‘ಬಜಾರ್‌’ನಲ್ಲಿ ಪಾರಿವಾಳಗಳ ರೇಸ್‌: ನಿರ್ದೇಶಕ ಸಿಂಪಲ್‌ ಸುನಿ

7

‘ಬಜಾರ್‌’ನಲ್ಲಿ ಪಾರಿವಾಳಗಳ ರೇಸ್‌: ನಿರ್ದೇಶಕ ಸಿಂಪಲ್‌ ಸುನಿ

Published:
Updated:

ನಗರ, ಗ್ರಾಮೀಣ ಭಾಗದಲ್ಲಿ ಇಂದಿಗೂ ಪಾರಿವಾಳದ ಜೂಜು ನಡೆಯುತ್ತದೆ. ಮುಂಜಾನೆಯೇ ನಿರ್ದಿಷ್ಟ ಸ್ಥಳದಲ್ಲಿ ಜೂಜಿಗೆ ಸಜ್ಜಾಗಿರುವ ಪಾರಿವಾಳಗಳನ್ನು ಗಗನಕ್ಕೆ ಹಾರಿಬಿಡಲಾಗುತ್ತದೆ. ಅವುಗಳು ದೀರ್ಘಕಾಲ ಹಾರಾಟ ನಡೆಸಿದ ಬಳಿಕ ಅಂತಿಮವಾಗಿ ಸೂಚಿಸಿದ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಇದರ ಆಧಾರದ ಮೇಲೆ ಗೆಲುವು ನಿರ್ಧಾರವಾಗುತ್ತದೆ. ಹಾರಾಟಕ್ಕೆ ಬಿಟ್ಟ ಪಾರಿವಾಳಗಳು ಗಿಡುಗ, ಹದ್ದಿನ ಬಾಯಿಗೆ ತುತ್ತಾಗುವುದೂ ಇದೆ. 

‘ಬಜಾರ್’ ಚಿತ್ರದಲ್ಲಿ ಪಾರಿವಾಳಗಳ ರೇಸ್‌ ಸುತ್ತ ಕಥೆ ಹೊಸೆಯಲಾಗಿದೆ. ಸಿನಿಮಾ ಈ ಶುಕ್ರವಾರ ತೆರೆಕಾಣುತ್ತಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಪಾರಿವಾಳದ ರೇಸ್ ಕುರಿತು ಸಿನಿಮಾ ನಿರ್ಮಾಣವಾಗಿಲ್ಲ’ ಎಂದು ಹೇಳಿದರು ನಿರ್ದೇಶಕ ಸಿಂಪಲ್‌ ಸುನಿ.

ಕುದುರೆ ಓಡಿಸುವವನಿಗೆ ಜಾಕಿ ಎನ್ನುತ್ತಾರೆ. ಪಾರಿವಾಳ ಸಾಕುವವನಿಗೆ ಶೋಕ್ದಾರ್ ಎಂದು ಕರೆಯಲಾಗುತ್ತದೆ. ಚಿತ್ರದಲ್ಲಿ ಪಾರಿವಾಳದ ಸ್ಪರ್ಧೆಯ ಜೊತೆಗೆ ಭೂಗತಲೋಕ, ಪ್ರೀತಿ ಎಲ್ಲವೂ ಮಿಳಿತವಾಗಿದೆಯಂತೆ. ನಾಯಕನ ಬದುಕಿನಲ್ಲಿ ನಾಯಕಿ ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ಕಥಾಹಂದರ.

‘ತರಬೇತಿ ಪಡೆದ ಹಾಗೂ ರೇಸ್‌ನಲ್ಲಿ ಭಾಗವಹಿಸಿದ ಪಾರಿವಾಳಗಳನ್ನು ಚಿತ್ರೀಕರಣದಲ್ಲಿ ಬಳಸಲಾಗಿದೆ. ಅವುಗಳ ವರ್ತನೆಯು ಉಳಿದ ಪಕ್ಷಿಗಳಂತೆ ಇರುವುದಿಲ್ಲ. ತುಂಬಾ ಮೂಡಿಯಾಗಿರುತ್ತವೆ. ಅದಕ್ಕಾಗಿ ಹೆಣ್ಣು ಪಾರಿವಾಳವನ್ನು ಹತ್ತಿರ ಬಿಟ್ಟು ಚಿತ್ರೀಕರಣ ನಡೆಸಲಾಯಿತು. ಲೈಟ್ ಬಳಸದೆ ಕೃತಕ ಬೆಳಕಿನಲ್ಲಿ ಶೂಟಿಂಗ್‌ ನಡೆಸಲಾಗಿದೆ. ಈ ವಾರ ಬಜಾರ್‌ನಲ್ಲಿ ಜನಗಳ ಮುಂದೆ ಬಿಡಲಾಗುತ್ತದೆ’ ಎಂದು ನಕ್ಕರು ಸುನಿ. 

ಧನ್‌ವೀರ್ ಈ ಚಿತ್ರದ ನಾಯಕ. ಸಿನಿಮಾ ಅವರಿಗೆ ಹೊಸದು. ಬಾಲ್ಯದಲ್ಲಿಯೇ ರಂಗಭೂಮಿಯೊಂದಿಗೆ ನಂಟು ಬೆಳೆಸಿಕೊಂಡಿದ್ದು ಈಗ ಅವರಿಗೆ ನಟನೆಗೆ ಸಹಕಾರಿಯಾಗಿದೆಯಂತೆ. 

‘ಒಂದು ಹಾಡಿಗೆ ಸಿಕ್ಸ್‌ಪ್ಯಾಕ್‌ನ ಅಗತ್ಯವಿತ್ತು. ನಿರ್ದೇಶಕರು ಹೇಳಿದಂತೆ ಕಸರತ್ತು ನಡೆಸಿ ದೇಹ ದಂಡಿಸಿದೆ. ಕಲ್ಕಿ ಹೆಸರಿನ ಅನಾಥ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಧನ್‌ವೀರ್.

ಅದಿತಿ ಪ್ರಭುದೇವ್‌ ನಾಯಕಿಯಾಗಿ ನಟಿಸಿದ್ದಾರೆ. ಅವರದು ಮಧ್ಯಮ ವರ್ಗದ ಹುಡುಗಿಯ ಪಾತ್ರ. ಶರತ್‌ ಲೋಹಿತಾಶ್ವ, ಸಾಧುಕೋಕಿಲ, ದಿಲೀಪ್ ತಾರಾಗಣದಲ್ಲಿದ್ದಾರೆ. ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ತಿಮ್ಮೇಗೌಡ ಬಂಡವಾಳ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !