ಸೋಮವಾರ, ಮಾರ್ಚ್ 27, 2023
21 °C

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ– ಚಿತ್ರಗಳ ಆಯ್ಕೆಗೆ ಅಪಸ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಗಳ ಆಯ್ಕೆ ಪ್ರಕ್ರಿಯೆ ಸಂಬಂಧಿಸಿ ಕೆಲವು ನಿರ್ದೇಶಕರ ವಲಯದಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯ ಮಾನದಂಡಗಳು ಪಾಲನೆ ಆಗುತ್ತಿಲ್ಲ ಎಂಬ ಅಪಸ್ವರ ಕೇಳಿಸಿದೆ. 

ಚಿತ್ರೋತ್ಸವವು ಮಾರ್ಚ್‌ 23ರಿಂದ 30ರವರೆಗೆ ನಡೆಯಲಿದೆ.

‘ಚಿತ್ರವೊಂದು ಆಯ್ಕೆಯಾಗಬೇಕಾದರೆ ಸಾಕಷ್ಟು ಪ್ರಭಾವ ಬೀರಬೇಕಾಗುತ್ತದೆ. ಪ್ರತಿಭಾವಂತ, ಹೊಸ ನಿರ್ದೇಶಕರ ಚಿತ್ರಗಳನ್ನು ಪರಿಗಣಿಸಿಲ್ಲ. ಯಾವುದೇ ಹೊಸ ಪ್ರಯೋಗಗಳಿಗೆ, ಗುಣಮಟ್ಟಕ್ಕೆ ಇಲ್ಲಿ ಅವಕಾಶವಿಲ್ಲ. ನಾವು ಹೇಳಿದ್ದೇ ಅಂತಿಮ’ ಎಂಬುದು ಇವರ ನೀತಿ ಎಂದು ‘ಟಾರ್ಚು’ ಚಿತ್ರದ ನಿರ್ದೇಶಕ ವೀರನಾರಾಯಣ (ನಾರಾಯಣ ಸ್ವಾಮಿ) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘‘ಟಾರ್ಚು’ ಚಿತ್ರಕ್ಕೆ ಚಿತ್ರೀಕರಣ ಸ್ಥಳದಲ್ಲೇ ಧ್ವನಿಮುದ್ರಣ ನಡೆದಿದೆ. ಸಿಂಕ್‌ ಸೌಂಡ್‌ ಬಳಸಿರುವ ಅಪರೂಪದ ಸಿನಿಮಾವಿದು. ಆ ಚಿತ್ರವನ್ನೂ ಕೈಬಿಡಲಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.  

‘ದೃಶ್ಯ ನಿರೂಪಣೆಯ ಜ್ಞಾನ ಇರುವ, ವಿಶ್ವಸಿನಿಮಾಗಳಿಗೆ ತೆರೆದುಕೊಂಡ, ಯಾವುದೇ ಒತ್ತಡಕ್ಕೆ ಮಣಿಯದ ಸಿನಿಮಾ ತಜ್ಞರನ್ನು ತೀರ್ಪುಗಾರರ ಸಮಿತಿಗೆ ನೇಮಿಸಬೇಕು. ಅವರು ಎಲ್ಲ ಚಿತ್ರಗಳನ್ನು ವೀಕ್ಷಿಸಿ ಅಂತಿಮ ಆಯ್ಕೆಗೆ ಶಿಫಾರಸು ಮಾಡಬೇಕು. ಇದ್ಯಾವುದೂ ಪಾಲನೆ ಆಗಿಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಅಶೋಕ್‌ ಕಶ್ಯಪ್‌ ಸ್ಪಷ್ಟನೆ

‘ಚಿತ್ರೋತ್ಸವಕ್ಕೆ 300 ಚಿತ್ರಗಳು ಬಂದಿವೆ. ಪ್ರತಿಯೊಂದು ಚಿತ್ರವನ್ನೂ ಸಾವಕಾಶವಾಗಿ ವೀಕ್ಷಿಸಿಯೇ ತಜ್ಞರ ತಂಡ ಅಂತಿಮ ಆಯ್ಕೆ ಮಾಡಿದೆ. ಚಿತ್ರಗಳು ಪ್ರದರ್ಶನಗೊಂಡಿರುವುದು, ನಿರ್ದಿಷ್ಟ ತೀರ್ಪುಗಾರರು ವೀಕ್ಷಿಸಿರುವ ಪೂರ್ಣ ದಾಖಲೆಗಳು ನಮ್ಮಲ್ಲಿವೆ. ಚಿತ್ರಗಳ ಆಯ್ಕೆಯಲ್ಲಿ ನನ್ನ ಯಾವುದೇ ಹಸ್ತಕ್ಷೇಪ ಇಲ್ಲ. ಈ ಹಿಂದೆ ‘ತಲೆದಂಡ’ದಂತಹ ನನ್ನದೇ ಚಿತ್ರವನ್ನು ಈ ಅಂತರರಾಷ್ಟ್ರೀಯ ಚಿತ್ರೋತ್ಸವದಿಂದ ದೂರ ಇಟ್ಟಿದ್ದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ಸ್ಪಷ್ಟಪಡಿಸಿದರು.

‘43 ವರ್ಷಗಳ ಸಿನಿಮಾ ಕ್ಷೇತ್ರದ ಅನುಭವವನ್ನು ಬಳಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರೋತ್ಸವವನ್ನು ಆಯೋಜಿಸಿದ್ದೇವೆ. ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಚಿತ್ರೋತ್ಸವ ನಡೆಸುವುದೇ ಅಸಾಧ್ಯ ಎಂಬ ಸ್ಥಿತಿ ಇತ್ತು. ಅಂಥ ಪರಿಸ್ಥಿತಿಯಲ್ಲೂ ಆಯೋಜಿಸಿದ್ದೇವೆ. 106 ಕನ್ನಡ ಚಿತ್ರಗಳ ಪ್ರವೇಶ ಬಂದಿತ್ತು. ನಮ್ಮಲ್ಲಿ 36 ಚಿತ್ರಗಳಿಗೆ ಮಾತ್ರ ಅವಕಾಶ ಇದೆ. ತೀರ್ಪುಗಾರರು ಮತ್ತು ತಜ್ಞರ ಅಭಿಪ್ರಾಯದ ಪ್ರಕಾರ ಪ್ರದರ್ಶನದಿಂದ ಹೊರಗುಳಿದ ಚಿತ್ರಗಳ ನಿರ್ಮಾಪಕ, ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸುವುದು, ತಮ್ಮ ಚಿತ್ರಗಳನ್ನು ಸಮರ್ಥಿಸುವುದು ಸಹಜವೇ ಆಗಿದೆ. ಅಕಾಡೆಮಿ ಎಲ್ಲ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಿದೆ. ಬೇಕಿದ್ದರೆ ಅಕಾಡೆಮಿಗೆ ಭೇಟಿ ನೀಡಿ ಪರಿಶೀಲಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಬರೆದರೆ, ಅಲ್ಲಿ ಇಲ್ಲಿ ಮಾತನಾಡಿದರೆ ಅದಕ್ಕೆ ಉತ್ತರ ಕೊಡಲಾಗದು’ ಎಂದು ಅಶೋಕ್‌ ಖಾರವಾಗಿಯೇ ಪ್ರತಿಕ್ರಿಯಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು