ಭಾನುವಾರ, ನವೆಂಬರ್ 27, 2022
27 °C

ದಕ್ಷಿಣ VS ಉತ್ತರ ಭಾರತ ಸಿನಿಮಾ: ಐಶ್ವರ್ಯಾ ರೈ ಮನದಾಳದ ಮಾತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ನಲ್ಲಿನ ದೊಡ್ಡ ಸಿನಿಮಾಗಳ ಸರಣಿ ಸೋಲು, ಬಾಹುಬಲಿ, ಕೆಜಿಎಫ್‌ನಂತಹ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದಿಂದಾಗಿ ದಕ್ಷಿಣ VS ಉತ್ತರ ಭಾರತ ಸಿನಿಮಾ ಕುರಿತಾದ ಚರ್ಚೆ ಬಹಳ ದಿನಗಳಿಂದ ಚಾಲ್ತಿಯಲ್ಲಿದೆ. ಈ ಎರಡೂ ಪ್ರದೇಶದ ನಂಟು ಹೊಂದಿರುವ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‌ ಈ ವಿವಾದದ ಕುರಿತು ಮಾತನಾಡಿರುವುದು ಇದೀಗ ಕುತೂಹಲ ಕೆರಳಿಸಿದೆ.

ಸದ್ಯ ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪೊನ್ನಿಯಿನ್‌ ಸೆಲ್ವನ್‌‘ ಪ್ರಚಾರದಲ್ಲಿ ಮಗ್ನರಾಗಿರುವ ಐಶ್ವರ್ಯಾ ರೈ, ಎಲ್ಲ ಗಡಿಗಳನ್ನು ಮೀರಿ ಸಿನಿಮಾ ಮತ್ತು ನಟರನ್ನು ಸ್ವೀಕರಿಸುತ್ತಿರುವ ಪ್ರಸ್ತುತ ಸ್ಥಿತಿ ಅತ್ಯುತ್ತಮವಾಗಿದೆ. ಎಲ್ಲ ಅಡೆತಡೆಗಳನ್ನು ದಾಟಿ ಸಿನಿಮಾ ರಾಷ್ಟ್ರವ್ಯಾಪಿಯಾಗುತ್ತಿದೆ. ಎಲ್ಲ ಭಾಗಗಳ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬಯಸುತ್ತಿದ್ದಾರೆ ಎಂದಿದ್ದಾರೆ.

ಮಂಗಳವಾರ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿವಿಧ ವೇದಿಕೆಗಳ ಮೂಲಕ ಇ‌ವತ್ತು ದೇಶದ ಎಲ್ಲ ಭಾಗಗಳಿಗೂ ಸಿನಿಮಾ ತಲುಪುತ್ತಿದೆ. ಇದೊಂದು ಪರಿಪೂರ್ಣ ಸಮಯ. ದೇಶದಾದ್ಯಂತ ಎಲ್ಲರೂ, ಎಲ್ಲ ಸಿನಿಮಾ ನೋಡಬಹುದಾಗಿದೆ. ಹೀಗಾಗಿ ವಿವಾದಗಳನ್ನು ಹೊಂದಿರುವ ನಮ್ಮ ಸಾಂಪ್ರದಾಯಿಕ ಚಿಂತನೆಯಿಂದ ಹೊರಬಂದು ನಮ್ಮ ಪ್ರೇಕ್ಷಕರಿಗೆ ಕಲೆಯನ್ನು ಆಸ್ವಾದಿಸಲು ಸಹಾಯ ಮಾಡಬೇಕು. ಕಲೆಯನ್ನು ಪ್ರೋತ್ಸಾಹಿಸಬೇಕು. ಕಲೆ ಎಂದಿಗೂ ಪ್ರಸ್ತುತ. ಅದನ್ನು ಪ್ರದರ್ಶಿಸುವ ಕಲಾವಿದರಿದ್ದರು. ಆದರೆ ಅದನ್ನು ತಲುಪಿಸುವ ವೇದಿಕೆ ಇಂದು ದೊಡ್ಡದಾಗಿದೆ. ಜನ ದೇಶದ ಎಲ್ಲ ಭಾಗದ ಸಿನಿಮಾ ಸ್ವೀಕರಿಸುತ್ತಾರೆ ಎಂಬುದಕ್ಕೆ ಇವತ್ತು ನಮ್ಮೆದುರು ಒಂದಷ್ಟು ಉದಾಹರಣೆಗಳಿವೆ ಎಂದಿದ್ದಾರೆ.

ದಕ್ಷಿಣ ಮತ್ತು ಉತ್ತರ ಭಾರತದ ಸಿನಿಮಾ ಕುರಿತು, ಸಿನಿಮಾದ ಗುಣಮಟ್ಟದ ಕುರಿತು ಕೆಲ ದಿನಗಳಿಂದ ದೇಶದಲ್ಲಿ ತಣ್ಣನೆಯ ವಿವಾದ ನಡೆಯುತ್ತಲೇ ಇದೆ. ಬಾಹುಬಲಿ, ಕೆಜಿಎಫ್‌ನಂತಹ ಪ್ಯಾನ್‌ ಇಂಡಿಯಾ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ದಕ್ಷಿಣ ಭಾರತದ ಸಿನಿಮಾಗಳು ಮತ್ತು ಬಾಲಿವುಡ್‌ ಸಿನಿಮಾಗಳನ್ನು ಶ್ರೇಷ್ಠತೆಯ ಆಧಾರದಲ್ಲಿ ಹೋಲಿಕೆ ಮಾಡುವ ಮನಸ್ಥಿತಿ ಪ್ರಾರಂಭಗೊಂಡಿತ್ತು. ನಟ ಕಮಲ್‌ಹಾಸನ್‌, ಅಕ್ಷಯ್‌ಕುಮಾರ್‌, ನಟಿ ಅಲಿಯಾ ಭಟ್‌ರಂತಹ ಸೆಲೆಬ್ರೆಟಿಗಳು ಈ ವಿವಾದದ ಬಗ್ಗೆ ಹೇಳಿಕೆ ನೀಡಿ ಇದರ ಬಿಸಿ ಇನ್ನಷ್ಟು ಉಲ್ಬಣಗೊಂಡಿತ್ತು. 

ಇದನ್ನೂ ಓದಿ: 

1974ರಲ್ಲಿ ಬಿಡುಗಡೆಗೊಂಡ ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿ ಆಧಾರಿತ ಐತಿಹಾಸಿಕ ‘ಪೊನ್ನಿಯಿನ್‌ ಸೆಲ್ವನ್‌‘ ಸೆಪ್ಟೆಂಬರ್ 30ರಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತೆರೆಗೆ ಬರಲಿದೆ. ಚಿತ್ರದ ಟೀಸರ್‌, ಟ್ರೇಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು ನಂದಿನಿಯಾಗಿ ಐಶ್ವ‌ರ್ಯಾ ರೈ ಪ‍್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಬಹಳ ಹಿಂದಿನಿಂದಲೂ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಜನಪ್ರಿಯರಾಗಿರುವ ಮಣಿರತ್ನಂ ನಿರ್ದೇಶನದ ಈ ಚಿತ್ರ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲೆಯಾಳಂನಲ್ಲಿ ತೆರೆಗೆ ಬರಲಿದೆ. ವಿಕ್ರಂ, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ ಮುಖ್ಯಭೂಮಿಕೆಯಲ್ಲಿರುವ ದಕ್ಷಿಣ ಭಾರತದ ಐತಿಹ್ಯ ಸಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು