ಶುಕ್ರವಾರ, ಅಕ್ಟೋಬರ್ 18, 2019
20 °C

ಡಾಲಿ ಧನಂಜಯ್ ಸಿನಿಮಾ 'ಬಡವ ರಾಸ್ಕಲ್‌'

Published:
Updated:

‘ದುನಿಯಾ’ ಸೂರಿ ನಿರ್ದೇಶನದ ‘ಟಗರು’ ಸಿನಿಮಾದ ‘ಡಾಲಿ’ ಪಾತ್ರ ನಟ ಧನಂಜಯ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತು. ಇದರಿಂದ ಉತ್ತೇಜಿತರಾದ ಅವರು ತಮ್ಮ ಬ್ಯಾನರ್‌ಗೂ ಡಾಲಿ ಪಿಕ್ಚರ್ಸ್‌ ಎಂದೇ ಹೆಸರಿಟ್ಟಿದ್ದಾರೆ. ಅದೇ ಬ್ಯಾನರ್‌ನಡಿ ‘ಬಡವ ರಾಸ್ಕಲ್‌’ ಎಂಬ ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಅವರ ಜೊತೆಗೆ ಗುಜ್ಜಲ್‌ ಟಾಕೀಸ್‌ನ ಗುಜ್ಜಲ್‌ ಪುರುಷೋತ್ತಮ್‌ ಬಂಡವಾಳ ಹೂಡಿದ್ದಾರೆ.

‘ಬಡವ ರಾಸ್ಕಲ್‌’ ಎಂಬುದು ಬೈಗುಳ. ಚಿತ್ರದ ನಾಯಕನಿಗೆ ಎಲ್ಲರೂ ಈ ರೀತಿ ಬೈಯುತ್ತಿರುತ್ತಾರೆ. ಆದರೆ, ಪ್ರತಿಯೊಬ್ಬ ಯುವಕನಿಗೂ ಒಂದು ಹಂತದವರೆಗೆ ಕೆಟ್ಟ ಸಮಯ ಇರುತ್ತದೆ. ಆ ಅವಧಿಯಲ್ಲಿ ಆತ ಮನೆಯವರನ್ನು ಎದುರು ಹಾಕಿಕೊಳ್ಳುತ್ತಾನೆ. ಪೊರ್ಕಿಗಳ ಜೊತೆಗೆ ಸೇರಿಕೊಂಡು ರಂಪಾಟ ನಡೆಸುವುದೇ ಅವನ ನಿತ್ಯದ ಕಾಯಕ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಈ ಚಿತ್ರದ ಕಥಾಹಂದರ. 

ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಶಂಕರ್‌ ಗುರು. ಇದು ಅವರ ಮೊದಲ ಚಿತ್ರವೂ ಹೌದು.

ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿ ಇತ್ತೀಚೆಗೆ ಸಿನಿಮಾದ ಸಾಹಸ ಸನ್ನಿವೇಶದ ಶೂಟಿಂಗ್‌ ನಡೆಯಿತು. ಧನಂಜಯ್ ಹಾಗೂ ಸಾಹಸ ಕಲಾವಿದರು ನಟಿಸಿದ ಈ ಸನ್ನಿವೇಶಕ್ಕೆ ವಿನೋದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಅಕ್ಟೋಬರ್‌ 12ರಿಂದ 20 ದಿನಗಳ ಕಾಲ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದ ನಾಲ್ಕು ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ.

ಅಮೃತಾ ಅಯ್ಯಂಗಾರ್ ಅವರು ಧನಂಜಯ್‌ಗೆ ನಾಯಕಿ. ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್, ಚಂದ್ರು ತಾರಾಗಣದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಡಾಲಿ’ಯ ಮನಸಲ್ಲಿ ಹೊಸತನದ ಗಾಳಿ

Post Comments (+)