಕೊಂಡಿತು’ ಎಂದರು ಐಶಾನಿ.

ಲಾಕ್‌ಡೌನ್‌ ಅವಧಿಯಲ್ಲಿ ಅವರು ಯಾವುದೇ ಹೊಸ ಸ್ಕ್ರಿಪ್ಟ್‌ ಕೇಳಿಲ್ಲವಂತೆ. ಕೈಯಲ್ಲಿರುವ ಎರಡು ಸಿನಿಮಾಗಳ ಕೆಲಸ ಪೂರ್ಣಗೊಳಿಸುವ ಯೋಚನೆಯಲ್ಲಿದ್ದಾರೆ. ‘ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇದ್ದೇನೆ. ಈ ಅವಧಿಯು ನನಗೆ ಬೇಸರ ಮೂಡಿಸಿಲ್ಲ. ಪ್ರತಿದಿನ ಡಾನ್ಸ್‌ ಪ್ರಾಕ್ಟೀಸ್‌, ವರ್ಕೌಟ್‌ ಮಾಡುತ್ತೇನೆ. ಹೊಸ ಬಗೆಯ ಅಡುಗೆಗಳ ಪ್ರಯೋಗವನ್ನೂ ಮಾಡಿದ್ದೇನೆ’ ಎಂದು ನಕ್ಕರು ಐಶಾನಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು