ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನಲ್ಲಿ ಬನ್ಸಾಲಿ ಹವಾ ಜೋರು

Last Updated 30 ಅಕ್ಟೋಬರ್ 2019, 6:34 IST
ಅಕ್ಷರ ಗಾತ್ರ

ಸಂಜಯ್‌ಲೀಲಾ ಬನ್ಸಾಲಿ ಹೊಸ ಸಿನಿಮಾ ಶುರುಮಾಡುವ ಸುಳಿವು ಸಿಕ್ಕರೆ ಸಾಕು, ಬಿ–ಟೌನ್‌ ಗಾಳಿಯಲ್ಲಿ ಹತ್ತು ನೂರು ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡಲು ಶುರುವಾಗುತ್ತದೆ. ಕಥೆ ಯಾವುದು? ನಾಯಕ–ನಾಯಕಿ ಯಾರು? ಎಂಬೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಬನ್ಸಾಲಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ.

ಈಗ ಮತ್ತೆ ಬಾಲಿವುಡ್‌ನಲ್ಲಿ ಬನ್ಸಾಲಿ ಹವಾ ಜೋರಾಗಿ ಬೀಸುತ್ತಿದೆ. ಈ ಸಲ ಒಂದಲ್ಲ, ಎರಡು ಸಿನಿಮಾಗಳನ್ನು ಘೋಷಿಸಿ, ಸಂಜಯ್‌ ಲೀಲಾ ಬನ್ಸಾಲಿ ತಮ್ಮ ಅಭಿಮಾನಿಗಳನ್ನು ಕುತೂಹಲದ ಸೂಜಿಗಲ್ಲ ಮೇಲೆ ನಿಲ್ಲಿಸಿದ್ದಾರೆ.

ಸದ್ಯಕ್ಕೆ ಸುದ್ದಿಯಲ್ಲಿರುವುದು ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ.ಗಂಗೂಬಾಯಿ ಪಾತ್ರದಲ್ಲಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿರುವುದೂ ಜಾಹೀರಾಗಿದೆ.ಈ ಸಿನಿಮಾ, ಪತ್ರಕರ್ತ ಹುಸೇನ್ ಝೈದಿ ಬರೆದ ‘ಕ್ವೀನ್ಸ್ ಆಫ್ ಮುಂಬೈ’ ಎಂಬ ಪುಸ್ತಕವನ್ನು ಆಧರಿಸಿದೆ. 60ರ ದಶಕದಲ್ಲಿ ಮುಂಬೈನ ಪ್ರಭಾವಿ ಮಹಿಳೆ ಎನಿಸಿಕೊಂಡಿದ್ದ, ‘ಕಾಮಾಟಿಪುರದ ಮೇಡಂ’ ಎಂದೇ ಕರೆಸಿಕೊಳ್ಳುತ್ತಿದ್ದ ಗಂಗೂಬಾಯಿಯ ಬದುಕನ್ನು ಆಧರಿಸಿದ ಸಿನಿಮಾ ಇದು.

ಈ ಸಿನಿಮಾ ಕೆಲಸಗಳು ನಡೆಯುತ್ತಿರುವ ಹಾಗೆಯೇ ಬನ್ಸಾಲಿ ‘ಬೈಜು ಬಾವ್ರಾ’ ಎಂಬ ಇನ್ನೊಂದು ಸಿನಿಮಾವನ್ನೂ ಘೋಷಿಸಿದ್ದಾರೆ.ಮೊಘಲ್‌ ಚಕ್ರವರ್ತಿ ಅಕ್ಬರ್‌ನ ಕಾಲದಲ್ಲಿ ಇದ್ದ ದ್ರುಪದ ಶೈಲಿಯ ಸಂಗೀತಗಾರ ಬೈಜುನಾಥ್ ಬಾವ್ರಾ ಎಂಬ ಅಸಾಧಾರಣ ಪ್ರತಿಭಾವಂತನ ಬದುಕನ್ನು ‘ಬೈಜು ಬಾವ್ರಾ’ ಎಂಬ ಹೆಸರಿನಲ್ಲಿ ತೆರೆಯ ಮೇಲೆ ತರಲು ಬನ್ಸಾಲಿ ನಿರ್ಧರಿಸಿದ್ದಾರಂತೆ. ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ಮುಗಿಸಿ 2021ರಲ್ಲಿ ಈ ಸಿನಿಮಾ ಕೈಗೆತ್ತಿಕೊಳ್ಳುವುದಾಗಿ ಬನ್ಸಾಲಿ ಹೇಳಿದ್ದಾರೆ.

ಈಗ ಬಿ ಟೌನ್‌ ಗಲ್ಲಿಗಳಲ್ಲಿ ಮತ್ತೆ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿರುವುದು ಈ ಎರಡೂ ಸಿನಿಮಾಗಳ ತಾರಾಗಣದ ಕುರಿತು. ಕಳೆದ ವಾರ ಬನ್ಸಾಲಿ, ಅಜಯ್‌ ದೇವಗನ್ ಅವರನ್ನು ಭೇಟಿಯಾಗಿ ತಮ್ಮ ಮುಂದಿನ ಸಿನಿಮಾಗಳ ಕುರಿತು ಚರ್ಚಿಸಿದ್ದರು. ತಮ್ಮ ‘ಬೈಜು ಬಾವ್ರಾ’ ಸಿನಿಮಾದಲ್ಲಿ ಪಾತ್ರ ವಹಿಸುವಂತೆ ಅಜಯ್‌ ದೇವಗನ್ ಅವರನ್ನು ಬನ್ಸಾಲಿ ಕೇಳಿಕೊಂಡಿದ್ದಾರೆ; ಅದಕ್ಕೆ ಅಜಯ್ ಒಪ್ಪಿಕೊಂಡಿದ್ದಾರೆ ಎಂಬ ಗಾಳಿಸುದ್ದಿಯೂ ಹರಿದಾಡಿತ್ತು. ಅಜಯ್ ದೇವಗನ್, ತಾನ್‌ಸೇನನ ಪಾತ್ರದಲ್ಲಿ ನಟಿಸುತ್ತಾರೆ ಎಂದೂ ಊಹಿಸಲಾಗಿತ್ತು. ಆದರೆ ಇತ್ತೀಚೆಗಿನ ವರದಿಯ ಪ್ರಕಾರ ಇದು ಸುಳ್ಳು.

ದೇವಗನ್ ಅವರನ್ನು ಬನ್ಸಾಲಿ ಭೇಟಿಯಾಗಿದ್ದು ‘ಬೈಜು ಬಾವ್ರಾ’ ಸಿನಿಮಾದಲ್ಲಿ ನಟಿಸುವಂತೆ ಕೇಳಲು ಅಲ್ಲ, ಬದಲಿಗೆ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾದಲ್ಲಿ ಅಲಿಯಾ ಭಟ್ ಜೊತೆ ನಟಿಸುವ ಆಫರ್ ನೀಡಲು ಎಂದು ಹೇಳಲಾಗುತ್ತಿದೆ. 20 ವರ್ಷಗಳ ನಂತರ ಈ ಚಿತ್ರದ ಮೂಲಕ ಅಜಯ್ ಮತ್ತು ಬನ್ಸಾಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾದಲ್ಲಿ ಅಜಯ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಗಂಗೂಬಾಯಿಗೆ ಮುಂಬೈ ಭೂಗತಲೋಕದ ದೊರೆಗಳ ಸಂಪರ್ಕ ಇತ್ತು. ಆ ಶಕ್ತಿಯ ಬಲದಿಂದಲೇ ಅವಳು ಮೆರೆದಾಡಿದ್ದು. ಅವಳಿಗೆ ಬೆಂಬಲವಾಗಿ ನಿಂತ ಭೂಗತದೊರೆಯ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಚಿತ್ರತಂಡಗಳ ಮೂಲಗಳೇ ಖಚಿತಪಡಿಸಿರುವ ಸುದ್ದಿ.

ಹಾಗಾದರೆ ‘ಬೈಜು ಬಾವ್ರಾ’ ಸಿನಿಮಾದ ಕಥೆ ಏನು? ಅದಕ್ಕೆ ಬನ್ಸಾಲಿ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ? ಈ ಪ್ರಶ್ನೆಗೂ ಉತ್ತರದ ಸುಳಿವುಗಳು ಹರಿದಾಡುತ್ತಿವೆ. ಒಂದು ಮೂಲದ ಪ್ರಕಾರ ಬನ್ಸಾಲಿ ತಮ್ಮ ಫೆವರೆಟ್ ನಟ ರಣವೀರ್ ಸಿಂಗ್ ಅವರಿಗೆ ಬೈಜು ಬಾವ್ರಾ ವೇಷ ತೊಡಿಸಲಿದ್ದಾರೆ. ‘ಪದ್ಮಾವತ್’ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಕ್ಕಸನಂತೆ ಮೆರೆದಾಡಿದ್ದ ರಣವೀರ್ ಸಿಂಗ್, ಈ ಚಿತ್ರದಲ್ಲಿ ಸಂಗೀತ ಆರಾಧಿಸುವ ಬಡ ಬ್ರಾಹ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಅಪ್ಪನಿಗೆ ನೀಡಿದ ವಚನದ ಪ್ರಕಾರ, ತಾನ್‌ಸೇನನ ವಿರುದ್ಧ ಸಂಗೀತ ಜುಗಲ್ಬಂದಿಯಲ್ಲಿ ಸ್ಪರ್ಧಿಸುವ ಛಲದಂಕ ಸಂಗೀತಗಾರ ಬೈಜುನಾಥ್. ಸಂಗೀತದ ಆರಾಧನೆ, ದ್ವೇಷ, ಹಟ, ಪ್ರೇಮ, ವಿರಹ ಎಲ್ಲವೂ ಎರಕ ಹೊಯ್ದಂತಿರುವ ಈ ಪಾತ್ರಕ್ಕೆ ರಣವೀರ್ ಅಲ್ಲದೇ ಇನ್ಯಾರು ನ್ಯಾಯ ಒದಗಿಸಬಲ್ಲರು ಎಂಬುದು ಬಿ ಟೌನ್ ಗಾಳಿಕಟ್ಟೆಯಲ್ಲಿ ಪದೇ ಪದೆ ಕೇಳಿಬರುತ್ತಿರುವ ಮಾತು.

ಅದೇನೇ ಇರಲಿ. ಎರಡು ಚಿತ್ರಗಳ ಮೂಲಕ ತೆರೆಗೆ ಬರಲು ಸಜ್ಜಾಗಿರುವ ಬನ್ಸಾಲಿ ಮುಂದಿನ ವರ್ಷ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸುವುದಂತೂ ಖಚಿತ. ಪುರಾಣ ಮತ್ತು ಇತಿಹಾಸದಿಂದಲೇ ಎತ್ತಿಕೊಂಡ ಪಾತ್ರಗಳನ್ನು ಇಟ್ಟುಕೊಂಡು ಈ ಎರಡೂ ಸಿನಿಮಾ ರೂಪಿಸುತ್ತಿರುವ ಬನ್ಸಾಲಿ, ವಿವಾದಗಳನ್ನು ಎದುರಿಸಲೂ ಮಾನಸಿಕವಾಗಿ ಸಜ್ಜಾಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT