ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇಕೆ ಅಮಿತಾಭ್ ಆಗಬೇಕು...

Last Updated 4 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೌದು. ನಾನು ಅಮಿತಾಭ್ ಬಚ್ಚನ್ ಆಗಬೇಕು. ಎಷ್ಟೋ ಲಕ್ಷ ಕಲಾವಿದರು ಹಂಬಲಿಸುವಂತೆ ನಾನೂ ಒಂದು ದಿನ ಬಚ್ಚನ್ ಆಗಬೇಕು.
ಅವರು ನಿಜಕ್ಕೂ ನಟರಿಗೆಲ್ಲಾ ‘ಷಹನ್‌ಶಾ’. ಭಾವಪೂರ್ಣ ದೃಶ್ಯವೇ ಇರಲಿ, ಹಾಸ್ಯ ಮತ್ತು ಸಾಹಸ ದೃಶ್ಯಗಳೇ ಆಗಲಿ, ಸಂಪೂರ್ಣ ಪಾರಮ್ಯ ಸಾಧಿಸಿರುವಾತ. ಅವರ 'ಆಂಗ್ರಿ ಯಂಗ್ ಮ್ಯಾನ್' ಪಾತ್ರ ಪೋಷಣೆಯನ್ನು ಯಾರೂ ಸರಿಗಟ್ಟಲಾರರು.

ಅವರ ಚಿತ್ರಗಳನ್ನು ನೋಡಿದವರೆಲ್ಲರೂ ಅವರಂತೆ ನಡೆಯುವುದು, ಮಾತಾಡುವುದು ಮತ್ತು ಆ ನಟನ ಹಾಗೆ ವರ್ತಿಸುವವರೇ. ಅಂದ ಮೇಲೆ ಬಚ್ಚನ್ ಅವರನ್ನೇ ನಾನೂ ಅನುಸರಿಸುವುದು ಎಂದರೆ ಅದು ಸಹಜ ನಡೆ ತಾನೇ?

ಹಾಗಿದ್ದಲ್ಲಿ, ಆ ಭಗವಂತನು ನಮ್ಮ-ನಮ್ಮ ಪಾತ್ರಗಳನ್ನು ಅದಲು-ಬದಲು ಮಾಡಿಕೊಳ್ಳುವ ಅವಕಾಶ ಕೊಟ್ಟರೆ, ಅದನ್ನು ಉಪಯೋಗಿಸುವೆನೇನು? ಬಹುಶಃ ಇಲ್ಲ !!

ಏಕೆಂದರೆ, ನನಗೂ ಬಿಗ್ ಬಿಯಷ್ಟು ಯಶಸ್ವಿಯಾಗಬೇಕೆಂಬ ಆಸೆಯಿದ್ದರೂ ನನ್ನ ಪ್ರಕಾರ, ಯಶಸ್ಸು ಎಂದರೆ ದಿನನಿತ್ಯದ ಹೋರಾಟ ಅಥವಾ ಜಂಜಡಗಳಿಲ್ಲದೆಯೇ ಬದುಕುವುದು. ಆದರೆ ವಾಸ್ತವದಲ್ಲಿ ಬಿಗ್ ಬಿ ತಮ್ಮ ಜೀವನದಲ್ಲಿ ಹಲವಾರು ಅಡಚಣೆಗಳನ್ನೆದುರಿಸಿ, ಹೋರಾಡಿ ಈ ಹಂತ ತಲುಪಿದ್ದಾರೆ. ಅವರು ಜೀವನದುದ್ದಕ್ಕೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಅಂತಹ ಗೆಲುವುಗಳೆಲ್ಲಾ ನನ್ನ ಬದುಕಲ್ಲಿರಬೇಕೆಂಬುದು ನನ್ನಾಸೆ. ಆದರೆ ಆ ಸವಾಲುಗಳನ್ನು, ಸೋಲನ್ನು ಎದುರಿಸಲು ನಾನು ಸಿದ್ಧವೇ? ಖಚಿತವಾಗಿ ಹೇಳಲಾರೆ.

ಮೇರು ನಟನ ತಂದೆ ಪ್ರಸಿದ್ಧ ಕವಿ ಹರಿವಂಶರಾಯ್ ಅವರು ಹೇಳುವ ಹಾಗೆ ‘ಎಲ್ಲಿಯವರೆಗೂ ಬದುಕಿರುತ್ತೇವೋ, ಅಲ್ಲಿಯವರೆಗೂ ಹೋರಾಟ ಇದ್ದೇ ಇರುತ್ತದೆ’ (ಜಬ್ ತಕ್ ಜೀವನ್ ಹೈ, ತಬ್ ತಕ್ ಸಂಘರ್ಷ ಹೈ). ಇದು ನಿಜ. ಏಕೆಂದರೆ, ‘ಎಲ್ಲಿಯವರೆಗೂ ಹೋರಾಟ - ಸವಾಲು ಇರುತ್ತದೆಯೋ ಅಲ್ಲಿಯವರೆಗೂ ಜೀವನ ಜೀವನವಾಗಿ ಉಳಿದಿರುತ್ತದೆ’.

1975ರಲ್ಲಿ ಬಿಡುಗಡೆ ಆದ ತಮ್ಮ ‘ದೀವಾರ್’ ಚಿತ್ರದಲ್ಲಿ ಅಮಿತಾಭ್ ಹೇಳುವ ಡೈಲಾಗ್‌ ‘ಮೈ ಲಡ್ತೇ, ಲಡ್ತೇ ಥಕ್ ಗಯಾ ಹ್ಞೂಂ ಮಾ’ (ಹೋರಾಡಿ, ಹೋರಾಡಿ ನನಗೆ ಸುಸ್ತಾಗಿದೆ ಅಮ್ಮ). ಈ ಮಾತು, ನಿಜ ಜೀವನದಲ್ಲಿ ಯಾವುದನ್ನೂ ಬಿಟ್ಟುಕೊಡಲು ಒಪ್ಪದ ಬಚ್ಚನ್ ವ್ಯಕ್ತಿತ್ವದ ತದ್ವಿರುದ್ಧ. ಈ ನಿಜವಾದ ಬಚ್ಚನ್‌ರನ್ನೇ ನಾನು ಯಾವಾಗಲೂ ಅನುಕರಿಸಲು ನೋಡುವುದು.

ಪರಿಪೂರ್ಣವಲ್ಲದ, ನೀರಸವಲ್ಲದ ಮತ್ತು ಸವಾಲುಗಳನ್ನು ಹೊಂದಿರುವ ಜೀವನವನ್ನು ಬದುಕಬೇಕೆಂಬುದು ನನ್ನ ಆಕಾಂಕ್ಷೆಗಳಲ್ಲೊಂದು. ಈ ಪರಿಕಲ್ಪನೆಯನ್ನು ಅಮೆರಿಕದ ಟೆಲಿವಿಷನ್ ಧಾರಾವಾಹಿಯೊಂದರಲ್ಲಿ ಸಮರ್ಪಕವಾಗಿ ವಿವರಿಸಿದ್ದಾರೆ.

ಸ್ವರ್ಗವೆಂದರೇನು? 'ಒಮ್ಮೆ ಹೋಗಿ ಭೇಟಿ ಕೊಡಬಹುದಾದ ಒಂದು ಸೊಗಸಾದ ಜಾಗ’. ಇದು, ಏಪ್ರಿಲ್ 15, 1960ರಲ್ಲಿ ಪ್ರಸಾರವಾದ ‘ಟ್ವೈಲೈಟ್ ಝೋನ್’ ಧಾರಾವಾಹಿಯ ಕಥೆಯೊಂದರ ಶೀರ್ಷಿಕೆ.

ಈ ಶೀರ್ಷಿಕೆಗೆ ಜನಪ್ರಿಯ ಆಡುಮಾತು ‘ಒಮ್ಮೆ ಭೇಟಿ ಕೊಡಬಹುದಾದ ಸೊಗಸಾದ ಜಾಗ, ಆದರೆ ಅಲ್ಲೇ ಜೀವನ ಸಾಗಿಸಲು ನಾನೊಲ್ಲೆ’ ಎಂಬುದು ಪ್ರೇರಣೆ. ಏಕೆ? ಅದೊಂದು ಸೊಗಸಾದ ಜಾಗವಾಗಿದ್ದರೆ ಅಲ್ಲೇಕೆ ಜೀವನ ನಡೆಸಲು ಒಲ್ಲೆ? ತೀರಾ ಚೆನ್ನಾಗಿರುವುದು ನೀರಸವೂ ಹೌದು ಎಂಬುದಕ್ಕೇನೋ.

ಬದುಕಿನ ಕುರಿತು ನನಗೂ ಇದೇ ರೀತಿಯ ಅಭಿಪ್ರಾಯವಿದೆ. ತಪ್ಪುಗಳನ್ನು ಮಾಡುವೆನೇನೋ, ಅಭದ್ರತೆ ಕಾಡಿ, ತಾಳ್ಮೆ ಕಳೆದುಕೊಂಡು ಕೊನೆಗೆ ಸುಸ್ತಾಗುವೆನೋ ಏನೋ. ಆದರೆ ನಾನು ಹೋರಾಡುವುದನ್ನು ನಿಲ್ಲಿಸದೆ ಮುಂದಕ್ಕೆ ಹೆಜ್ಜೆಯಿಡುತ್ತೇನೆ. ನಿಜ ಜೀವನದಲ್ಲಿ ಅಮಿತಾಭ್ ಬಚ್ಚನ್ ಇರುವಂತೆ ಇರುತ್ತೇನೆ.

ಎ ನೈಸ್ ಪ್ಲೇಸ್ ಟು ವಿಸಿಟ್'...

ಟ್ವೈಲೈಟ್ ಝೋನ್ ಧಾರಾವಾಹಿಯ ಈ ಕಂತಿನ ಕಥೆ ಹೀಗಿದೆ– ನಾಯಕ ಹೆನ್ರಿ ವ್ಯಾಲಂಟೈನ್‌ಗೆ ತನ್ನ ಬದುಕು ಬರೀ ಸವಾಲುಗಳಿಂದ ತುಂಬಿದೆಯೆಂದು ಆಗಾಗ ಅನಿಸುವುದುಂಟು. ಒಮ್ಮೆ ಕಳ್ಳತನ ಮಾಡುವಾಗ ಪೋಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಗುಂಡೇಟು ತಿಂದು ಸಾಯುತ್ತಾನೆ.

ಪರಲೋಕದಲ್ಲಿ ಇವನು ತನ್ನನ್ನು ಕಾಯುವ ದೇವತೆಯೆಂದೇ ನಂಬಿರುವ ಪಿಪ್ ಎಂಬ ವೃದ್ಧನು ವ್ಯಾಲಂಟೈನ್‌ನನ್ನು ಒಂದು ಸೊಗಸಾದ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಇವನು ಬಯಸಿದುದೆಲ್ಲವನ್ನೂ ಒದಗಿಸಿ ಕೊಡುತ್ತಾನೆ. ವ್ಯಾಲಂಟೈನ್ನಾದರೋ ಎಲ್ಲ ರೀತಿಯಿಂದಲೂ ಪಾಪಿಷ್ಟ. ಆದರೂ, ಆ ದೇವರೇ ತನಗೆ ಸ್ವರ್ಗವನ್ನು ದಯಪಾಲಿಸಿರುವಾಗ ತಾನಾದರೂ ಅದರ ಬಗ್ಗೆ ಏಕೆ ಚರ್ಚೆ, ವಾದ ಮಾಡಬೇಕೆಂಬ ಧೋರಣೆಯುಳ್ಳವನು.

ಕೆಲ ಸಮಯದ ಬಳಿಕ ಆತನಿಗೆ, ತಾನು ಬಯಸಿದುದೆಲ್ಲವನ್ನೂ, ತನ್ನಿಂದ ಯಾವುದೇ ಪ್ರಯತ್ನವನ್ನೂ ಮಾಡಿಸದೆ ಈಡೇರಿಸುವ ತನ್ನ ಈ ‘ಸ್ವರ್ಗ’ ನೀರಸವೆನಿಸತೊಡಗುತ್ತದೆ. ವೃದ್ಧ ಪಿಪ್ ಬಳಿ ಬಂದು ತಾನು ‘ಆ ಇನ್ನೊಂದು ಜಾಗ’ಕ್ಕೆ ಹೋಗಬೇಕು ಎನ್ನುತ್ತಾನೆ. ಪ್ರತಿಯಾಗಿ ಪಿಪ್ ಉತ್ತರಿಸುತ್ತಾನೆ, ‘ಸ್ವರ್ಗ’? ಮಿಸ್ಟರ್ ವ್ಯಾಲಂಟೈನ್, ನಿನಗೆ ಯಾರು ಇದನ್ನು ಸ್ವರ್ಗವೆಂದು ಹೇಳಿದ್ದು? ಇದೇ ನಿನ್ನ 'ಆ ಇನ್ನೊಂದು ಜಾಗ’..!!

ಇದರಿಂದ ಆಘಾತಗೊಂಡ ವ್ಯಾಲಂಟೈನ್ ಅಲ್ಲಿಂದ ಓಡಿ ಹೋಗಲು ವಿಫಲ ಯತ್ನ ನಡೆಸುತ್ತಾನೆ. ಅವನ ಈ ಗೋಳಾಟವನ್ನು ನೋಡಿ ಪಿಪ್ ನಗಲಾರಂಭಿಸುತ್ತಾನೆ.

ಮುಕ್ತಾಯದ ನಿರೂಪಣೆ ಹೀಗಿದೆ: ‘ಹೆದರಿ, ಕ್ರುದ್ಧನಾಗಿರುವ ಈ ಚಿಕ್ಕ ಮನುಷ್ಯನಿಗೆ ಒಂದೂ ಉತ್ತಮ ಅವಕಾಶ ದೊರೆಯಲಿಲ್ಲ. ಈಗ ಅವನ ಬಳಿ ಅವನು ಇಷ್ಟ ಪಟ್ಟಿದ್ದೆಲ್ಲವೂ ಉಂಟು. ಆದರೆ ಇವನು ಶಾಶ್ವತವಾಗಿ ಅವುಗಳ ಜೊತೆಯೇ ಈ ಸಂಧಿಕಾಲದ ಪರಿಮಿತಿಯಲ್ಲಿ ಬದುಕಬೇಕು’.

(ಲೇಖಕರು ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ಗಾಯಕ) ಕನ್ನಡಕ್ಕೆ: ಜಯಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT