ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮದಲ್ಲಿ ಪ್ರೀತಿಯ ಬೆಳಗು

Last Updated 17 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗ ಮತ್ತು ಮಳೆಗೂ ಬಿಡಿಸಲಾಗದ ನಂಟು. ಕಥೆಯ ವಿವಿಧ ಮೂಡ್‌ಗಳನ್ನು ಕಟ್ಟಿಕೊಡುವ ಹಾದಿಯಲ್ಲಿ ಮಳೆಯನ್ನು ರೂಪಕವಾಗಿ ಬಳಸಲಾಗುತ್ತದೆ. ಆದರೆ, ಮಳೆ ಮತ್ತು ಹಿಮವನ್ನು ಬಳಸಿಕೊಂಡು ಸಿನಿಮಾ ನಿರ್ಮಿಸಿರುವುದು ಅಪರೂಪ. ಚಲ ನಿರ್ದೇಶನದ ‘ಅಂದವಾದ’ ಚಿತ್ರ ಇವೆರಡರ ಹದವಾದ ಪಾಕವಂತೆ.

ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿ ಇಡುತ್ತಿದ್ದಾರೆ ಚಲ. ಮೊದಲ ಸಿನಿಮಾದಲ್ಲಿಯೇ ಮಳೆ ಮತ್ತು ಹಿಮವನ್ನು ಬಳಸಿಕೊಂಡು ಪ್ರೇಕ್ಷಕರಿಗೆ ಹೊಸ ಅನುಭವ ಕಟ್ಟಿಕೊಡುವ ಉತ್ಸಾಹ ಅವರದು. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ಅ. 25ರಂದು ಸಿನಿಮಾ ತೆರೆ ಕಾಣಲಿದೆ. ಇದರ ಪೂರ್ವಭಾವಿಯಾಗಿ ಚಿತ್ರತಂಡ ಟ್ರೇಲರ್‌ ಬಿಡುಗಡೆಯ ಸಮಾರಂಭ ಹಮ್ಮಿಕೊಂಡಿತ್ತು.

ತುಂಬಾ ಹಸಿದ ಹುಡುಗನೊಬ್ಬನಿಗೆ ಕೊನೆಯ ಊಟವಾಗಿ ಕಾಫಿ ಕೊಟ್ಟಂತೆ ಈ ಸಿನಿಮಾ ಮಾಡಿದ್ದೇವೆ. ಮುಂದೆ ಎಷ್ಟು ಚಿತ್ರಗಳನ್ನು ಮಾಡುತ್ತೇವೋ, ಇಲ್ಲವೊ ಅದು ಗೊತ್ತಿಲ್ಲ. ಆದರೆ, ಈಗ ಮಾಡಿರುವ ಈ ಸಿನಿಮಾ ಸಾಕಷ್ಟು ತೃಪ್ತಿ ಮತ್ತು ಖುಷಿ ನೀಡಿದೆ ಎಂದರು.‘ಚಿತ್ರದಲ್ಲಿನ ಪಾತ್ರಗಳಿಗೂ ಮತ್ತು ಚಿತ್ರೀಕರಣ ಮಾಡಿರುವ ಮಳೆ, ಮಂಜಿಗೂ ತುಂಬಾ ಕನೆಕ್ಟ್‌ ಆಗಲಿದೆ. ನಾನೊಬ್ಬಳು ಪರಿಸರ ಪ್ರೇಮಿಯಾಗಿ ಈ ಚಿತ್ರವನ್ನು ತುಂಬಾ ಖುಷಿಯಿಂದ ನಿರ್ಮಿಸಿದ್ದೇನೆ’ ಅನುಭವ ಹಂಚಿಕೊಂಡರು ನಿರ್ಮಾಪಕಿ ಡಿ.ಆರ್‌. ಮಧು.

ಸಂಗೀತ ನಿರ್ದೇಶಕವಿಕ್ರಮ್ ವರ್ಮನ್, ‘ಇದು ನನಗಂತೂ ತುಂಬಾ ವಿಶೇಷ ಚಿತ್ರ. ಚಿತ್ರದಲ್ಲಿ ಒಂಬತ್ತು ಹಾಡುಗಳಿವೆ.ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಹೃದಯ ಶಿವ ಅವರ ಗೀತ ಸಾಹಿತ್ಯ ಎಲ್ಲರಿಗೂ ಇಷ್ಟವಾಗಲಿದೆ.ಚಿತ್ರದ ಹಾಡುಗಳನ್ನು ತಮಿಳುನಾಡಿನಲ್ಲೂ ಸಂಗೀತ ಪ್ರಿಯರು ಇಷ್ಟಪಟ್ಟಿದ್ದಾರೆ’ಮಾಹಿತಿ ನೀಡಿದರು.

ನಾಯಕ ಜೈ ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲಿ ಅವರದು ವಿದ್ಯಾರ್ಥಿಯ ಪಾತ್ರ. ‘ಚಲ ಅವರ ಜತೆಗೆ ಪ್ರೊಡಕ್ಷನ್‌ ವಿಭಾಗದ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಈ ಚಿತ್ರದ ಕಥೆಯ ನಾಯಕನ ಪಾತ್ರಕ್ಕೆನಾನೇ ಸೂಕ್ತ ಆಯ್ಕೆಯೆಂದು ನನಗೆ ಅಭಿನಯಿಸುವ ಅವಕಾಶ ನೀಡಿದ್ದಾರೆ. ಈ ಪಾತ್ರಕ್ಕಾಗಿ ಹತ್ತು ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಾಲೀಮು ನಡೆಸಿದ್ದೇನೆ’ ಎಂದು ಹೇಳಿಕೊಂಡರು.ನಾಯಕಿ ಅನುಷಾ ರಂಗನಾಥ್, ‘ಚಿತ್ರದಲ್ಲಿ ನಾನು ಮುಗ್ಧೆ ಹೌದೊ ಅಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ, ನಾಯಕನಿಗೆ ಸದಾ ಸುಳ್ಳು ಹೇಳಿ ನಂಬಿಸಿ ಆಟ ಆಡಿಸುವಂತಹ ಹುಡುಗಿ’ ಎಂದು ನಕ್ಕರು.ಹರೀಶ್ ಎನ್. ಸೊಂಡೇಕೊಪ್ಪ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT