ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಿನವೂ ಕೆಲಸ ಮಾಡದ ಅತುಲ್!

Last Updated 15 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನಟ ಅತುಲ್ ಕುಲಕರ್ಣಿ ಅವರು ಅಭಿನಯ ವೃತ್ತಿ ಪ್ರವೇಶಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಂದಿದೆ. ಅವರು ಹಲವು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗಿದ್ದರೂ, ಅವರ ಅಭಿನಯ ತಾಜಾ ಅನಿಸುತ್ತದೆ. ‘ಇದಕ್ಕೆ ಕಾರಣ ಏನು’ ಎನ್ನುವ ಪ್ರಶ್ನೆಗೆ, ‘ನಾನು ಪ್ರತಿದಿನವೂ ಅಭಿನಯಿಸುವುದಿಲ್ಲ. ಅದೇ ಕಾರಣ’ ಎಂದು ಉತ್ತರಿಸುತ್ತಾರೆ ಅತುಲ್!

ಅತುಲ್ ಅವರು ವೃತ್ತಿ ಆರಂಭಿಸಿದ ಸಂದರ್ಭದಿಂದಲೇ, ‘ನಾನು ಪ್ರತಿದಿನವೂ ಅಭಿನಯದ ಕೆಲಸ ಮಾಡಲಾರೆ’ ಎಂದು ತೀರ್ಮಾನಿಸಿದ್ದರಂತೆ.

‘ರಂಗ್‌ ದೆ ಬಸಂತಿ’, ‘ಚಾಂದನಿ ಬಾರ್’, ‘ನಟರಂಗ್’ ಚಿತ್ರಗಳು ಅತುಲ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಸಿನಿಮಾಗಳು. ಕನ್ನಡದಲ್ಲಿ ಈಚೆಗೆ ತೆರೆಗೆ ಬಂದ ‘ಅಳಿದು ಉಳಿದವರು’ ಚಿತ್ರದಲ್ಲಿ ಕೂಡ ಅತುಲ್ ನಟಿಸಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ಪ್ರತಿದಿನವೂ ಇರುವುದು ಸರ್ವಸ್ವ ಎಂದು ಅತುಲ್ ಎಂದೂ ಭಾವಿಸಲಿಲ್ಲ. ಜೀವನದ ಅನುಭವಗಳನ್ನು ಪಡೆದುಕೊಳ್ಳಲಿಕ್ಕೂ ಒಂದಿಷ್ಟು ಸಮಯ ಮೀಸಲಿಡಬೇಕು ಎನ್ನುವುದು ಅವರ ಬದುಕಿನ ಸೂತ್ರ.

‘ಪ್ರತಿದಿನವೂ ಕೆಲಸ ಮಾಡುವ ವ್ಯಕ್ತಿ ನಾನಲ್ಲ ಎಂಬ ಷರತ್ತನ್ನು ನಾನು ವೃತ್ತಿಯ ಆರಂಭದ ದಿನಗಳಿಂದಲೂ ವಿಧಿಸಿಕೊಂಡಿದ್ದೆ. ಒಬ್ಬ ನಟನಾಗಿ ನಾವು ನಿರಂತರವಾಗಿ ಏನನ್ನಾದರೂ ಕೊಡುತ್ತ ಇರಬೇಕು. ಹಾಗಾಗಿ, ಒಂದಿಷ್ಟು ಕಲಿಯುವುದಕ್ಕೂ ಸಮಯ ಹೊಂದಿಸಿಕೊಳ್ಳಬೇಕಾಗುತ್ತದೆ. ಯಾವುದೇ ಭಾಷೆಯ ಅಥವಾ ಯಾವುದೇ ರೀತಿಯ ಕೆಲಸ ನನಗೆ ಇಷ್ಟವಾದರೆ ಮಾತ್ರ ಅದನ್ನು ಮಾಡುತ್ತೇನೆ’ ಎಂದು ಅತುಲ್ ಹೇಳುತ್ತಾರೆ.

‘ಜನ ನನ್ನನ್ನು ಚೂಸಿ ಎಂದು ಕರೆದರೂ ಅಡ್ಡಿಯಿಲ್ಲ. ನಾನು ಮಾತ್ರ ನನಗೆ ಸೂಕ್ತವಾಗುವ ಪಾತ್ರ ಬರುವವರೆಗೂ ಕಾಯುತ್ತ ಇರುತ್ತೇನೆ. ನನಗೆ ಈ ವೃತ್ತಿ ಸಾಕು ಎಂದು ಅನಿಸಿಲ್ಲ. ಸೆಟ್‌ಗೆ ಹೋಗುವುದು, ನಟನೆ ಮಾಡುವುದು ನನಗೆ ದಣಿವಿನ ಕೆಲಸ ಎಂದು ಅನಿಸಿಲ್ಲ. ನನಗೆ ಖುಷಿ ಕೊಡುವುದನ್ನು ಮಾತ್ರ ನಾನು ಮಾಡುವ ಕಾರಣ, ನನ್ನಲ್ಲಿ ತಾಜಾತನ ಉಳಿದುಕೊಂಡಿರುತ್ತದೆ’ ಎಂದು ಅವರು ತಿಳಿಸುತ್ತಾರೆ.

ಅತುಲ್ ಅವರು ತೀರಾ ಈಚೆಗೆ ನಟಿಸಿರುವ ‘ದಿ ರಾಯ್ಕರ್ ಕೇಸ್’ ಕಾರ್ಯಕ್ರಮವು ವೂಟ್ ಸೆಲೆಕ್ಟ್ ಒಟಿಟಿ ವೇದಿಕೆಯ ಮೂಲಕ ಪ್ರಸಾರ ಆಗುತ್ತಿದೆ. ಅತುಲ್ ಅವರು ‘ಸಿಟಿ ಆಫ್ ಡ್ರೀಮ್ಸ್’ ವೆಬ್ ಸರಣಿಯಲ್ಲೂ ನಟಿಸಿದ್ದಾರೆ. ಕಾಲ ಮತ್ತು ತಂತ್ರಜ್ಞಾನದ ಜೊತೆ ಹೆಜ್ಜೆಹಾಕುವುದು ಮುಖ್ಯ ಎಂದು ಅವರು ಹೇಳುತ್ತಾರೆ.

‘ಕಲಾವಿದನಾಗಿ ನಾನು ನನ್ನ ತುದಿಗಾಲ ಮೇಲೆ ನಿಂತು ಹೊಸ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು. ವೆಬ್ ಸರಣಿಗಳಲ್ಲಿ ಬರವಣಿಗೆಯಿಂದ ಆರಂಭಿಸಿ, ಕಥೆ ಹೇಳುವ ವಿಧಾನದವರೆಗೆ ಎಲ್ಲವೂ ಹೊಸದು. ಹೊಸದು ಬಂದಾಗ ನಾವು ಅದಕ್ಕೆ ಒಗ್ಗಿಕೊಳ್ಳಬೇಕು. ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ’ ಎಂದರು.

ಅತುಲ್ ಅವರು ತಮ್ಮ ಮುಂದೆ ಹೊಸ ಸ್ಕ್ರಿಪ್ಟ್‌ ಬಂದಾಗ, ಅದನ್ನು ವೀಕ್ಷಕನಾಗಿ ಕೇಳಿಸಿಕೊಳ್ಳುತ್ತಾರಂತೆ. ಆಗ ಅವರಿಗೆ ಅದರಲ್ಲಿ ಆಸಕ್ತಿ ಮೂಡಿದರೆ ಮಾತ್ರ, ಆ ಸ್ಕ್ರಿಪ್ಟ್‌ ಒಪ್ಪಿಕೊಂಡು ನಟನೆಗೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT