ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಿಕೊಂಬನ್‌ | ಇದು ಅಕ್ಕಿಕಳ್ಳನ ಕಥೆ!

Published 1 ಜೂನ್ 2023, 21:05 IST
Last Updated 1 ಜೂನ್ 2023, 21:05 IST
ಅಕ್ಷರ ಗಾತ್ರ

ಇವನು ಅಕ್ಕಿಕಳ್ಳ! ಇವನ ಊರು ಕೇರಳದ ಇಡುಕ್ಕಿ ಜಿಲ್ಲೆಯ ದೇವಿಕುಳಂ ಅರಣ್ಯ ಪ್ರದೇಶ. ಇವನಿಗೆ ಅಮ್ಮ ಇಲ್ಲ. ಕಾಲಿಗೆ ಗಾಯ ಆಗಿ, ಅದು ವಾಸಿಯಾಗದೆ ತೀರಿಹೋದಳು. ಇದೆಲ್ಲಾ 1987ರ ಸುಮಾರಿಗೆ ನಡೆದ ಕಥೆ. ಅಂದಹಾಗೆ, ಇವನ ಹೆಸರು ಅರಿಕೊಂಬನ್‌ (ಅರಿ ಎಂದರೆ ಅಕ್ಕಿ, ಕೊಂಬನ್‌ ಎಂದರೆ ದೊಡ್ಡ ಗ್ರಾತದ ಆನೆ).

ತಾಯಿ ತೀರಿಹೋದಾಗ ಇವನಿಗೆ ಒಂದೂವರೆ ವರ್ಷ. ದೇವಿಕುಳಂ ಅರಣ್ಯ ಪ್ರದೇಶದ ಚಿನ್ನಕನಲ್‌ನಲ್ಲಿ ಇರುವ ಮುತ್ತುಕಂಡ್‌ ಏಲಕ್ಕಿ ಎಸ್ಟೇಟ್‌ನ ಬಳಿ ಮೊದಲು ಇವನು ಇವನ ತಾಯಿಯ ಜೊತೆ ಕಾಣಿಸಿಕೊಂಡ. ಆಗ ಆತನ ತಾಯಿಯ ಕಾಲಿಗೆ ಗಾಯವಾಗಿತ್ತು. ಈ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದವರು, ಬುಡಕಟ್ಟು ಜನರು ಸೇರಿ ಇವನ ತಾಯಿಯ ಆರೈಕೆ ಮಾಡಿದರು. ಮೂರು ತಿಂಗಳ ಆರೈಕೆಯ ಬಳಿಕವೂ ತಾಯಿ ಬದುಕುಳಿಯಲಿಲ್ಲ. ನಂತರ ಇವನ ಓಡಾಟ ಚಿನ್ನಕನಲ್‌ ಪ್ರದೇಶಕ್ಕೆ ಸೀಮಿತವಾಯಿತು.

ಆಗಿಂದ ಇವನನ್ನು ಈ ಪ್ರದೇಶದ ಸುತ್ತಮುತ್ತಲಿನ ಬುಡಕಟ್ಟು ಜನರೇ ನೋಡಿಕೊಳ್ಳುತ್ತಿದ್ದರು ಎನ್ನಬಹುದು. ಇವನಿಗೆ ಅಕ್ಕಿಆನೆ ಎಂದು ಹೆಸರಿಟ್ಟಿದ್ದೂ ಇವರೇ. ಅಂದಹಾಗೆ ಇದು ಅವನಿಗೆ ಇಟ್ಟಿರುವ ಎರಡನೇ ಹೆಸರು. ಮೊದಲು ಅವರನ್ನು ಕಳ್ಳಕೊಂಬನ್‌ (ಕಳ್ಳಆನೆ) ಎನ್ನುತ್ತಿದ್ದರು. ಈ ಹೆಸರು ಬಂದ ಕಥೆಯೂ ಕುತೂಹಲಕಾರಿಯೇ ಸರಿ.

ಇವನು ಸಣ್ಣವನಿದ್ದಾಗ ಈ ಪ್ರದೇಶದಲ್ಲಿ ಅಷ್ಟೇನು ಜನವಸತಿ ಇರಲಿಲ್ಲ. ಭಾರಿ ವಿರಳ ಮನೆಗಳು. ಅದು ಯಾವ ತರದ್ದು ಎಂದರೆ ಬಿದಿರು ಮತ್ತು ಹುಲ್ಲಿನಿಂದ ಕಟ್ಟಿದವು. ಇವನಿಗೊ ಅದು ಇದು ಕದಿಯುವ ಚಟ. ತನ್ನ ಸೊಂಡಿಲು ಹಾಕಿ ಸಿಕ್ಕಿದ್ದೆಲ್ಲ ಕದಿಯುತ್ತಿದ್ದ. ಅದಕ್ಕೆ ಕಳ್ಳಾನೆ ಎಂದು ಹೆಸರು ಬಂದದ್ದು.

ಅರಣ್ಯದ ತುಂಬೆಲ್ಲಾ ಇದ್ದ ಬುಡಕಟ್ಟು ಜನರನ್ನು ಸೇರಿಸಿ ಸರ್ಕಾರ ಒಂದು ಕಾಲೊನಿ ಮಾಡಿತು. ಇವು ಕಾಂಕ್ರಿಟ್‌ ಮನೆಗಳು. ಅಲ್ಲಿ ಇಲ್ಲಿ ಓಡಾಡುತ್ತಾ, ಅದು ಇದು ಕದಿಯುತ್ತಿದ್ದ ಇವನು ಅಕ್ಕಿ ಕದಿಯಲು ಆರಂಭಿಸಿದ. ಅವನಿಗೆ ಅಕ್ಕಿ ಹುಚ್ಚು ಎಷ್ಟು ಹತ್ತಿತೆಂದರೆ, ಅಕ್ಕಿ ಕದಿಯುವುದನ್ನೇ ಚಾಳಿ ಮಾಡಿಕೊಂಡ. ಪಡಿತರ ಅಂಗಡಿಗೆ ನುಗ್ಗಿದ, ಜನರನ್ನು ಪೀಡಿಸಲು ಆರಂಭಿಸಿದ. ಅಲ್ಲಿವರೆಗೆ ಜನರೊಂದಿಗೆ ಹೊಂದಿಕೊಂಡಿದ್ದ ಇವನು, ಒಮ್ಮೆಲೆ ರೋಷಭರಿತನಾದ. 

ಇವನ ದಾಳಿಗೆ ಸುಮಾರು 10 ಜನರು ಪ್ರಾಣತೆತ್ತರು. ಸುಮಾರು 300 ಮನೆಗಳು ಧ್ವಂಸಗೊಂಡವು. ಜನರೂ ಈಗ ಆಕ್ರೋಶಗೊಂಡರು. ದಿನ ಬೆಳಗಾದರೆ, ಇವನ ಮುಖ ನೋಡುತ್ತಿದ್ದ ಜನರು, ಈಗ ಇವನು ಕಾಣಿಸಿಕೊಂಡರೆ ಸಂಕಟಪಡುವ ಹಂತ ತಲುಪಿದರು. ಇವನು ನಮಗೆ ಬೇಡ, ಬೇರೆ ಎಲ್ಲಾದರೂ ಕಳುಹಿಸಿ ಎಂದು ಜನರು ಪ್ರತಿಭಟನೆ ಶುರುವಿಟ್ಟರು.

ಇದು ಕೇರಳ ಹೈಕೋರ್ಟ್‌ವರೆಗೂ ತಲುಪಿತು. ನಂತರ ಸರ್ಕಾರ ಇವನ ಹುಡುಕಾಟಕ್ಕೆ ತಂಡ ನೇಮಿಸಿತು. ಇವನನ್ನು ಹಿಡಿದು, ಪಾಲಕ್ಕಾಡ್‌ ಜಿಲ್ಲೆಯ ಪರಂಬಿಕುಳಂ ಹುಲಿ ಸಂರಕ್ಷಿತ ಅರಣ್ಯಕ್ಕೆ ಬಿಡುವುದಕ್ಕೆ ನಿರ್ಧರಿಸಿದರು. ಇಷ್ಟರಲ್ಲಾಗಲೇ  ಇವನು ಕೇರಳದಲ್ಲೆಲ್ಲ ಪ್ರಸಿದ್ಧನಾಗಿದ್ದ. ಪರಂಬಿಕುಳಂ ಸುತ್ತಮುತ್ತಲಿನ ಜನರು ಇವನು ನಮಗೂ ಬೇಡ ಎಂದು ಕೂಗಿಟ್ಟರು. ಕೊನೆಗೆ ಇವನನ್ನು  ಕೇರಳ–ತಮಿಳುನಾಡು ಗಡಿಯಲ್ಲಿರುವ ತಮಿಳುನಾಡಿಗೆ ಸೇರಿದ ಪೆರಿಯಾರ್‌ ಹುಲಿ ಸಂರಕ್ಷಿತಾರಣ್ಯಕ್ಕೆ ಬಿಡುವುದಕ್ಕೆ ನಿರ್ಧಾರವಾಯಿತು. ಹೈಕೋರ್ಟ್‌ ಇವನ ಸ್ಥಳಾಂತರಕ್ಕೆ ಸಮ್ಮತಿಯನ್ನೂ ನೀಡಿತು.

ಗಡಿ ಪ್ರದೇಶವಾದ್ದರಿಂದ ತಮಿಳುನಾಡಿನಲ್ಲಿಯೂ ಪರಿಚಿತನಾಗಿದ್ದ ಇವನ ಆಗಮವನ್ನು ಅಲ್ಲಿನ ಜನ ವಿರೋಧಿಸಿದರು. ಆದರೂ, ಇವನ ಆಗಮನದ ದಿನ ಅಕ್ಕಿಕೊಟ್ಟೇ ಆತನನ್ನು ಸಂಭ್ರಮದಿಂದ ಸ್ವಾಗತಿಸಿದರು. ಇದು ಆಗಿದ್ದು ಏಪ್ರಿಲ್‌ ಕೊನೇ ವಾರದಲ್ಲಿ.

ಇವನಿಗೊ ಕಾಡಿನೊಳಗೆ ಇದ್ದು ಅಭ್ಯಾಸ ಇಲ್ಲ. ಏನು ಮಾಡುವುದು ಮತ್ತೆ, ಮೇ 27ರ ಹೊತ್ತಿಗೆ ಇವನು ಕುಂಬಂ ಪ್ರದೇಶದಲ್ಲಿ ಕಾಣಿಸಿಕೊಂಡ. ಸುತ್ತಮುತ್ತಲಿನ ಜನರನ್ನು ಬೆದರಿಸಿದ. ಒಬ್ಬರನ್ನು ಗಾಯಗೊಳಿಸಿದ. (ಇವರು ಮೃತಪಟ್ಟರು). ಇಲ್ಲಿಂದಲೂ ಇವನನ್ನು ಬೇರೆಡೆ ಕಳುಹಿಸಬೇಕು ಎಂಬ ಕೂಗು ಈಗ ಎದ್ದಿದೆ. ಕುಂಬಂನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇನ್ನಷ್ಟು ಜನರನ್ನು ಹಿಂಸಿಸದಂತೆ ತಡೆಯಲು 35 ವರ್ಷದ ಇವನ್ನು ಹಿಡಿಯಲು ತಮಿಳುನಾಡು ಸರ್ಕಾರ ಕಾರ್ಯಾಚರಣೆ ಆರಂಭಿಸಿದೆ.

ಆಮೇಲೆ ಇವನಿಗೆ ಕೇರಳದಲ್ಲಿ ಹಲವಾರು ಅಭಿಮಾನಿ ಸಂಘಗಳೂ ಇವೆ. ಕೇರಳದ ಬೀದಿಗಳಲ್ಲಿ ಇವನ ಫೋಟೊ ಹಾಕಿಕೊಂಡ ಹಲವು ಕಟ್‌ಔಟ್‌ಗಳು ಕಾಣಸಿಗುತ್ತವೆ.

ಈಗ ಇವನ ಲಗ್ಗೆ ಸಿನಿಮಾ ಕಡೆ

ಬಾದುಶಾ ಸಿನಿಮಾ ಮತ್ತು ಪೆನ್‌ ಆ್ಯಂಡ್‌ ಪೇಪರ್‌ ಕ್ರಿಯೇಷನ್ಸ್‌ ಅನ್ನುವ ಬ್ಯಾನರ್‌ ಅಡಿ ‘ಅರಿಕೊಂಬನ್‌’ ಎನ್ನುವ ಸಿನಿಮಾ ಸಿದ್ಧವಾಗುತ್ತಿದೆ. ಸಾಜಿದ್‌ ಯಾಹಿಯಾ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಆಧಾರ: ಬಿಬಿಸಿ, ಮಾತೃಭೂಮಿ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT