ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಗೆ ಗ್ಲಾಮರ್ ಮುಖ್ಯವಲ್ಲ, ಪಾತ್ರ ಮುಖ್ಯ: ಅನಿತಾ ಭಟ್

Last Updated 8 ಮೇ 2020, 3:16 IST
ಅಕ್ಷರ ಗಾತ್ರ

ಅನಿತಾ ಭಟ್ ಅವರು ತಮಗೆ ಗ್ಲಾಮರ್‌ ಬಗ್ಗೆ ಅಷ್ಟೇನೂ ಮೋಹ ಇಲ್ಲ ಎಂದು ಎಷ್ಟೇ ಹೇಳಿದರೂ, ಚಂದನವನದಲ್ಲಿ ಅವರ ಹೆಸರಿನ ಜೊತೆ ಗ್ಲಾಮರ್‌ ಅಂಟಿಕೊಂಡೇ ಇರುತ್ತದೆ. ಅನಿತಾ ಅಭಿನಯಿಸಿರುವ ನಾಲ್ಕು ಹೊಸ ಸಿನಿಮಾಗಳ ಕೆಲಸಗಳು ಬಹುಪಾಲು ಪೂರ್ಣಗೊಂಡಿವೆ.

ಅನಿತಾ ಅಭಿನಯಿಸಿರುವ ‘ಬೆಂಗಳೂರು 69’, ‘ಕನ್ನೇರಿ’, ‘ಕಲಿವೀರ’ ಸಿನಿಮಾಗಳು ಬಿಡುಗಡೆಯ ಹಂತದ ಸಮೀಪ ಬಂದಿವೆ. ‘ಡಿಎನ್‌ಎ’ ಎಂಬ ಸಿನಿಮಾದಲ್ಲಿ ಇವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಡಿಎನ್‌ಎ ಚಿತ್ರದ ಕಥೆಯು ನನ್ನ ಪಾತ್ರ ಇಲ್ಲದೆ ಮುಂದುವರಿಯುವುದಿಲ್ಲ. ನನ್ನ ಪಾತ್ರವು ತೆರೆಯ ಮೇಲೆ ಜಾಸ್ತಿ ಹೊತ್ತು ಕಾಣಿಸಿಕೊಳ್ಳುವುದಿಲ್ಲ. ಆದರೂ ಈ ಪಾತ್ರ ಬಹಳ ಮುಖ್ಯ’ ಎಂದರು ಅನಿತಾ.

‘ಕನ್ನೇರಿ ಚಿತ್ರದಲ್ಲಿ ನಾನು ನೆಗೆಟಿವ್ ಪಾತ್ರ ನಿಭಾಯಿಸಿದ್ದೇನೆ. ಇದು ಒಂದು ರೀತಿಯಲ್ಲಿ ವ್ಯಾಂಪ್‌ನಂತಹ ಪಾತ್ರ’ ಎಂದು ತಿಳಿಸಿದರು. ‘ಬೆಂಗಳೂರು 69’ ಚಿತ್ರದಲ್ಲಿ ಅನಿತಾ ಅವರದ್ದು ಪ್ರಮುಖ ಪಾತ್ರ. ಇದು ಇಬ್ಬರು ಹುಡುಗರು ಹಾಗೂ ಒಬ್ಬಳು ಹುಡುಗಿಯ ನಡುವಿನ ಕಥೆ. ಹಾಗಂತ ಇದು ತ್ರಿಕೋನ ಪ್ರೇಮಕಥೆ ಅಲ್ಲ. ಇದರಲ್ಲಿ ಇರುವುದು ಕ್ರೈಂ ಥ್ರಿಲ್ಲರ್ ಕಥೆ.

‘ಕಲಿವೀರ’ ಚಿತ್ರದಲ್ಲಿ ಇವರು ಲೇಡಿ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಒಂದಿಷ್ಟು ಫೈಟ್‌ಗಳನ್ನೂ ಮಾಡಿದ್ದಾರಂತೆ. ಪಾತ್ರವು ಸೂಚಿಸುವಂತೆ ಇದು ಆ್ಯಕ್ಷನ್ ಸಿನಿಮಾ. ಇದರಲ್ಲೂ ಅನಿತಾ ಅವರದ್ದು ಪ್ರಮುಖ ಪಾತ್ರ.

‘ಇಷ್ಟನ್ನು ಹೊರತುಪಡಿಸಿದರೆ, ಮಾತುಕತೆ ಹಂತದಲ್ಲಿ ಎರಡು ಸಿನಿಮಾಗಳು ಇವೆ. ಒಂದು ಸಿನಿಮಾದ ಟ್ರೈಲರ್ ಶೂಟಿಂಗ್ ಆಗಿದೆ. ಕೊರೊನಾ ಕಾರಣದಿಂದ ಸಿನಿಮಾದ ಇತರ ಕೆಲಸಗಳು ಮುಂದಕ್ಕೆ ಹೋಗಿವೆ. ಒಂದೆರಡು ವೆಬ್ ಸರಣಿಗಳಲ್ಲಿ ನಟಿಸುವ ಅವಕಾಶ ಬಂದಿದೆ. ಒಂದು ವೆಬ್‌ ಸರಣಿ ತೆಲುಗಿನಲ್ಲಿ ಸಿದ್ಧವಾಗಲಿದೆ. ಒದು ಕನ್ನಡಕ್ಕೆ ಕೂಡ ಡಬ್ ಆಗಬಹುದು. ತೆಲುಗಿನಲ್ಲಿ ಒಂದು ಸಿನಿಮಾ ಆಫರ್ ಬಂದಿದೆ. ಲಾಕ್‌ಡೌನ್‌ ಆಗದೆ ಇದ್ದಿದ್ದರೆ ಒಂದರ ಹಿಂದೆ ಒಂದರಂತೆ ಒಂದಿಷ್ಟು ಅವಕಾಶಗಳು ತೆರೆದುಕೊಳ್ಳುತ್ತಿದ್ದವು’ ಎಂದು ಅನಿತಾ ಹೇಳಿದರು.

ಗ್ಲಾಮರ್ ಎಷ್ಟಿದೆ?

‘ಈ ಎಲ್ಲ ಸಿನಿಮಾಗಳಲ್ಲಿ ನಿಮ್ಮ ಪಾತ್ರಗಳಲ್ಲಿ ಗ್ಲಾಮರ್‌ ಎಷ್ಟಿದೆ’ ಎಂದು ಪ್ರಶ್ನಿಸಿದಾಗ, ‘ಗ್ಲಾಮರ್‌ ಏನೂ ಇಲ್ಲ. ಡಿಎನ್‌ಎ ಚಿತ್ರದಲ್ಲಿ ಗ್ಲಾಮರ್ ಇಲ್ಲ. ಆದರೆ ಅದರಲ್ಲಿ ನಾನು ಸುಂದರವಾಗಿ ಕಾಣಿಸಿಕೊಂಡಿದ್ದೇನೆ. ಕನ್ನೇರಿಯಲ್ಲಿ, ಕಲಿವೀರದಲ್ಲಿ ಗ್ಲಾಮರ್ ಇಲ್ಲ. ಬೆಂಗಳೂರು 69 ಚಿತ್ರದಲ್ಲಿ ಒಂದಿಷ್ಟು ಗ್ಲಾಮರ್ ಇದೆ’ ಎಂದು ಉತ್ತರಿಸಿದರು.

‘ನನಗೆ ವಾಸ್ತವದಲ್ಲಿ ಗ್ಲಾಮರ್ ಮುಖ್ಯವಲ್ಲ. ಹಾಗಂತ ಗ್ಲಾಮರ್ ಬಗ್ಗೆ ತಕರಾರು ಕೂಡ ಇಲ್ಲ. ನಾನು ನಿಭಾಯಿಸುವ ಪಾತ್ರಕ್ಕೆ ಏನು ಅಗತ್ಯವೋ ಅದನ್ನು ನಾನು ಮಾಡುತ್ತೇನೆ. ಪಾತ್ರ ಇಷ್ಟವಾದರೆ ಮಾತ್ರ ಅದನ್ನು ನಿಭಾಯಿಸುತ್ತೇನೆ. ನನಗೆ ನಾಯಕಿ ಆಗುವುದಕ್ಕಿಂತಲೂ ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯ ಇದೆ ಎಂಬುದು ಹೆಚ್ಚು ಮುಖ್ಯ. ನಾನು ಸಾಮಾನ್ಯವಾಗಿ ಇತರ ನಟಿಯರು ಮಾಡಿದ್ದಕ್ಕಿಂತ ಹೆಚ್ಚಿನ ಗ್ಲಾಮರ್ ಇರುವ ಪಾತ್ರವನ್ನೇನೂ ನಿಭಾಯಿಸಿದ್ದಿಲ್ಲ. ಆದರೆ, ವಿದ್ಯಾ ಬಾಲನ್‌ ಅವರಂತೆ ಡರ್ಟಿ ಪಿಚ್ಚರ್‌ನಂತಹ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ಅದನ್ನು ಖಂಡಿತ ನಿಭಾಯಿಸುವೆ’ ಎಂದರು.

‘ನನಗೆ ಪಾತ್ರಗಳ ವಿಚಾರದಲ್ಲಿ ಕೂಡ ನಿರ್ದಿಷ್ಟ ಅಪೇಕ್ಷೆಗಳು ಇಲ್ಲ. ಆದರೆ ಒಳ್ಳೆಯ ಪಾತ್ರಗಳು ಬೇಕು ಎಂಬ ಆಸೆ ಇದೆ. ಕಥೆಯಲ್ಲಿ ಆ ಪಾತ್ರಕ್ಕೆ ಅದರದೇ ಆದ ಮಹತ್ವ ಇರಬೇಕು. ಗುಂಪಿನಲ್ಲಿ ಗೋವಿಂದ ಎನ್ನುವಂತಹ ಪಾತ್ರ ಮಾಡಲು ಇಷ್ಟವಿಲ್ಲ. ಹಾಗೆ ನೋಡಿದರೆ, ನನಗೆ ಇದುವರೆಗೆ ಸಿಕ್ಕಿರುವ ಪಾತ್ರಗಳು ಚೆನ್ನಾಗಿಯೇ ಇವೆ. ಇಷ್ಟರವರೆಗೆ ಸಿಕ್ಕ ಎಲ್ಲಾ ಪಾತ್ರಗಳು ನನಗೆ ತೃಪ್ತಿ ಕೊಟ್ಟಿವೆ ಎಂದೂ ನಾನು ಹೇಳಲಾರೆ’ ಎಂದು ತಮ್ಮ ಪಾತ್ರಗಳ ಬಗ್ಗೆ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT